ಚಾಮರಾಜನಗರ: ಜಿಲ್ಲಾಡಳಿತ ವತಿಯಿಂದ ಎಲ್ಲರ ಸಹಕಾರದೊಂದಿಗೆ ಭಾರತರತ್ನ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ರವರ ೧೩೧ನೇ ಜಯಂತಿ ಹಾಗೂ ಹಸಿರು ಕ್ರಾಂತಿ ಹರಿಕಾರ ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನರಾಮ್ ರವರ ೧೧೫ ನೇ ಜಯಂತಿಯನ್ನು ಜಿಲ್ಲೆಯಲ್ಲಿ ಅದ್ದೂರಿಯಾಗಿ ಆಚರಿಸಲು ತೀರ್ಮಾನ ತೆಗೆದುಕೊಳ್ಳಲಾಯಿತು. 
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ ಅವರ ಅಧ್ಯಕ್ಷತೆಯಲ್ಲಿ ಹಾಗೂ ವಿವಿಧ ಸಂಘಟನೆಗಳ ಮುಖಂಡರು, ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಏಪ್ರಿಲ್ ೧೪ರಂದು ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನ ಆಚರಣೆ ಹಾಗೂ ಏಪ್ರಿಲ್ ೫ರಂದು ಡಾ. ಬಾಬು ಜಗಜೀವನರಾಮ್ ಅವರ ಜನ್ಮದಿನ ಆಚರಣೆ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧಾರ ಕೈಗೊಳ್ಳಲಾಯಿತು.  
ಸಭೆಯ ಆರಂಭದಲ್ಲೇ ವಿವಿಧ ಸಂಘಟನೆಗಳ ಮುಖಂಡರು ಮಾತನಾಡಿ ಕಳೆದ ೨ ವರ್ಷಗಳಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನರಾಮ್ ರವರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ಸಾಧ್ಯವಾಗಿಲ್ಲ. ಈ ಬಾರಿ ಕೋವಿಡ್ ಸಂಪೂರ್ಣ ತಹಬದಿಗೆ ಬಂದಿರುವ ಕಾರಣ ಈ ಇಬ್ಬರೂ ಮಹಾನ್ ನಾಯಕರ ಜಯಂತಿಯನ್ನು ಈ ಹಿಂದಿನ ವರ್ಷಗಳಲ್ಲಿ ಅದ್ದೂರಿಯಾಗಿ ಆಚರಿಸುವ ಮಾದರಿಯಲ್ಲಿಯೇ ಈ ಬಾರಿ ಕಾರ್ಯಕ್ರಮವನ್ನು ಆಯೋಜನೆ ಮಾಡಬೇಕು. ಮಹಾನ್ ನಾಯಕರ ಭಾವಚಿತ್ರ ಮೆರವಣಿಗೆಯನ್ನು ಕಲಾತಂಡಗಳೊಂದಿಗೆ ನಡೆಸಬೇಕು. ವಿವಿಧ ಇಲಾಖೆಗಳಿಂದ ಸವಲತ್ತುಗಳ ವಿತರಣೆಯಾಗಬೇಕು ಎಂದರು.
ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ, ಬ್ಯಾಂಕುಗಳಲ್ಲಿಯೂ ಜಯಂತಿ ಆಚರಣೆಯಾಗಬೇಕು. ಮಲೆ ಮಹದೇಶ್ವರ ಬೆಟ್ಟದ ಪ್ರಾಧಿಕಾರದ ವತಿಯಿಂದ ಅಲ್ಲಿಯೂ ಸಹ ಕಾರ್ಯಕ್ರಮ ಆಚರಣೆಯಾಗಬೇಕು. ಏಪ್ರಿಲ್ ೧೩ರಂದು ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಗಳ ಕುರಿತು ವಿಚಾರ ಸಂಕಿರಣ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಏರ್ಪಡಿಸಬೇಕು. ಮಹನೀಯರ ಜಯಂತಿಯಂದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಬೇಕು ಎಂಬುದು ಸೇರಿದಂತೆ ಹಲವು ಸಲಹೆಗಳನ್ನು ನೀಡಿದರು. 
ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಅವರು ಮಾತನಾಡಿ ಸಭೆಯಲ್ಲಿ ವ್ಯಕ್ತವಾಗಿರುವ ಮುಖಂಡರ ಸಲಹೆಯಂತೆ ಈ ಬಾರಿ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನರಾಮ್ ಅವರ ಜಯಂತಿ ಕಾರ್ಯಕ್ರಮವನ್ನು ಸರ್ಕಾರಿ ಪೇಟೆ ಪ್ರೈಮರಿ ಶಾಲಾ ಆವರಣದಲ್ಲಿ ಅದ್ದೂರಿಯಾಗಿ ಆಯೋಜಿಸಲಾಗುವುದು. ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಗಳ ಕುರಿತು ವಿಚಾರ ಸಂಕಿರಣವನ್ನು ಆಯೋಜಿಸಲಾಗುವುದು. ಕಾರ್ಯಕ್ರಮ ಸುಗಮ ನಿರ್ವಹಣೆಗಾಗಿ ವಿವಿಧ ಸಮಿತಿಗಳನ್ನು ರಚಿಸಲಾಗುತ್ತಿದ್ದು, ಈ ಸಮಿತಿ ವಿವರವಾಗಿ ಚರ್ಚಿಸಿ ಕಾರ್ಯೋನ್ಮುಖವಾಗಲಿದೆ ಎಂದರು. 
ಪ್ರವಾಸಿ ಮಂದಿರದಿಂದ ಕಲಾ ತಂಡಗಳನ್ನೊಳಗೊಂಡ ಮೆರವಣಿಗೆ ಆರಂಭಗೊಂಡು ವೇದಿಕೆ ಕಾರ್ಯಕ್ರಮ ನಡೆಯುವ ಪೇಟೆ ಪ್ರೈಮರಿ ಶಾಲಾ ಆವರಣದಲ್ಲಿ ಮುಕ್ತಾಯವಾಗಲಿದೆ. ಇದಕ್ಕಾಗಿ ಅಗತ್ಯ ಏರ್ಪಾಡುಗಳನ್ನು ಕೈಗೊಳ್ಳಬೇಕು. ಕಾರ್ಯಕ್ರಮದಂದು ಪ್ರಮುಖ ವೃತ್ತ ಹಾಗೂ ರಸ್ತೆಗಳನ್ನು ಅಲಂಕರಿಸಬೇಕು. ವಿವಿಧ ಸವಲತ್ತುಗಳ ವಿತರಣೆ ಹಾಗೂ ಇಲಾಖೆಗಳು ಅನುಷ್ಠಾನಗೊಳಿಸುವ ಕಾರ್ಯಕ್ರಮಗಳ ಮಾಹಿತಿ ತಿಳಿಸುವ ವ್ಯವಸ್ಥೆಯಾಗಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಒಟ್ಟಾರೆ ಇಬ್ಬರೂ ಮಹನೀಯರ ಜಯಂತಿ ಆಚರಣೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜನೆ ಮಾಡಬೇಕು. ಈ ಸಂಬಂಧ ಸಿದ್ದತಾ ಕಾರ್ಯಗಳನ್ನು ತ್ವರಿತವಾಗಿ ಕೈಗೊಳ್ಳಬೇಕು. ಕಾರ್ಯಕ್ರಮದಂದು ಎಲ್ಲಾ ಅಧಿಕಾರಿ ಸಿಬ್ಬಂದಿ ಕಡ್ಡಾಯವಾಗಿ ಹಾಜರಿರಬೇಕು. ಅಧಿಕಾರಿ ಸಿಬ್ಬಂದಿಯವರು ಗೈರು ಹಾಜರಾದ್ದಲ್ಲಿ ಗಂಭೀರವಾಗಿ ಪರಿಗಣಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿಯವರಾದ ಕೆ.ಎಂ. ಗಾಯತ್ರಿ ಅವರು ಸೂಚನೆ ನೀಡಿದರು. 
ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರ್‌ರಾಜ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಭಾಗೀರಥಿ, ವಿವಿಧ ಸಂಘಟನೆಗಳ ಮುಖಂಡರಾದ ವೆಂಕಟರಮಣ ಪಾಪು, ಸಿ.ಎಂ. ಕೃಷ್ಣಮೂರ್ತಿ, ಕೆ.ಎಂ. ನಾಗರಾಜು, ಚಾ.ಗು. ನಾಗರಾಜು, ಶಾ. ಮುರಳಿ, ಶ್ರೀನಿವಾಸಗೌಡ, ಎಂ. ಶಿವಮೂರ್ತಿ, ಬಸವನಪುರ ರಾಜಶೇಖರ್, ಸಿ.ಕೆ. ಮಂಜುನಾಥ್, ಅರಕಲವಾಡಿ ನಾಗೇಂದ್ರ, ರವಿಕುಮಾರ್, ಎಸ್. ಶ್ರೀಕಂಠಮೂರ್ತಿ, ಜಿ. ಬಂಗಾರು, ನಿಜಧ್ವನಿ ಗೋವಿಂದರಾಜು, ರವಿ ಸೋಮಹಳ್ಳಿ, ರವಿಚಂದ್ರಪ್ರಸಾದ್ ಕಹಳೆ, ಕಂದಳ್ಳಿ ನಾರಾಯಣ, ಶಿವಣ್ಣ, ನಾಗೇಶ್, ಕೆ.ವಿ. ದೇವೇಂದ್ರ, ರಾಜಶೇಖರಮೂರ್ತಿ, ಮಲ್ಲಣ್ಣ, ವಿ. ಕೃಷ್ಣಯ್ಯ, ಬಿ. ನಾಗರಾಜು, ರಾಮಸಮುದ್ರ ಸುರೇಶ್, ಬ್ಯಾಡಮೂಡ್ಲು ಬಸವಣ್ಣ, ಆಲೂರು ನಾಗೇಂದ್ರ, ಗುರುಸ್ವಾಮಿ, ಬಸವರಾಜು ಹಂಡ್ರಕಳ್ಳಿ, ಪಿ. ಸಂಘಸೇನ, ಶಿವಕುಮಾರ್, ಸಿ. ರಾಜಣ್ಣ, ಸಿ.ಎಂ. ನರಸಿಂಹಮೂರ್ತಿ, ಸಿದ್ದರಾಜು, ನಾರಾಯಣ ಇತರೆ ಮುಖಂಡರು ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.