ಬೆಂಗಳೂರು: 8 ರಾಜ್ಯದ ಪ್ರೌಢ ಶಾಲೆ, ಕಾಲೇಜುಗಳಿಗೆ ಮೂರು ದಿಗಳ ರಜೆ ಘೋಷಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಂತಿ ಸೌಹಾರ್ದತೆ ಕಾಪಾಡುವಂತೆ ಜನರಲ್ಲಿ ಮನವಿ ಮಾಡಿದ್ದಾರೆ. ಸಿಎಂ ಆದೇಶದಂತೆ ಬುಧವಾರದಿಂದ ಮೂರು ದಿನ ರಾಜ್ಯದಲ್ಲಿ ಪ್ರೌಢಶಾಲೆ, ಕಾಲೇಜುಗಳಿಗೆ ರಜೆ ಇರಲಿದೆ. ಟ್ವಿಟರ್ನಲ್ಲಿ ಈ ಬಗ್ಗೆ ಪೋಸ್ಟ್ ಪ್ರಕಟಿಸಿರುವ ಅವರು, ಶಾಂತಿ ಮತ್ತು ಸೌಹಾರ್ದತೆ ಕಾಪಾಡುವಂತೆ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶಾಲಾ-ಕಾಲೇಜುಗಳ ಆಡಳಿತ ಮಂಡಳಿ ಹಾಗೂ ಕರ್ನಾಟಕದ ಜನತೆಗೆ ಮನವಿ ಮಾಡುತ್ತೇನೆ. ಮುಂದಿನ ಮೂರು ದಿನಗಳ ಕಾಲ ಎಲ್ಲಾ ಪ್ರೌಢಶಾಲೆಗಳು ಮತ್ತು ಕಾಲೇಜುಗಳನ್ನು ಮುಚ್ಚಲು ನಾನು ಆದೇಶಿಸಿದ್ದೇನೆ. ಎಲ್ಲರೂ ಸಹಕರಿಸಬೇಕಾಗಿ ವಿನಂತಿ, ಎಂದು ಅವರು ಬರೆದುಕೊಂಡಿದ್ದಾರೆ.

ಹಿಜಾಬ್ ವಿವಾದದಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ ಅರ್ಜಿಯ ವಿಚಾರಣೆ ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ನಡೆಯಿತು. ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ವಾದ ಪ್ರತಿವಾದಗಳನ್ನು ಆಲಿಸಿ ಮುಂದಿನ ವಿಚಾರಣೆಯನ್ನು ನಾಳೆ ಮಧ್ಯಾಹ್ನ ೨:೩೦ಕ್ಕೆ ಮುಂದೂಡಿದ್ದಾರೆ.

                            ಉಗ್ರ ಸ್ವರೂಪ ತಳೆದ ಪ್ರತಿಭಟನೆ 

ಶಿವಮೊಗ್ಗದಲ್ಲಿ ಪರಿಸ್ಥಿತಿ ಕೈ ಮೀರಿದೆ . ಕಾಲೇಜಿನಲ್ಲಿ ಹಿಜಾಬ್ ಧಾರಣೆ ವಿರೋಧಿ ಪ್ರತಿಭಟನೆಗಿಳಿದಿದ್ದವರು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ . ರಾಷ್ಟ್ರಧ್ವಜವನ್ನು ಕೆಳಗಿಳಿಸಿ ಕೇಸರಿ ಧ್ವಜವನ್ನು ಹಾರಿಸಿದ್ದಾರೆ. ಈ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕಮಾರ್ ನಿವಾಸದಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತ ಮುಸ್ಲಿಂ ನಾಯಕರ ಸಭೆ ನಡೆಸಿದ ಬಳಿಕ ಮಾತನಾಡಿದ ಸಲೀಂ ಅಹ್ಮದ್, ಇಂದು ಶಿವಮೊಗ್ಗದಲ್ಲಿ ಇಡೀ ದೇಶವೇ ತಲೆತಗ್ಗಿಸುವಂಥ ಕೆಲಸ ಆಗಿದೆ. ರಾಷ್ಟ್ರ ಧ್ವಜವನ್ನ ಕೆಳಗಿಳಿಸಿ ಕೇಸರಿ ಧ್ವಜ ಹಾಕಿದ್ದಾರೆ, ಇದು ಬಹಳ ದುಃಖ ತರಿಸಿದೆ. ಈ ಬಗ್ಗೆ ಸಿಎಂ ಬೊಮ್ಮಾಯಿಗೆ ಡಿಕೆಶಿ ಮಾಹಿತಿ ನೀಡಿದ್ದಾರೆ. ಒಂದು ವಾರ ಕಾಲೇಜು ಬಂದ್ ಮಾಡಬೇಕು , ಆನ್ ಲೈನ್ ಮೂಲಕ ತರಗತಿಗಳು ನಡೆಸಲಿ ಎಂದು ಆಗ್ರಹಿಸಿದರು. ಇದರ ಹಿಂದೆ ರಾಜಕೀಯ ಷಡ್ಯಂತ್ರ ಇದೆ. ನಾವು ಎಲ್ಲಿಗೆ ತಲುಪುತ್ತಿದ್ದೇವೆ ಈ ವಿಷಯದಲ್ಲಿ ಸರ್ಕಾರ ಎಡವಿದೆ ಎಂದು ಕಿಡಿಕಾರಿದರು.

                           ಶಿವಮೊಗ್ಗದಲ್ಲಿ ೨ ದಿನ ನಿಷೇಧಾಜ್ಞೆ

ಶಿವಮೊಗ್ಗದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿರುವ ಹಿನ್ನೆಲೆಯಲ್ಲಿ ೧೪೪ ಸೆಕ್ಷನ್ ಜಾರಿ ಮಾಡಲಾಗಿದೆ. ಎರಡು ದಿನಗಳ ನಗರ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಶಿಕಾರಿಪುರ ಪಟ್ಟಣದಲ್ಲಿ ಉದ್ರಿಕ್ತ ಯುವಕರ ಗುಂಪಿನಿಂದ ಕಲ್ಲು ತೂರಾಟ ನಡೆದು, ಬಸ್ನ ಗಾಜುಗಳು ಪುಡಿಪುಡಿಯಾಗಿವೆ. ಶಿಕಾರಿಪುರ ಪಟ್ಟಣದ ಜೂನಿಯರ್ ಕಾಲೇಜ್ ಮುಂಭಾಗ ಘಟನೆ ನಡೆದಿದೆ. ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗುತ್ತಿರುವ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಶಿವಮೊಗ್ಗ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಶಾಲಾ- ಕಾಲೇಜುಗಳಿಗೆ ರಜೆ ಸಹ ಘೋಷಣೆ ಘೋಷಿಸಲಾಗಿದೆ. ಈ ಬಗ್ಗೆ ಶಿವಮೊಗ್ಗ ತಹಶೀಲ್ದಾರ್ ಎನ್.ಜೆ.ನಾಗರಾಜ್ ಆದೇಶ ಹೊರಡಿಸಿದ್ದಾರೆ.