ಚಾಮರಾಜನಗರ: ಚಾಮರಾಜನಗರ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ನೂತನ ಬಡಾವಣೆಯ ನಿರ್ಮಾಣ ಅತಿ ಶೀಘ್ರದಲ್ಲಿ ಪ್ರಾರಂಭವಾಗಲಿದೆ ಎಂದು ಚಾಮರಾಜನಗರ-ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪಿ.ಬಿ. ಶಾಂತಮೂರ್ತಿ ಕುಲಗಾಣ ಅವರು ತಿಳಿಸಿದರು. 

ನಗರದ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಸಭಾಂಗಣದಲ್ಲಿಂದು ನಡೆದ ಪ್ರಾಧಿಕಾರದ ೭೬ನೇ ಸಾಮಾನ್ಯ ಸಭೆಯ                                          ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 
ಪ್ರಾಧಿಕಾರದಿಂದ ಮೊದಲ ಬಾರಿಗೆ ೧೪ ಎಕರೆ ೨೪ಗುಂಟೆ ವಿಸ್ತೀರ್ಣದಲ್ಲಿ ಬಡಾವಣೆ ನಿರ್ಮಾಣವಾಗಲಿದ್ದು, ಈ ಸಂಬಂಧ ಸರ್ಕಾರವು ಶೇ.೫೦ : ೫೦ ರ ಅನುಪಾತದಲ್ಲಿ ಬಡಾವಣೆ ನಿರ್ಮಾಣಕ್ಕೆ ಅನುಮತಿ ನೀಡಿದ್ದು, ತಾಂತ್ರಿಕ ಯೋಜನೆಯ ಬಳಿಕ ಬಡಾವಣೆ ನಿರ್ಮಾಣ ಪ್ರಾರಂಭವಾಗಲಿದೆ. ಜಿಲ್ಲೆಯಾಗಿ ೨೫ ವರ್ಷಗಳಾಗಿದ್ದರೂ ಸಹ ಚಾಮರಾಜನಗರ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಜನಪ್ರತಿನಿಧಿಗಳು, ನಾಗರಿಕರು ಸಹಕಾರ ನೀಡುವ ಮೂಲಕ ಅಭಿವೃದ್ಧಿಗೆ ಪಣ ತೊಡಬೇಕಾಗಿದೆ ಎಂದರು.
ಪ್ರಾಧಿಕಾರದಿಂದ ಸಿದ್ಧಪಡಿಸಿದ ಮಹಾಯೋಜನೆಗೆ ಅನುಗುಣವಾಗಿ ಸಾರ್ವಜನಿಕರು ಸಹಕರಿಸಿದರೆ ಮಾತ್ರ ಜಿಲ್ಲೆಯ ಅಭಿವೃದ್ಧಿ ಸಾಧ್ಯವಾಗುತ್ತದೆ. ಭೂ ಮಾರಾಟಗಾರರು ವೈಯಕ್ತಿಕ ಉದ್ದೇಶದಿಂದ  ಸರ್ಕಾರಕ್ಕೆ ವಂಚನೆ ಮಾಡುವ ಮೂಲಕ ತುಂಡು ಭೂಮಿಗಳನ್ನಾಗಿ ವಿಂಗಡಿಸಿ ಮಾರಾಟ ಮಾಡಿರುತ್ತಾರೆ. ಅಂತಹ ಕಡೆಗಳಲ್ಲಿ ರಸ್ತೆ ಒಳಚರಂಡಿ, ವಿದ್ಯುಚ್ಛಕ್ತಿ, ಮೂಲಭೂತ ಸೌಕರ್ಯಗಳಿಲ್ಲದೆ ಕೊಳಚೆ ಪ್ರದೇಶಗಳಾಗಿ ಪರಿವರ್ತನೆಯಾಗುತ್ತಿವೆ. ಈ ಪ್ರದೇಶಗಳಲ್ಲಿ ಕಾನೂನಿನನ್ವಯ ಉದ್ಯಾನವನ, ನಾಗರಿಕ ಮೂಲಭೂತ ಸೌಕರ್ಯ ನಿವೇಶನ ಬಿಟ್ಟು ಕೊಡದೆ ಸರ್ಕಾರಕ್ಕೆ ವಂಚಿಸುತ್ತಿರುವುದು ಕಂಡು ಬಂದಿದೆ. ಈ ಸ್ಥಳಗಳಲ್ಲಿ ಜಾಗ ಖರೀದಿಯಿಂದ ಅನುಕೂಲಕ್ಕೆ ಅವಕಾಶವಾಗುವುದಿಲ್ಲ ಎಂದು ತಿಳಿಸಿದರು.
ಖಾತೆ, ಇ-ಸ್ವತ್ತು ತೆಗೆದುಕೊಳ್ಳಲಾಗದೆ ಮುಂದಿನ ದಿನಗಳಲ್ಲಿ ಖರೀದಿದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅನಧಿಕೃತ ಭೂ ವಿಂಗಡನೆ ಮಾಡಿ ಮಾರಾಟ ಮಾಡುವವರ ಮೇಲೆ ಕ್ರಮ ಜರುಗಿಸಲಾಗುತ್ತದೆ. ಇಂತಹ ಕಡೆಗಳಲ್ಲಿ ಖರೀದಿದಾರರು ಯಾವುದೇ ಕಾರಣಕ್ಕೂ ಜಾಗ ಖರೀದಿಸಬಾರದು. ಪ್ರಾಧಿಕಾರದಿಂದ ಅನುಮೋದನೆಯಾಗಿರುವ ಬಡಾವಣೆಗಳಲ್ಲಿ ಮಾತ್ರ ನಿವೇಶನ ಖರೀದಿಸಬೇಕೆಂದು ತಿಳಿಸಿದರು.
ಖರೀದಿದಾರರು ತಮ್ಮ ಬಹುದಿನದ ಕನಸಾದ ಮನೆ ನಿರ್ಮಾಣದ ಗುರಿಯನ್ನು ಈಡೇರಿಸಿಕೊಳ್ಳಲು ಮಧ್ಯವರ್ತಿಗಳ ಮೊರೆ ಹೊಗಬಾರದು. ಪ್ರಾಧಿಕಾರದ ಕಚೇರಿಯಲ್ಲಿ ಮಧ್ಯವರ್ತಿಗಳ ಅವಕಾಶವಿರುವುದಿಲ್ಲ. ನಾಗರಿಕರು ನೇರವಾಗಿ ಪ್ರಾಧಿಕಾರದ ಕಚೇರಿಯಲ್ಲಿ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬೇಕು. ಸಾರ್ವಜನಿಕರು ಸೇವೆಯ ಜೊತೆಗೆ ಅಭಿವೃದ್ಧಿಗೆ ಪೂರಕವಾಗಿ ಕೆಲಸ ನಿರ್ವಹಿಸುವುದು ಪ್ರಾಧಿಕಾರದ ಉದ್ದೇಶವಾಗಿದೆ. ಕೆಲವರು ಅಧಿಕಾರಿಗಳ ಹೆಸರು ದುರುಪಯೋಗ ಪಡಿಸಿಕೊಂಡು ತಪ್ಪು ಮಾಹಿತಿ ನೀಡಿದರೆ ಅದನ್ನು ಕಚೇರಿಯಲ್ಲಿ ಆಯುಕ್ತರ ಗಮನಕ್ಕೆ ತರಬೇಕು ಎಂದು ಅಧ್ಯಕ್ಷರು ತಿಳಿಸಿದರು. 
ಯಾವುದೇ ಜಾಗವನ್ನು ಖರೀದಿಸುವಾಗ ಅದು ಮಹಾಯೋಜನೆಯಲ್ಲಿರುವಂತೆ ಯಾವ ಉಪಯೋಗಕ್ಕೆ ಕಾಯ್ದಿರಿಸಲಾಗಿದೆ ಎಂಬುದನ್ನು ಖರೀದಿದಾರರು ಪರಿಶೀಲಿಸಬೇಕು. ನಿವೇಶನ ಕೊಳ್ಳುವಾಗ ಪ್ರಾಧಿಕಾರದ ಕಚೇರಿಯ ಅಧಿಕಾರಿಗಳಿಗೆ ದಾಖಲೆಗಳನ್ನು ಹಾಜರುಪಡಿಸಿ ಮಾಹಿತಿ ಪಡೆದುಕೊಳ್ಳಬೇಕು. ಇದಕ್ಕಾಗಿ ಯಾರ ಮಧ್ಯಸ್ತಿಕೆಯೂ ಇಲ್ಲದೆ ನೇರವಾಗಿ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಪ್ರಾಧಿಕಾರವು ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದರು.
ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ಉದ್ಯಾನವನ ಮತ್ತು ಕೆರೆಗಳ ಅಭಿವೃದ್ಧಿಗೆ ಯೋಜನೆ ಸಿದ್ದಪಡಿಸಲಾಗುವುದು. ಜನೋಪಯೋಗಿ ಕೆರೆಗಳು, ಉದ್ಯಾನವನಗಳನ್ನು ತ್ವರಿತವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಾಗುವುದು.
ಸದರಿ ಸಭೆಯಲ್ಲಿ ಮಾಹೆವಾರು ಜಮಾ-ಖರ್ಚುಗಳ ಸ್ಥಿರೀಕರಣ ಮಾಡಲಾಯಿತು ಮತ್ತು ೨೦೨೨-೨೩ನೇ ಸಾಲಿಗೆ ಪ್ರಾಧಿಕಾರದ ವಾರ್ಷಿಕ ಆಯ-ವ್ಯಯ ಅಂದಾಜು ಪಟ್ಟಿ ಬಗ್ಗೆ ಚರ್ಚಿಸಿ ಸರ್ಕಾರದ ಅನುಮೋದನೆಗೆ ಸಲ್ಲಿಸಲು ತೀರ್ಮಾನಿಸಲಾಯಿತು. ವಸತಿ, ವಾಣಿಜ್ಯ ಹಾಗೂ ಕೈಗಾರಿಕೆ ಉದ್ದೇಶದ ೦೯ ವಿನ್ಯಾಸ ಅನುಮೋದನೆಗಳು, ೦೩ ಭೂ ಉಪಯೋಗ ಬದಲಾವಣೆ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಇತರೆ ವಿಷಯಗಳಾದ ನಾಗರಿಕ ಸೌಲಭ್ಯ ನಿವೇಶನಗಳು, ವಿನ್ಯಾಸ ನಕ್ಷೆ ಅಭಿವೃದ್ಧಿ, ಉದ್ಯಾನವನ ಅಭಿವೃದ್ಧಿ ಮತ್ತು ಕೆರೆ ಅಭಿವೃದ್ಧಿ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಪ್ರಾಧಿಕಾರದ ಆಯುಕ್ತರಾದ ಡಾ. ಎಂ.ಎಸ್. ಪಂಕಜ, ನಗರ ಯೋಜಕ ಸದಸ್ಯರಾದ ಟಿ.ಕೆ. ಶ್ರೀನಿವಾಸಮೂರ್ತಿ, ಸದಸ್ಯರಾದ ಅನ್ನಪೂರ್ಣ, ಕೂಸಣ್ಣ, ಆರ್.ರಂಗಸ್ವಾಮಿ, ಕೆಂಪನಾಯ್ಕ ಸಭೆಯಲ್ಲಿ ಹಾಜರಿದ್ದರು.