ಸಂಘಟನೆಯಿಂದ ಸಮುದಾಯದ ಅಭಿವೃದ್ಧಿ: ಶಿವಮೂರ್ತಿ ಉತ್ತಂಗೆರೆ
ಗುಂಡ್ಲುಪೇಟೆ: ತಾಲೂಕಿನ ವೀರನಪುರ ಗ್ರಾಮದಲ್ಲಿ ಅಖಿಲ ಕರ್ನಾಟಕ ಕುರುಬರ ಮಹಾ ಸಭಾದ ಗ್ರಾಮ ಘಟಕದ ನೂತನ ಶಾಖೆಯನ್ನು ರಾಜ್ಯಾಧ್ಯಕ್ಷ ಶಿವಮೂರ್ತಿ ಉತ್ತಂಗೆರೆ ಹಾಗೂ ಪ್ರಧಾನ ಕಾರ್ಯದರ್ಶಿ ಹುಲಸಗುಂದಿ ನಾಗಮಲ್ಲೇಗೌಡ ಉದ್ಘಾಟಿಸಿದರು.
ಈ ವೇಳೆ ರಾಜ್ಯಾಧ್ಯಕ್ಷರಾದ ಶಿವಮೂರ್ತಿ ಉತ್ತಂಗೆರೆ ಮಾತನಾಡಿ, ಯಾವುದೇ ಒಂದು ಸಮುದಾಯ ಅಭಿವೃದ್ಧಿ ಹೊಂದಬೇಕಾದರೆ ಮೊದಲು ಸಮುದಾಯ ಯುವಕರು ಒಗ್ಗಟ್ಟಾಗಿ ದುಡಿಯಬೇಕು. ಇದರಿಂದ ಸಮಾಜಕ್ಕೆ ಬಲ ಬರುತ್ತದೆ. ಯುವ ಸಮುದಾಯ ತಳಮಟ್ಟದಿಂದ ಸಂಘಟನೆ ಮಾಡಿದರೆ ಮುಂದೆ ಎಂತಹ ಸವಾಲು, ಸಮಸ್ಯೆ ಬಂದರೂ ಅದನ್ನು ಸುಲಭವಾಗಿ ಬಗೆಹರಿಸಿಕೊಳ್ಳಬಹುದು ಎಂದರು.
ರಾಜ್ಯದಲ್ಲಿ ಕುರುಬ ಸಮುದಾಯ ಆರ್ಥಿಕವಾಗಿ, ಶೈಕ್ಷಣಿಕವಾಗಿ ಬಹಳ ಹಿಂದೆ ಉಳಿದಿದ್ದು, ಮುಂದೆ ಬರಲು ಸಮಾಜವನ್ನು ಎಸ್ಟಿಗೆ ಸೇರ್ಪಡೆ ಮಾಡಬೇಕು. ಇದಕ್ಕೆ ನಾವು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈಬಲಪಡಿಸಬೇಕಾಗಿದೆ. ಅವರು ಯಾವುದೇ ಸಂದರ್ಭದಲ್ಲಿ ಹೋರಾಟ ನಡೆಸಿದರೂ ಅದಕ್ಕೆ ನಾವು ಬೆಂಬಲ ನೀಡಬೇಕು ಎಂದು ತಿಳಿಸಿದರು.
ಅಖಿಲ ಕರ್ನಾಟಕ ಕುರುಬರ ಮಹಾ ಸಭಾದ ವೀರನಪುರ ಗ್ರಾಮ ಘಟಕದ ಅಧ್ಯಕ್ಷ ಮಂಜುನಾಥ, ಕಾರ್ಯದರ್ಶಿ ಶಿವಣ್ಣ, ಉಪಾಧ್ಯಕ್ಷ ಪುಟ್ಟೇಗೌಡ, ಮುಖಂಡರಾದ ಸ್ವಾಮೀಗೌಡ, ನಾಗೇಂದ್ರ, ಮಣಿಕುಮಾರ, ರಾಮೇಗೌಡ, ರಾಜು, ಮನೋಜ್, ಗುರುಪ್ರಸಾದ್, ಮಹದೇವೇಗೌಡ, ಹುಚ್ಚೆಗೌಡ, ವಸಂತ ಸೇರಿದಂತೆ ಗ್ರಾಮದ ಮುಖಂಡರು ಹಾಜರಿದ್ದರು.
ವರದಿ: ಬಸವರಾಜು ಎಸ್ ಹಂಗಳ