ನಗರದ “ಸೇವ್ ಹೆರಿಟೇಜ್” ಅಭಿಯಾನದ ಭಾಗವಾಗಿ ಮೈಸೂರಿನ ಪ್ರಮುಖ ಪಾರಂಪರಿಕ ಕಟ್ಟಡಗಲಲ್ಲಿ ಒಂದಾದ ಲ್ಯಾನ್ಸ್‍ಡೌನ್ ಕಟ್ಟಡವನ್ನು ಹಾಗೂ ದೇವರಾಜ ಮಾರುಕಟ್ಟೆಯನ್ನು ಸಂರಕ್ಷಿಸುವಂತೆ ಸಹಿಸಂಗ್ರಹ ಮತ್ತು ಜನಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.
ನಗರದ ಲ್ಯಾನ್ಸ್ ಡೌನ್ ಕಟ್ಟಡದ ಮುಂಭಾಗ ಅಭಿಯಾನದ ಸಂಚಾಲಕ ಕೆ.ಎಂ ನಿಶಾಂತ್ ಹಾಗೂ ಖ್ಯಾತ ಇತಿಹಾಸ ತಜ್ಞಾ ಮತ್ತು ಮೈಸೂರು ನಗರ ಪಾರಂಪರಿಕ ಸಮಿತಿಯ ಹಿರಿಯ ಸದಸ್ಯ ಪ್ರೋ ರಂಗರಾಜು ರವರು ಅಭಿಯಾನಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಕೆ.ಎಂ ನಿಶಾಂತ್ ಮೈಸೂರು ನಗರ ಜಗತ್ತಿನ ಪಾರಂಪರಿಕ ನಗರಗಳ ಪೈಕಿ ಅಗ್ರಸ್ಥಾನದಲ್ಲಿದೆ. ಇದಕ್ಕೆ ಕಾರಣ ನಮ್ಮಲ್ಲಿರುವ ನೂರಾರು ಪಾರಂಪರಿಕ ಕಟ್ಟಡಗಳು, ಹತ್ತಾರು ಅರಮನೆಗಳು ಮತ್ತು ಅದರ ಹಿಂದಿನ ಇತಿಹಾಸ. ಅಂತಹದೇ ಇತಿಹಾಸವನ್ನು ಹೊಂದಿರುವುದರಲ್ಲಿ ಮೈಸೂರಿನ ಮಹಾರಾಜರಾದ 10ನೇ ಚಾಮರಾಜ ಒಡೆಯರ್ ಕಾಲದಲ್ಲಿ ನಿರ್ಮಾಣವಾದ ಲ್ಯಾನ್ಸ್ ಡೌನ್ ಕಟ್ಟಡ ಮತ್ತು ದೇವರಾಜ ಮಾರುಕಟ್ಟೆಯೂ ಒಂದು. 2004ರಲ್ಲಿ ಮೈಸೂರನ್ನು ಪಾರಂಪರಿಕ ನಗರವೆಂದು ಪರಿಗಣಿಸಲು 300ಕ್ಕೂ ಹೆಚ್ಚು ಪಾರಂಪರಿಕ ಕಟ್ಟಡಗಳನ್ನು ಗುರುತಿಸಲಾಗಿತ್ತು. ಆದರೆ ಕ್ರಮೇಣ ಗುರುತಿಸಿರುವಂತಹ ಕಟ್ಟಡಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದೆ ಶಿಥಿಲಗೊಳ್ಳುವಂತೆ ಮಾಡಿ, ಶಿಥಿಲಗೊಂಡಿದೆ ಎಂಬ ಕಾರಣಕ್ಕೆ ಅವುಗಳನ್ನು ನೆಲಸಮ ಗೊಳಿಸಲಾಗುತ್ತಿದೆ. ಹೀಗೆ ಶಿಥಿಲಗೊಂಡಿದೆ ಎಂಬ ನೆಪ ಒಡ್ಡಿ ಒಂದೊಂದೇ ಕಟ್ಟಡಗಳನ್ನು ನೆಲಸಮಗೊಳಿಸುತ್ತಿದ್ದರೆ .
ಮೈಸೂರನ್ನು ನಾವು ಪಾರಂಪರಿಕ ನಗರವಾಗಿ ಅಲ್ಲ ಕಾಂಕ್ರೀಟ್ ನಗರವಾಗಿ ನೋಡಬೇಕಾಗುತ್ತದೆ. ಇದೀಗ ಲ್ಯಾನ್ಸ್ ಡೌನ್ ಕಟ್ಟಡ ಮತ್ತು ದೇವರಾಜ ಮಾರುಕಟ್ಟೆಯನ್ನೂ ಕೋಡ ಅದೇಕಾರಣಕ್ಕೆ ನೆಲಸಮಗೊಳಿಸಿ ನೂತನ ಕಟ್ಟಡವನ್ನು ನಿರ್ಮಾಣ ಮಾಡಬೇಕೆಂಬ ಚಿಂತನೆ ಮೈಸೂರಿನ ಪಾರಂಪರಿಕತೆಗೆ ಕೊಡಲಿ ಪೆಟ್ಟು ಬಿದ್ದಂತಾಗುತ್ತಿದೆ. ಹಾಗಾಗಿ ಇದನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಇಂದು ನಾವು ಜನರ ಅಭಿಪ್ರಾಯವನ್ನು ಸಂಗ್ರಹಿಸಲು ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆಯನ್ನು ಕೊಟ್ಟಿದ್ದೇವೆ. ಮುಂದಿನ 10ದಿನಗಳ ಕಾಲ ನಗರದ ಪ್ರಮುಖ ಪಾರಂಪರಿಕ ಕಟ್ಟಡಗಳ ಮುಂದೆ ಈ ಅಭಿಯಾನ ನಡೆಯುತ್ತದೆ. ನಂತರ ಇದರಲ್ಲಿ ಸಂಗ್ರಹವಾದ ಸಾರ್ವಜನಿಕರ ಸಹಿಯುಳ್ಳ ಪತ್ರವನ್ನು ಮುಖ್ಯಮಂತ್ರಿಗಳಿಗೆ ನೇರವಾಗಿ ಕಳುಹಿಸಿ ಇದರ ಮಹತ್ವವನ್ನು ತಿಳಿಸಿ ನೆಲಸಮಗೊಳಿಸದೆ ಕಟ್ಟಡಗಳ ಪಾರಂಪರಿಕತೆಗೆ ಅನುಗುಣವಾಗಿ ವೈಜ್ಞಾನಿಕವಾಗಿ ದುರಸ್ಥಿಗೋಳಿಸಿ ಸಂರಕ್ಷಿಸುವಂತೆ ಮನವಿಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.
ನಂತರ ಮಾತನಾಡಿದ ಪ್ರೊ ರಂಗರಾಜನ್ ರವರು ನಾನು 2004ರಿಂದಲೂ ಕೂಡ ಪಾರಂಪರಿಕ ಸಮಿತಿಯ ಸದಸ್ಯನಾಗಿದ್ದು, ಅಂದಿನಿಂದಲೂ ಸಭೆಗಳಲ್ಲಿ ಅಧಿಕಾರಿಗಳಿಗೆ ಮತ್ತು ಅಂದಿನಿಂದ ಇಂದಿನವರೆಗೆ ಆಡಳಿತ ನಡೆಸಿದ ಸರ್ಕಾರಗಳಿಗೆ ಪಾರಂಪರಿಕ ಕಟ್ಟಡಗಳ ನಿರ್ವಹಣೆ ಬಗ್ಗೆ ಎಚ್ಚರಿಕೆಯನ್ನು ನೀಡುತ್ತಾ ಬಂದಿದ್ದೆ. ಆದರೆ ಯಾವ ಪ್ರಯೋಜನವೂ ಸಹ ಆಗಿಲ್ಲ. ಮೈಸೂರು ನಗರ ಹೆಸರಿಗಷ್ಠೇ ಪಾರಂಪರಿಕ ನಗರವಾಗಿದೆ. ದಿನದಿಂದ ದಿನಕ್ಕೆ ಒಂದಲ್ಲಾ ಒಂದು ಕಟ್ಟಡಗಳು ಶಿಥಿಲಗೊಂಡು ನೆಲಕ್ಕುರುಳುತ್ತಿದೆ. ನೆಲಕ್ಕುರುಳಿದ ನಂತರ ಅಲ್ಲಿ ಬೇರೊಂದು ಕಟ್ಟಡವನ್ನು ನಿರ್ಮಾಣ ಮಾಡುವ ಬದಲು ಮೊದಲೇ ಆ ಕಟ್ಟಡಗಳ ನಿರ್ವಹಣೆ ಮಾಡಿದರೆ ಮೈಸೂರನ್ನು ಪಾರಂಪರಿಕ ನಗರವಾಗಿ ಅಲ್ಲದೆ ಪ್ರಸಿದ್ದ ಪ್ರವಾಸಿ ತಾಣವಾಗಿ ಕೂಡ ಅಭಿವೃದ್ಧಿ ಪಡಿಸಬಹುದು. ವಿದೇಶಗಳಲ್ಲಿ ಶಿಥಿಲಗೊಂಡಿರುವ ಕಟ್ಟಡಗಳನ್ನು ಇಂದಿನ ವೈಜ್ಞಾನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಸಂರಕ್ಷಿಸಿ ಅದನ್ನು ಪ್ರವಾಸಿ ತಾಣವನ್ನಾಗಿ ಮಾಡಿ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುತ್ತಾರೆ. ಅದರಂತೆಯೇ ಮೈಸೂರು ನಗರದ ಲ್ಯಾನ್ಸ್‍ಡೌನ್ ಕಟ್ಟಡ ಹಾಗೂ ದೇವರಾಜ ಮಾರುಕಟ್ಟೆ ಕಟ್ಟಡವನ್ನು ಸಂರಕ್ಷಿಸಬಹುದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಹಲವಾರು ಸರ್ಕಾರಿ ಸಭೆಗಳಲ್ಲಿ ಈ ವಿಚಾರವನ್ನು ಸೂಚಿಸುತ್ತಾ ಬಂದಿಧದೇನೆ. ಆದರೆ ಕಾಣದ ಕೈಗಳು ಅದನ್ನು ನೆಲಸಮ ಗೊಳಿಸಲು ಹುನ್ನಾರ ನಡೆಸುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಸಂಧರ್ಭದಲ್ಲಿ ಅಭಿಯಾನದ ಸಂಚಾಲಕ ಕೆ.ಎಂ. ನಿಶಾಂತ್, ಪಾರಂಪರಿಕ ತಜ್ಞ ಪ್ರೋ. ರಂಗರಾಜನ್, ಎಂ.ಎನ್ ಧನುಷ್, ಸುದರ್ಶನ್, ಪುನಿತ್, ಅಜಯ್, ಆನಂದ್, ಹರ್ಷ ಹಾಗು ಹತ್ತಾರು ಅಂಗಡಿ ಮಾಲಿಕರು ಸಾರ್ವಜನಿಕರು ಉಪಸ್ಥಿತರಿದ್ದರು.