ಚಾಮರಾಜನಗರ: ಬಾಲಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ಬೇರುಸಮೇತ ಕಿತ್ತೊಗೆಯಲು ಸಮುದಾಯದ ಸಹಭಾಗಿತ್ವ ಅಗತ್ಯವಾಗಿದೆ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರರಾಜು ಅವರು ತಿಳಿಸಿದರು.
ನಗರದ ಜಿಲ್ಲಾ ಪಂಚಾಯತ್ ಹಳೇ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾರ್ಮಿಕ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋದಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಾಲಕಾರ್ಮಿಕ ಪದ್ಧತಿ ವಿರೋದಿ ದಿನವನ್ನು ಇಂದು ವಿಶ್ವಾದ್ಯಂತ ಆಚರಿಸಲಾಗುತ್ತಿದ್ದು, ಬಾಲಕಾರ್ಮಿಕ ಪದ್ಧತಿಯನ್ನು ತಡೆದು ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ೨೦೨೨ರಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಮಕ್ಕಳನ್ನು ಸಮಾಜದ ಸತ್ಪ್ರಜೆಗಳಾಗಿ ರೂಪಿಸಬೇಕಾದ ನಾಗರಿಕರೇ ಇಂದು ಬಾಲಕಾರ್ಮಿಕರಾಗಿ ದುಡಿಸಿಕೊಳ್ಳುತ್ತಿದ್ದಾರೆ. ಬಡತನ, ಅನಕ್ಷರತೆ ಹಾಗೂ ಅಜ್ಞಾನದಿಂದ ಇಂದು ಬಾಲಕಾರ್ಮಿಕ ಪದ್ದತಿ ಜೀವಂತವಾಗಿದೆ. ತಂದೆ-ತಾಯಿ, ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಅವರನ್ನು ಸನ್ಮಾರ್ಗದೆಡೆಗೆ ನಡೆಸಬೇಕು ಎಂದರು.
ರಾಜ್ಯದಲ್ಲಿ ಶೇ. ೪೩ರಷ್ಟು, ದೇಶದಲ್ಲಿ ೧೦ ಮಿಲಿಯನ್ ಹಾಗೂ ಜಾಗತಿಕವಾಗಿ ೧೬೦ ಮಿಲಿಯನ್ ಬಾಲಕಾರ್ಮಿಕ ಮಕ್ಕಳನ್ನು ಗುರುತಿಸಲಾಗಿದೆ. ಬಾಲಕಾರ್ಮಿಕರಾಗಿ ದುಡಿಯುವ ಕೆಲ ಮಕ್ಕಳು ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ಸಂಭವವಿರುತ್ತಿದೆ. ೧೮ ವರ್ಷದೊಳಗಿನ ಮಕ್ಕಳನ್ನು ದುಡಿಮೆಗೆ ದೂಡದೇ ಉತ್ತಮ ಶಿಕ್ಷಣ ನೀಡಿ ಸಮಾಜದ ಮುಖ್ಯವಾಹಿನಿಗೆ ತರಬೇಕು. ಈ ನಿಟ್ಟಿನಲ್ಲಿ ಪ್ರತಿ ತಂದೆ ತಾಯಿ, ಪೋಷಕರು, ಜನಪ್ರತಿನಿಧಿಗಳು, ಸಮುದಾಯ, ಅಧಿಕಾರಿಗಳು ಕಾರ್ಯೋನ್ಮಖರಾಗಬೇಕು. ದೇಶದ ಅಭಿವೃದ್ಧಿಗೆ ಮಾರಕವಾಗಿರುವ ಬಾಲಕಾರ್ಮಿಕ ಪದ್ಧತಿಯನ್ನು ಬುಡಸಮೇತ ಕೀಳಬೇಕು ಎಂದು ಸುಂದರರಾಜು ಅವರು ತಿಳಿಸಿದರು.
ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಸರಸ್ವತಿ ಅವರು ಬಾಲಕಾರ್ಮಿಕ ಪದ್ಧತಿ ತಡೆಗಟ್ಟುವುದು ಕಾರ್ಮಿಕ ಇಲಾಖೆಯ ಕೆಲಸ ಮಾತ್ರವಲ್ಲ. ಸಂಬಂಧಿತ ಇಲಾಖೆಗಳಾದ ಶಿಕ್ಷಣ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅರಣ್ಯ, ಸಾರಿಗೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅದ್ಯ ಕರ್ತವ್ಯವಾಗಿದೆ. ಎಲ್ಲಾ ಮಕ್ಕಳಿಗೂ ಕಡ್ಡಾಯ ಶಿಕ್ಷಣ ನೀಡುವ ಮೂಲಕ ೨೦೨೫ರೊಳಗೆ ಬಾಲಕಾರ್ಮಿಕ ಮುಕ್ತ ಭಾರತಕ್ಕೆ ಎಲ್ಲರೂ ಶ್ರಮಿಸಬೇಕು ಎಂದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಹೆಚ್ಚುವರಿ ಪ್ರಧಾನ ನ್ಯಾಯಾಧೀಶರಾದ ನಿವೇದಿತಾ ಅವರು ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿ ಮಕ್ಕಳು ದೇಶದ ಆಸ್ತಿ. ಬಾಲಕಾರ್ಮಿಕ ಪದ್ಧತಿ ತಡೆಯುವಲ್ಲಿ ಸಮಾಜದ ಮುಖ್ಯ ಭಾಗವಾಗಿರುವ ಹಾಗೂ ಸಮುದಾಯದೊಂದಿಗೆ ಒಡನಾಟ ಹೊಂದಿರುವ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಪ್ರಮುಖವಾಗಿದೆ. ತಂದೆ-ತಾಯಿ, ಪೋಷಕರು ಮಕ್ಕಳ ಬಾಲ್ಯವನ್ನು ಕಸಿಯದೇ ಅವರಿಗೆ ಶಿಕ್ಷಣ ಕೊಡಿಸಿ ಸಮಾಜದ ಉತ್ತಮ ನಾಗರಿಕರನ್ನಾಗಿಸಲು ಪಣತೊಡಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಪಂಚಾಯತ್ ಲೆಕ್ಕಾಧಿಕಾರಿ ಗಂಗಾಧರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಗೋವಿಂದರಾಜು ಹಾಗೂ ಮೈಸೂರಿನ ಡಾನ್ ಬಾಸ್ಕೋ ಸಮಾಜ ಸೇವಾ ಸಂಸ್ಥೆಯ ನಿರ್ದೇಶಕರಾದ ಪಾದರ್ ಸಿಜು ಥಾಮಸ್ ಅವರುಗಳು ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಬಗ್ಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ. ಮಹದೇವಸ್ವಾಮಿ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕರಾದ ಎಂ. ಮಹೇಶ್, ಹಿರಿಯ ಕಾರ್ಮಿಕ ನಿರೀಕ್ಷರಾದ ವೀಣಾ, ತಾಲೂಕು ವೈದ್ಯಾಧಿಕಾರಿ ಡಾ. ಶ್ರೀನಿವಾಸ್, ಜಿಲ್ಲಾ ಗ್ಯಾರೇಜ್ ನೌಕರರ ಸಂಘದ ಅಧ್ಯಕ್ಷರಾದ ಫೈರೋಜ್‌ಖಾನ್, ಜಿಲ್ಲಾ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ಆಧ್ಯಕ್ಷರಾದ ಟಿ.ಜೆ. ಸುರೇಶ್ ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಡಾನ್ ಬಾಸ್ಕೋ ಸಮಾಜ ಸೇವಾ ಸಂಸ್ಥೆಯ ವತಿಯಿಂದ ಮುದ್ರಿಸಲಾಗಿದ್ದ ಬಾಲಕಾರ್ಮಿಕ ಪದ್ದತಿ ನಿರ್ಮೂಲನೆಯ ಅರಿವು ಕುರಿತ ಪುಸ್ತಕವನ್ನು ಗಣ್ಯರು ಬಿಡುಗಡೆ ಮಾಡಿದರು. ಬಾಲಕಾರ್ಮಿಕ ಪದ್ಧತಿಯಿಂದ ವಿಮುಕ್ತಿಗೊಂಡು ವಿದ್ಯಾವಂತರಾಗಿ ಉತ್ತಮ ಜೀವನ ನಡೆಸುತ್ತಿರುವ ಮೂವರಿಗೆ ಕಾರ್ಮಿಕ ಇಲಾಖೆಯ ಕಿಟ್ ವಿತರಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಕಾರ್ಮಿಕ ಇಲಾಖೆಯ ಸಹಾಯವಾಣಿ ವತಿಯಿಂದ ಬಾಲಕಾರ್ಮಿಕ ಪದ್ಧತಿಯ ನಿರ್ಮೂಲನೆ ಬಗ್ಗೆ ಜಾಗೃತಿ ನಾಟಕವನ್ನು ಪ್ರಸ್ತುತಪಡಿಸಲಾಯಿತು.