* ಬೆಳ್ಳಿ ಇಟ್ಟಿಗೆ ನೀಡಿದ ಹರೀಶ್ ಕುಮಾರ್
ಮೈಸೂರು: ಶ್ರೀರಾಮ ಜನ್ಮಭೂಮಿಯಾದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರವನ್ನು ನಿರ್ಮಾಣ ಮಾಡಬೇಕೆಂಬ ನಿಟ್ಟಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಮೈಸೂರಿನಲ್ಲಿ ಸಹಕಾರ ಹಾಗೂ ಜಿಲ್ಲಾ ಉಸ್ತುಚಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಚಾಲನೆ ನೀಡಿದರು. ಖ್ಯಾತ ನ್ಯಾಯವಾದಿ ಹರೀಶ್ ಕುಮಾರ್ ಹೆಗಡೆಯವರು ಬೆಳ್ಳಿ ಇಟ್ಟಿಗೆಯನ್ನು ಉಸ್ತುವಾರಿ ಸಚಿವರ ಮುಖಾಂತರ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಎಲ್. ನಾಗೇಂದ್ರ, ಮುಡಾ ಅಧ್ಯಕ್ಷರಾದ ಎಚ್.ವಿ.ರಾಜೀವ್, ಬಿಜೆಪಿ ನಗರಾಧ್ಯಕ್ಷರಾದ ಶ್ರೀವತ್ಸ, ಮೈಸೂರು ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಬಿ.ಪಿ. ಮಂಜುನಾಥ್, ಬಿಜೆಪಿ ವಿಭಾಗ ಪ್ರಭಾರರಾದ ಮೈ.ವಿ.ರವಿಶಂಕರ್, ಪ್ರಧಾನ ಕಾರ್ಯದರ್ಶಿಗಳಾದ ವಾಣೀಶ್ ಕುಮಾರ್ ಹಾಗೂ ಶಶಿಧರ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಇಂದು ಮೈಸೂರು ಬಿಜೆಪಿ ನಗರಾಧ್ಯಕ್ಷರು, ಸಂಸದರು, ಶಾಸಕರು ಹಾಗೂ ಪದಾಧಿಕಾರಿಗಳು ಮನೆ ಮನೆಗೆ ಹೋಗಿ ದೇಣಿಗೆ ಸಂಗ್ರಹಿಸಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರವನ್ನು ನಿರ್ಮಾಣ ಮಾಡುವ ಅಭಿಯಾನಕ್ಕೆ ಎಲ್ಲರೂ ಕೈಜೋಡಿಸಿದ್ದೇವೆ. ಎಲ್ಲರೂ ಅವರವರ ಕೈಲಾದಷ್ಟು ಸಹಾಯ ಮಾಡಿ ಎಂದು ಮನವಿ ಮಾಡಿದರು.
ವಿಧಾನಪರಿಷತ್ ಸದಸ್ಯರಾದ ಹೆಚ್. ವಿಶ್ವನಾಥ್ ಅವರು ಒಬ್ಬಂಟಿಯಲ್ಲ. ಅವರ ಜೊತೆಗೆ ನಾವೆಲ್ಲರೂ ಇದ್ದೇವೆ. ಅವರನ್ನು ನಾವು ಯಾರೂ ದೂರ ಮಾಡಿಲ್ಲ. ಅವರ ಕರೆಗೆ ನಾವೆಲ್ಲರೂ ಸ್ಪಂದಿಸುತ್ತಿದ್ದೇವೆ. ಸರ್ಕಾರದ ಮಟ್ಟದಲ್ಲಿ ಅವರು ಕೇಳಿದ ಕೆಲಸಗಳನ್ನು ಮಾಡಿಕೊಡುತ್ತಲೂ ಇದ್ದೇವೆ. ಆದರೆ, ಅವರು ತಾವು ಒಬ್ಬಂಟಿ ಎಂದು ಯಾಕೆ ಹೇಳಿದರೋ ಗೊತ್ತಿಲ್ಲ. ಈ ಬಗ್ಗೆ ವಿಶ್ವನಾಥ್ ಅವರ ಜೊತೆ ಮಾತನಾಡುವೆ ಎಂದು ಸಚಿವರಾದ ಸೋಮಶೇಖರ್ ಹೇಳಿದರು.
ಎಲ್ಲರನ್ನೂ ವಿಶ್ವಾಸದಿಂದ ಮಾತನಾಡಿಸುವ ಮುಖ್ಯಮಂತ್ರಿಗಳು; ಸಚಿವ ಎಸ್ ಟಿ ಎಸ್: ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಅವರು ಯಾರನ್ನೂ ದೂರ ಇಡುವವರಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗದುಕೊಂಡು ಹೋಗುತ್ತಿದ್ದಾರೆ. ಅವರ ಮೇಲೆ ಯಾವುದೇ ಆರೋಪ ಮಾಡಿದರೂ ಸುಳ್ಳು. ವಿಶ್ವನಾಥ್ ಯಾಕೆ “ತಮ್ಮನ್ನು ಮುಖ್ಯಮಂತ್ರಿಗಳು ದೂರಮಾಡಿದ್ದಾರೆ” ಎಂದು ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ ಎಂದು ಶ್ರೀರಾಮ ಮಂದಿರಕ್ಕೆ ದೇಣಿಗೆ ಸಂಗ್ರಹ ಅಭಿಯಾನ ಬಳಿಕ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಂಪುಟ ವಿಸ್ತರಣೆಯಿಂದ ಯಾರೂ ಅಸಮಾಧಾನಗೊಂಡಿಲ್ಲ. ಯಾವ ಪ್ರತ್ಯೇಕ ಸಭೆಯೂ ಇಲ್ಲ. ಊಟಕ್ಕೆ ಕರೆದಿದ್ದರೆ ಹೋಗಿರುತ್ತಾರೆ. ಅದು ಬಿಟ್ಟು ಬೇರೆ ಸಭೆಗಳು ನಡೆದಿಲ್ಲ. ಮುಖ್ಯಮಂತ್ರಿಗಳ ಸೂಚನೆಯಂತೆ ಮುಂದಿನ ತಾಲೂಕು ಪಂಚಾಯಿತಿ ಚುನಾವಣೆಗೆ ನಾವೆಲ್ಲರೂ ಕೆಲಸ ಮಾಡುತ್ತಿದ್ದೇವೆ. ಅದು ಬಿಟ್ಟು ಬೇರೆ ವಿಚಾರಗಳು ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಸಚಿವರು ಉತ್ತರಿಸಿದರು.
ಅಕ್ರಮ ಗಣಿಗಾರಿಕೆ ನಡೆಸಿದರೆ ಕ್ರಮ: ಅಕ್ರಮ ಗಣಿಗಾರಿಕೆ ಯಾವುದೇ ಜಿಲ್ಲೆಯಲ್ಲಿ ನಡೆಯುತ್ತಿರಲಿ, ಅದನ್ನು ಸಹಿಸಲಾಗದು ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಅನುಮತಿ ಪಡೆದು ಗಣಿಗಾರಿಕೆ ನಡೆಸಿದರೆ ಸಮಸ್ಯೆಯಾಗದು. ಅದು ಬಿಟ್ಟು ಬೇರೆ ಮಾರ್ಗದಲ್ಲಿ ಹೋದರೆ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.