ಕ್ರಿ.ಶ.೧೯೩೧ರಲ್ಲಿ ಜನಿಸಿದ ಗುರುರಾಜಲುನಾಯ್ಡು ಹರಿಕಥೆಯ ಪಿತಾಮಹರಲ್ಲಿ ಅಗ್ರಜನೆಂದು ಜನಪ್ರಿಯರಾದರು. ಇವರ ಜತೆಗೆ ಭದ್ರಗಿರಿ ಅಚ್ಯುತದಾಸ್ ಮತ್ತು ಕೇಶವದಾಸ್ ಅವರೂ ಸೇರಿಕೊಂಡು ಹರಿಕಥಾ ರತ್ನತ್ರಯರಾಗಿ ಪ್ರಖ್ಯಾತರಾದರು. ಈ ಮೂವರು ವಿದ್ವಾಂಸರ ಹರಿಕಥೆ/ಶಿವಕಥೆ ಕಾರ್ಯಕ್ರಮಗಳು ನಮ್ಮ ರಾಜ್ಯ ಮತು ದೇಶದಲ್ಲಷ್ಟೆ ಅಲ್ಲ ಹಲವಾರು ವಿದೇಶಗಳಲ್ಲೂ ಜನಜನಿತವಾಗಿ ಪ್ರಸಿದ್ಧಿಯಾಗಿವೆ. ಅಂದಾಜು ೪೫ ವರ್ಷ ಪರ್ಯಂತ ಪ್ರಪಂಚದಾದ್ಯಂತ ಸಾವಿರಾರು ಸ್ಥಳಗಳಲ್ಲಿ ಈ ಮೂವರ ವಿಶೇಷವಾಗಿ ಗುರುರಾಜಲುನಾಯ್ಡುರವರ ಹರಿಕಥೆಯನ್ನು ಕೇಳಲು ಓಲ್ಡ್-ಯಂಗ್ ಪೀಪಲ್ ಸೇರಿದಂತೆ ಮಾಡ್ರನ್ ಯುವ ಪೀಳಿಗೆಯ ಜತೆಗೇ ಶಾಲಾ-ಕಾಲೇಜು ವಿದ್ಯಾರ್ಥಿಗಳು, ವಕೀಲ-ನ್ಯಾಯಾಧೀಶರು, ಎಂಜಿನಿಯರು, ವೈದ್ಯರು, ಉದ್ಯಮಿಗಳು, ಕಲಾವಿದರು, ಗೃಹಿಣಿಯರು ಆದಿಯಾಗಿ ಪ್ರತಿಯೊಬ್ಬರೂ ಇಷ್ಟಪಟ್ಟು ಹಾಜರಾಗುತ್ತಿದ್ದರು. ಆಬಾಲವೃದ್ಧರಾದಿಯಾಗಿ ಯಾವ ಭೇದ ಭಾವ ಇಲ್ಲದಂತೆ ಎಲ್ಲಾ ಜಾತಿ ಮತ ಧರ್ಮ ಬಡವ ಬಲ್ಲಿದ ಪಂಡಿತ ಪಾಮರ ಎಲ್ಲವರ್ಗದವರೂ ಮುಗಿಬೀಳುತ್ತಿದ್ದರು.
ಕಿಕ್ಕಿರಿದ ಜನಸಂದಣಿ ಸೇರುತ್ತಿತ್ತು. ಇದಕ್ಕೆ ಕಾರಣ: ಇವರು ಕಥೆ ಹೇಳುತ್ತಿದ್ದ ರೀತಿನೀತಿಯೆ ಹಾಗಿತ್ತು. ನವರಸಭರಿತ ಭಾವಭಂಗಿ ಜತೆಗೆ ಸ್ವಾಮಿ ವಿವೇಕಾನಂದರನ್ನು ನೆನಪಿಸುವಂಥ ಕೇಸರಿ ಬಣ್ಣದ ಶಿರವಸ್ತ್ರಧಾರಿಯಾಗಿ ವಿಜೃಂಭಿಸುತ್ತ ಪೌರಾಣಿಕ-ಐಟಿಹಾಸಿಕ ಪಾತ್ರಗಳನ್ನು ಪ್ರೇಕ್ಷಕರ ಕಣ್ಣಮುಂದೆ ತಂದು ನಿಲ್ಲಿಸುತ್ತಿದ್ದರು. ನಡುನಡುವೆ ಹಾಸ್ಯದ ಉಪಕತೆಗಳನ್ನೂ ಹೇಳುತ್ತ ಕೇಳುಗರನ್ನು ಮಂತ್ರಮುಗ್ಧರನ್ನಾಗಿಸಿ ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಿದ್ದರು. ಅದೇರೀತಿ ದುಃಖದ ಸನ್ನಿವೇಶಗಳನ್ನು ಚಿತ್ರಣಮಾಡುತ್ತ ಕಲ್ಲು ಹೃದಯದವರನ್ನೂ ಅಳಿಸುತ್ತಿದ್ದರು. ಕೇಳುಗರ ತನು-ಮನ ಗೆದ್ದ ಹರಿಕಥಾ ದಾಸರಾಗಿದ್ದರು. ಇವರ ಕಥೆ-ಉಪಕಥೆಗಳಲ್ಲಿ ನೀತಿಬೋಧಕ ಸಾಮಾಜಿಕಸಂದೇಶದ ಸತ್ಸಂಗಸಾರ್ಥಕತೆ ತುಂಬಿತುಳುಕುತ್ತಿತ್ತು. ಇಂಥ ಸಹೃದಯವಂತರ ಗದ್ಯ-ಪದ್ಯದ ಹಾಡುಗಾರಿಕೆ-ವಿವರಣೆಯ ಸಮ್ಮಿಲನವುಳ್ಳ ಧ್ವನಿ ಮತ್ತು ಶೈಲಿ ಆಪ್ಯಾಯಮಾನ ಆಗಿರುತ್ತಿತ್ತು. ಹರಿಕಥಾ ಚಕ್ರವರ್ತಿ ಮತ್ತು ಕೀರ್ತನಕೇಸರಿ ಬಿರುದುಗಳು ದೊರಕಿದ್ದವು. ಸುಮಾರು ೩೦ಕ್ಕೂ ಹೆಚ್ಚು ಬಗೆಯ ಹರಿಕಥೆಗಳನ್ನು ವಿಶಿಷ್ಟ ಶೈಲಿಯಿಂದ ಕರಗತ ಮಾಡಿಕೊಂಡಿದ್ದ ಮಹಾನ್ ಹರಿಕಥಾವಿದ್ವಾಂಸ-ಕಂ-ಸಿನಿಮಾನಟ!
ಗುರುರಾಜಲುನಾಯ್ಡು ಅನಿರೀಕ್ಷಿತವಾಗಿ ಮತ್ತು ಆಕಸ್ಮಿಕವಾಗಿ ಅರುಣಕುಮಾರ್ ಎಂಬ ಹೆಸರಿಂದ ಚಲನಚಿತ್ರನಟನಾಗಿ ಚಂದನವನದಲ್ಲಿ ತಮ್ಮದೇ ಆದ ರೀತಿಯಲ್ಲಿ ಒಂದು ಹೊಸ ಛಾಪು ಮೂಡಿಸಿದ್ದ ಬಲು ಅಪರೂಪದ ಕಲಾವಿದ. ಇವರು ದ.ಭಾರತದ ಖ್ಯಾತ ನಟ-ನಿರ್ಮಾಪಕ-ನಿರ್ದೇಶಕರಾದ ಬಿ.ಆರ್.ಪಂತುಲುರವರ ಪದ್ಮಿನಿ ಪಿಕ್ಚರ್ಸ್ ಸಂಸ್ಥೆಯ ಕನ್ನಡ-ತಮಿಳು-ತೆಲುಗು ಮೂರು ಭಾಷೆಗಳಲ್ಲಿ ತಯಾರಾಗಿ ೧೯೬೦ರಲ್ಲಿ ಬಿಡುಗಡೆಯಾದ ಮಕ್ಕಳರಾಜ್ಯ ಚಲನಚಿತ್ರದ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡಿದರು. ನವಯುವಕನಾಗಿ ಮುಗ್ಧ ಅಭಿನಯದಿಂದ ಚಿತ್ರತಂಡದ ಮೆಚ್ಚುಗೆ ಪಡೆದ ಮೃದುನಟ. ಮಧುಮಾಲತಿ ಚಿತ್ರದಲ್ಲಿ ರಾಜಕುಮಾರ್-ಉದಯಕುಮಾರ್‌ರೊಡನೆ ಅವರಷ್ಟೆ ಪ್ರಮುಖಪಾತ್ರದಲ್ಲಿ ಅಭಿನಯಿಸಿ ಜನಪ್ರಿಯ ನಟರಾದರು. ಡಾ.ರಾಜ್ ಅಭಿನಯದ ಶ್ರೀಕೃಷ್ಣರುಕ್ಮಿಣಿಸತ್ಯಭಾಮ ಮತ್ತು ಮೂರೂವರೆವಜ್ರಗಳು ಚಿತ್ರಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿ ರಾಜ್ಯದಾದ್ಯಂತ ಅಭಿಮಾನಿ ಬಳಗ ಗಿಟ್ಟಿಸಿಕೊಂಡರು. ಆನಂದಬಾಷ್ಪ-ಹಣ್ಣೆಲೆಚಿಗುರಿದಾಗ ಚಿತ್ರಗಳಲ್ಲೂ ಮಿಂಚಿದ್ದಲ್ಲದೆ ಸ್ವಯಂ ರಾಜಕುಮಾರ್ ಅವರಿಂದ ಶಹಭಾಷ್‌ಗಿರಿ ಪಡೆದರು. ಪ್ರೇಮಮಯಿ, ಸತೀಸುಕನ್ಯ, ಇಮ್ಮಡಿಪುಲಿಕೇಶಿ, ಚಂದ್ರಹಾಸ, ಮಿಸ್‌ಲೀಲಾವತಿ, ನಕ್ಕರೆಅದೇಸ್ವರ್ಗ, ಭಲೇಅದೃಷ್ಟವೋಅದೃಷ್ಟ, ನಾಮೆಚ್ಚಿದಹುಡುಗ, ಪ್ರೇಮಕ್ಕೂಪರ್ಮಿಟ್ಟೆ, ಸುಭದ್ರಾಕಲ್ಯಾಣ, ಭಕ್ತಸಿರಿಯಾಳ, ಮುಂತಾದ ೩೨ಕನ್ನಡ ಚಲನಚಿತ್ರಗಳಲ್ಲದೆ ಕೆಲವು ತೆಲುಗು, ತಮಿಳು ಸಿನಿಮಾದಲ್ಲೂ ಅಭಿನಯಿಸಿ ಖ್ಯಾತ ನಟರಾದರು. ಕಾಲಕ್ರಮೇಣ ಪಾರ್ಟ್‌ಟೈಂ ಸಿನಿಮಾ ಹುದ್ದೆಗೆ ಗುಡ್‌ಬೈ ಹೇಳಿ ಫ಼ುಲ್‌ಟೈಂ ಹರಿಕಥಾ ಹುದ್ದೆಯನ್ನು ಕೊನೆತನಕ ಪರಿಪಾಲಿಸಿದರು. ೧೯೯೩ರಲ್ಲಿ ತಮ್ಮ ೬೩ನೇ ವಯಸ್ಸಲ್ಲಿ ಸ್ವರ್ಗಸ್ಥರಾದನಂತರ ಇವರ ಹೆಣ್ಣುಮಕ್ಕಳೂ ಹರಿಕಥಾ ವಿದ್ವಾಂಸರಾಗಿ ಜನಪ್ರಿಯರಾಗಿದ್ದಾರೆ.

*ಕುಮಾರಕವಿ ಬಿ.ಎನ್.ನಟರಾಜ್[೯೦೩೬೯೭೬೪೭೧]
ಬೆಂಗಳೂರು-೫೬೦೦೭೨
೧೯೬೭ನ