ಮೈಸೂರು: ಕೇಂದ್ರ ಸರ್ಕಾರ ಪೆಟ್ರೋಲ್ ಬೆಲೆ ಏರಿಸುತ್ತಿರುವುದನ್ನು ಖಂಡಿಸಿ ಕಾಂಗ್ರೆಸ್‍ ನಿಂದ  ನೂರು ಮಂದಿ ಸಾರ್ವಜನಿಕರಿಗೆ  ನಗರದ ಆರ್ ಟಿ ಒ ಕಚೇರಿ ಬಳಿಯಲ್ಲಿರುವ ಪೆಟ್ರೋಲ್ ಬಂಕ್ ನಲ್ಲಿ ಒಂದು ರೂ.ಗೆ ಪೆಟ್ರೋಲ್ ಹಾಕಿಸುವ ಮೂಲಕ ಪ್ರತಿಭಟನೆ ನಡೆಸಲಾಯಿತು.

ಮೈಸೂರು ನಗರ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ವತಿಯಿಂದ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರ ಜನ್ಮದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ವಿನೂತನ ಕಾರ್ಯಕ್ರಮದಲ್ಲಿ ಸುಮಾರು ನೂರು ಮಂದಿ ಸಾರ್ವಜನಿಕರಿಗೆ ಒಂದು ರೂ.ಗೆ ಪೆಟ್ರೋಲ್ ಹಾಕಿಸುವ ಮೂಲಕ  ಕೇಂದ್ರ ಸರ್ಕಾರದ ಬೆಲೆ ಏರಿಕೆ ಕ್ರಮವನ್ನು ಖಂಡಿಸಲಾಯಿತು.

ಇನ್ನು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮ ಜನ್ಮದಿನದಂದು ಯಾವುದೇ ರೀತಿಯ ಆಚರಣೆ ಮಾಡಬಾರದು ಎಂದು ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡಿದ ಹಿನ್ನಲೆಯಲ್ಲಿ ಯಾವುದೇ ಹೋರ್ಡಿಂಗ್‌, ಪೋಸ್ಟರ್‌ ಹಾಕದೆ ಅಗತ್ಯವಿರುವ ಜನರಿಗೆ ಸಹಾಯ  ಮಾಡಲಾಯಿತಲ್ಲದೆ, ನೂರು ಮಂದಿಗೆ ಒಂದು ರೂ.ನಲ್ಲಿ ಪೆಟ್ರೋಲ್ ಹಾಕಿಸಿ ಗುಲಾಬಿ ಹೂ. ನೀಡಲಾಯಿತು.

ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ಎನ್ ಎಂ ನವೀನ್ ಕುಮಾರ್ ಅವರು,  ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷರಾದ ರಾಹುಲ್ ಗಾಂಧಿ ಅವರ ಹುಟ್ಟುಹಬ್ಬದ ಪ್ರಯುಕ್ತ ಮೈಸೂರು ನಗರದಲ್ಲಿ ನಗರ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ಎರಡನ್ನೂ ಒಳಗೊಂಡಂತೆ ಸರಿಸುಮಾರು ನೂರು ಜನರಿಗೆ ಒಂದು ರೂಪಾಯಿಗೆ  ಪೆಟ್ರೋಲ್  ಹಾಕಿಸುವ ಕೆಲಸವನ್ನು ನಾವಿಲ್ಲಿ ಮಾಡಿದ್ದೇವೆ. ಇವತ್ತು ಇಡೀ ದೇಶದಲ್ಲಿ ಪೆಟ್ರೋಲ್ ಬೆಲೆ 100ರ ಗಡಿ ದಾಟಿದೆ. ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ 112 ಡಾಲರ್ ಇದ್ದ ಕಚ್ಚಾ ತೈಲ ಬೆಲೆ 60ರಿಂದ 62ಡಾಲರ್ ಗೆ ಇಳಿದಿದ್ದರೂ ಕೇಂದ್ರ ಸರ್ಕಾರ  ಪೆಟ್ರೋಲ್ ಬೆಲೆಯನ್ನು ಇಳಿಸದೇ ಮೂರುವರೆ ಲಕ್ಷ ಕೋಟಿ ರೂ. ಆದಾಯ ಕಣ್ಣಲ್ಲಿಟ್ಟು ಬಡಬಗ್ಗರಿಗೆ ಕಣ್ಣೀರು ಹಾಕಿಸುತ್ತಿದ್ದಾರೆ. ಇದಕ್ಕೆ ನಾವು ಅಣುಕು ಪ್ರದರ್ಶನ ರೀತಿಯಲ್ಲಿ ರಾಹುಲ್ ಗಾಂಧಿಯವರ ಜನ್ಮದಿನವನ್ನು ಒಂದು ರೂ.ಗೆ ಪೆಟ್ರೋಲ್ ಹಾಕಿಸಿ ಗುಲಾಬಿ ಹೂ ನೀಡುವ ಮೂಲಕ ಆಚರಿಸುತ್ತಿದ್ದೇವೆ ಎಂದು  ಹೇಳಿದರು.

ಕಾಂಗ್ರೆಸ್ ಯುವ ಮುಖಂಡರಾದ ಎನ್ ಎಂ ನವೀನ್ ಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಹ್ಯಾರಿಸ್, ಫೈಲ್ವಾನ್ ಸುನೀಲ್, ಚೇತನ್, ರಾಜೇಶ್,  ಪವನ್, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೂರ್ತಿ, ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು

By admin