ಚಾಮರಾಜನಗರ: ಪ್ರಸಕ್ತ ಸಾಲಿಗೆ ಚಾಮರಾಜನಗರಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ವಾಜಪೇಯಿ ವಸತಿ ಯೋಜನೆಯಡಿ ಹೆಚ್ಚುವರಿ ಮನೆಗಳ ನಿರ್ಮಾಣಕ್ಕೆ ಸರಕಾರದಿಂದ ಮಂಜೂರಾತಿ ಮಾಡಿಸಿಕೊಡಬೇಕು ಎಂದು ಚಾಮರಾಜನಗರ ಆಶ್ರಯಸಮಿತಿ ಸದಸ್ಯರು ನಗರದಲ್ಲಿ ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದರು.
ಚಾಮರಾಜನಗರ ನಗರಸಭೆ ವ್ಯಾಪ್ತಿಯಲ್ಲಿ ೩೧ ವಾರ್ಡಿಗಳಿದ್ದು, ಪ್ರತಿವಾರ್ಡಿನಲ್ಲಿ ಫಲಾನುಭವಿಗಳು ಸ್ವಂತಸೂರಿಲ್ಲದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಪ್ರಸಕ್ತ ಸಾಲಿನಲ್ಲಿ ವಸತಿ ಕಲ್ಪಿಸಿಕೊಡುವಂತೆ ಆಗ್ರಹಿಸಿ ನಗರಸಭೆಗೆ ೫೦೦ ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗಿವೆ. ಆದರೆ ನಿಗಧಿಯಾಗಿರುವ ಮನೆಗಳು ೧೦೦ ಮಾತ್ರ. ಇದಲ್ಲದೇ ೨೦೧೬-೧೭ ನೇ ಸಾಲಿನಲ್ಲಿ ವಾಜಪೇಯಿ ವಸತಿ ಯೋಜನೆಯಡಿ ೧೫೦ ಕ್ಕೂ ಹೆಚ್ಚು ಫಲಾನುಭವಿಗಳಿಗೆ ಕೇಂದ್ರಸರಕಾರದ ೧.೫೦ ಲಕ್ಷ ರೂ, ಅನುದಾನ ಬಿಡುಗಡೆಯಾಗಿಲ್ಲ. ೧೦೦ ಮಂದಿ ಫಲಾನುಭವಿಗಳ ಪಟ್ಟಿ ಬ್ಲಾಕ್ ಆಗಿದೆ.
ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಬೇಡಿಕೆ ಪರಿಶೀಲಿಸಿ, ತುರ್ತಾಗಿ ಅನುದಾನ ಬಿಡುಗಡೆ ಮಾಡಿಸಲು ಕ್ರಮವಹಿಸಬೇಕು, ಅಂಬೇಡ್ಕರ್ ಹಾಗೂ ವಾಜಪೇಯಿ ವಸತಿ ಯೋಜನೆಯಡಿ, ಚಾಮರಾಜನಗರಕ್ಕೆ ೫೦೦ ಮನೆಗಳ ನಿರ್ಮಾಣಕ್ಕೆ ಸರಕಾರದಿಂದ ಮಂಜೂರಾತಿ ಕೊಡಿಸಿಕೊಡಬೇಕು ಎಂದು ಚಾಮರಾಜನಗರ ಆಶ್ರಯ ಸಮಿತಿ ನಾಮನಿರ್ದೇಶಿತ ಸದಸ್ಯರಾದ ಶಿವಕುಮಾರ್, ಭೃಂಗೇಶ್, ಜಯಶ್ರೀ, ಪ್ರೇಮಾಚಂದ್ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಕೇಂದ್ರಪರಿಹಾರ ಸಮಿತಿ ಅಧ್ಯಕ್ಷ ಎಂ.ರಾಮಚಂದ್ರ, ಸಚಿವರ ವಿಶೇಷ ಕರ್ತವ್ಯಾಧಿಕಾರಿ ಸ್ವಾಮಿ ಹಾಜರಿದ್ದರು.