ಗುಂಡ್ಲುಪೇಟೆ: ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಸೇರಿದಂತೆ 4 ಜಿಲ್ಲೆಗಳಲ್ಲೂ ಕಾಂಗ್ರೆಸ್ಗೆ ಉತ್ತಮ ಬೆಂಬಲ ವ್ಯಕ್ತವಾಗಿರುವುದರಿಂದ ದಕ್ಷಿಣ ಪಧವೀಧರ ಕ್ಷೇತ್ರದಲ್ಲಿ ಗೆಲುವು ನಿಶ್ಚಿತ ಎಂದು ದಕ್ಷಿಣ ಪಧವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ.ಮಾದೇಗೌಡ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದಕ್ಷಿಣ ಪಧವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆ ಮತಯಾಚಿಸಿ ಮಾತನಾಡಿದ ಅವರು, ಬೇಗೂರು, ಸೋಮಹಳ್ಳಿ, ಕಬ್ಬಹಳ್ಳಿ ಸೇರಿದಂತೆ ಚಾಮರಾಜನಗರ ಜಿಲ್ಲೆಯಾದ್ಯಂತ ಸಂಚರಿಸಿ ಮತಯಾಚನೆ ಮಾಡಲಾಗಿದೆ ಎಂದರು.
4 ಜಿಲ್ಲೆಯನ್ನು ಒಳಗೊಂಡಂತೆ 27 ತಾಲೂಕು 29 ವಿಧಾನ ಸಭಾ ಕ್ಷೇತ್ರಗಳನು ಒಳಗೊಂಡಂತೆ 45 ಸಾವಿರಕ್ಕು ಹೆಚ್ಚಿನ ಮತದಾರರನ್ನು ಕಾಂಗ್ರೆಸ್ ಪಕ್ಷದ ವತಿಯಿಂದ ನೋಂದಣಿ ಮಾಡಿಸಲಾಗಿದೆ. ಎಲ್ಲಾ ಸ್ಥಳಗಳಿಗೂ ಭೇಟಿ ನೀಡಿ ಪದವೀಧರರನ್ನು ಸಂಪರ್ಕಿಸಿ ಸಮಸ್ಯೆ ಆಲಿಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅವರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಚರ್ಚಿಸಿದ್ದೇನೆ. ಜೊತೆಗೆ ಗ್ರಾಮಾಂತರ ಮಟ್ಟದಲ್ಲಿರುವ ಪಧವೀಧರ ಮತದಾರರನ್ನು ಮುಟ್ಟುವ ಕೆಲಸವನ್ನು ಈಗಾಗಲೇ ಮಾಡಲಾಗಿದೆ ಎಂದು ತಿಳಿಸಿದರು.
ಭಾರತೀ ಶಿಕ್ಷಣ ಸಂಸ್ಥೆಯಿಂದ 35 ಸಾವಿರ ಪಧವೀಧರರು ಹೊರ ಹೋಗಿದ್ದು ಎಲ್ಲರ ಬೆಂಬಲವಿದೆ. ಹಾಸನ ಜಿಲ್ಲೆಯಲ್ಲಿ ಸ್ವಲ್ಪ ಹಿನ್ನೆಡೆಯಾಗಬಹುದು ಎಂಬ ಮನೋಭಾವನೆಯಿತ್ತು. ಆದರೆ ಅಲ್ಲಿಗೆ ಹೋಗಿ ಮತದಾರರನ್ನು ಸಂಪರ್ಕಿಸಿದ ವೇಳೆ ಅಭೂತ ಪೂರ್ವವಾಗಿ ಬೆಂಬಲ ಸೂಚಿಸಿದ್ದಾರೆ ಎಂದರು.
ತಂದೆ ಜಿ.ಮಾದೇಗೌಡ ಕಾವೇರಿ ನೀರು ಹಾಗು ರೈತರ ಪರವಾದ ಹೋರಾಟ ಮಾಡಿ ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ. ನಾನು ಕೂಡ ಭಾರತೀ ಎಜುಕೇಷನ್ ಟ್ರಸ್ಟ್ ಅಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದೇನೆ. ಈ ಕಾರಣದಿಂದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ನಾಲ್ಕು ಜಿಲ್ಲೆಯ ಕಾಂಗ್ರೆಸ್ ಅಧ್ಯಕ್ಷರು ನನಗೆ ಟಿಕೆಟ್ ಕೊಡಿಸಿದ್ದಾರೆ ಎಂದರು.
ಶಿಕ್ಷಣ ಹಾಗು ನಿರುದ್ಯೋಗಕ್ಕೆ ಒತ್ತು: ಶಿಕ್ಷಣ ಕ್ಷೇತ್ರದಲ್ಲಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಕಾಲೇಜು ಶಿಕ್ಷಕರಿಗೆ ಹಲವು ಸಮಸ್ಯೆಗಳಿದ್ದು, ಇದನ್ನು ಬಗೆ ಹರಿಸುವ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸಲಾಗಿದೆ. ಜೊತೆಗೆ ನಿರುದ್ಯೋಗ ಸಮಸ್ಯೆಗೆ ಹೆಚ್ಚಿನ ಒತ್ತು ನೀಡಿ ಕೆಲಸ ನಿರ್ವಹಿಸುವುದಾಗಿ ತಿಳಿಸಿದರು.
ಕಾಂಗ್ರೆಸ್ ಮುಖಂಡ ಹೆಚ್.ಎಂ.ಗಣೇಶಪ್ರಸಾದ್ ಮಾತನಾಡಿ, ಜೂನ್ ನಲ್ಲಿ ದಕ್ಷಿಣ ಪಧವೀಧರ ಕ್ಷೇತ್ರದ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಅಭ್ಯರ್ಥಿಯಾದ ಮಧು ಜಿ.ಮಾದೇಗೌಡ ಅವರಿಗೆ ಕ್ಷೇತ್ರ ಮತದಾರರು ಹೆಚ್ಚಿನ ಮತಗಳನ್ನು ನೀಡುವ ಮೂಲಕ ಗೆಲ್ಲಿಸಬೇಕೆಂದು ಕೋರಿದರು.
ಚಾಮುಲ್ ಅಧ್ಯಕ್ಷ ನಂಜುಂಡಪ್ರಸಾದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುನಿರಾಜು, ರಾಜಶೇಖರ್, ಕಾಡಾ ಮಾಜಿ ಅಧ್ಯಕ್ಷ ನಂಜಪ್ಪ, ಜಿಪಂ ಮಾಜಿ ಉಪಾಧ್ಯಕ್ಷ ಕಬ್ಬಹಳ್ಳಿ ಮಹೇಶ್, ಪುರಸಭಾ ಸದಸ್ಯರಾದ ಅಣ್ಣಯ್ಯಸ್ವಾಮಿ, ಎನ್.ಕುಮಾರ್, ಚಾಮುಲ್ ನಿರ್ದೇಶಕ ಕನ್ನೇಗಾಲ ಸ್ವಾಮಿ, ಕಾಂಗ್ರೆಸ್ ವಕ್ತಾರ ಬಿ.ಜಿ.ಶಿವಕುಮಾರ್, ಯೂತ್ ಕಾಂಗ್ರೆಸ್ ಅಧ್ಯಕ್ಷ ಗುರುಪ್ರಸಾದ್, ಕಾಂಗ್ರೆಸ್ ಮುಖಂಡರಾದ ಕುಮಾರಸ್ವಾಮಿ, ಗೋಪಾಲಪುರ ಲೋಕೇಶ್ ಸೇರಿದಂತೆ ಇತರರು ಇದ್ದರು.
ವರದಿ: ಬಸವರಜು ಎಸ್.ಹಂಗಳ