೧೯೬೭ರಷ್ಟು ಹಿಂದೆಯೆ ನಟ ನಿರ್ಮಾಪಕ ನಿರ್ದೇಶಕನಾಗಿ ಹಾಗೂ ಇಂಗ್ಲಿಷ್ ಮಿಶ್ರಣದ ಕನ್ನಡ ಸಂಭಾಷಣೆ-ಹಾಡುಗಳನ್ನು ಸ್ವಯಂ ರಚಿಸಿ ಪ್ರೇಮಕ್ಕೂ ಪರ್ಮಿಟ್ಟೆ ಎಂಬ ಕನ್ನಡ ಫ಼ಿಲಮ್ ರಿಲೀಸ್ ಮಾಡಿದ ಬಹುಮುಖ ಪ್ರತಿಭೆಯ ಕಲಾರಸಿಕ ಕಲ್ಯಾಣಕುಮಾರ್! ಇದು ಕಂಗ್ಲಿಷ್ ಭಾಷೆಯುಳ್ಳ ಚಂದನವನದ ಮೊಟ್ಟಮೊದಲ ಸಿನಿಮ! ೭ನೇ ಜೂನ್ ೧೯೨೮ರಂದು ಬೆಂಗಳೂರಿನಲ್ಲಿ ಜನಿಸಿದ ಚೊಕ್ಕಣ್ಣ ಉರುಫ಼್ ವೆಂಕಟರಂಗನನ್ನು ಚೆನ್ನಾಗಿ ಓದಿಸಿ ಡಾಕ್ಟರ್ ಅಥವ ಎಂಜಿನಿಯರ್ ಪದವೀಧರ ನನ್ನಾಗಿ ಮಾಡಬೇಕೆಂಬ ಇವರ ತಂದೆ-ತಾಯಿ ಆಸೆ ಈಡೇರಲೇ ಇಲ್ಲ.

ಪದವಿ ವ್ಯಾಸಂಗ ಮಾಡುತ್ತಿರುವಾಗಲೆ ಸಿನಿಮಾಗೀಳು ಹೆಚ್ಚಿಸಿಕೊಂಡು ಮದ್ರಾಸಿಗೆ ಕಾಲುಕಿತ್ತ ಈಸ್ಫುರದ್ರೂಪಿ ಯುವಕ ತಮ್ಮ ಸಿನಿಜರ್ನಿಯನ್ನು ಉತ್ತಮವಾಗಿಯೇ ಪ್ರಾರಂಭಿಸಿದರು. ೧೯೫೪ರಲ್ಲಿ ಬಿಡುಗಡೆಯಾದ ನಟಶೇಖರ ಕನ್ನಡ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿ ಅಂದಿನಕಾಲಕ್ಕೆ ತಮಿಳು-ತೆಲುಗು-ಕನ್ನಡ ಮೂರೂಭಾಷೆಯ ಚಿತ್ರರಂಗದ ಟಾಪ್‌ಹೀರೋಗಳ ಪಟ್ಟಿಗೆ ಸೇರಿದ ನಂತರ ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲೂ ನಟಿಸಿದ ಕನ್ನಡದ ಪ್ರಪ್ರಥಮ ಪಂಚಭಾಷಾ ಚಿತ್ರನಟ! ಜತೆಗೆ ಚಂದನವನದ ಮೊಟ್ಟಮೊದಲ ಸೂಪರ್ ಸ್ಟಾರ್ ಎಂಬ ದಾಖಲೆಯುಳ್ಳ ಪ್ರತಿಭಾವಂತ! ಮಾವನಮಗಳು, ಮನೆಅಳಿಯ, ಚಿನ್ನದಗೊಂಬೆ ನನ್ನಕರ್ತವ್ಯ ಮುಂತಾದ ೬ ಚಿತ್ರಗಳಲ್ಲಿ ಟಾಪ್ ಹೀರೋಯಿನ್ ಜಯಲಲಿತ [ಮಾಜಿ ಮುಖ್ಯಮಂತ್ರಿ] ಜತೆಗೆ ನಟಿಸಿದ ಚಂದನವನದ ಏಕೈಕ ಹೀರೋ!

ಅಮರಶಿಲ್ಪಿ ಜಕಣಾಚಾರಿ, ಕನ್ನಡ ಚಿತ್ರರಂಗದ ಪ್ರಪ್ರಥಮ ಕಲರ್ ಚಿತ್ರದ ನಾಯಕನಟನೆಂಬ ಹೆಗ್ಗಳಿಕೆ! ಸ್ವಯಂ ನಿರ್ಮಾಪಕ-ನಿರ್ದೇಶಕನಾಗಿ ೧೫ ಚಿತ್ರಗಳನ್ನು ಬಿಡುಗಡೆ ಮಾಡಿ ಸೈ ಎನಿಸಿಕೊಂಡು ಹಲವಾರು ಹೊಸ ನಟ-ನಟಿಯರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಗೌರವಕ್ಕೂ ಪಾತ್ರರಾಗಿದ್ದರು. ಕಲ್ಯಾಣ್‌ಕುಮಾರ್ ಸುಮಾರು ೧೦ ವರ್ಷಕಾಲ ಬರ್ಕಲೀ ಸಿಗರೇಟ್ ಟ್ರೈಲರ್ ಫ಼ಿಲಂ ಜಾಹೀರಾತು ಆಂಕರ್ ಆಗಿಯೂ ನಟಿಸಿದ್ದರು.  ರಾಜಕುಮಾರ್ ಮತ್ತು ಉದಯಕುಮಾರ್ ಜತೆಗೆ ಭೂದಾನ ಎಂಬ ಏಕೈಕ ಚಿತ್ರದಲ್ಲಿ ನಟಿಸಿ ಮಿಂಚಿದ್ದರು. ರಾಜ್ ಚಿತ್ರಗಳಾದ ಓಹಿಲೇಶ್ವರ ಭೂಕೈಲಾಸ ಫ಼ಿಲಂಗಳಲ್ಲಿ ಉತ್ತಮ ಅಭಿನಯ ನೀಡಿ ಹಲವಾರು ರಾಜ್ಯಪ್ರಶಸ್ತಿ, ಫ಼ಿಲಂಫ಼ೇರ್ ಪ್ರಶಸ್ತಿ ಹಾಗೂ ರಾಷ್ಟ್ರಪ್ರಶಸ್ತಿಗಳನ್ನು ಗಳಿಸಿದ್ದರು. 

ಇವರ ಪ್ರತಿಯೊಂದು ಸಿನಿಮಾದ ಬಿಡುಗಡೆಯ ಮೊದಲೆರಡುವಾರ ಶಾಲಾಕಾಲೇಜು ವಿದ್ಯಾರ್ಥಿಗಳ ದಂಡು ಸೇರಿ ಹೌಸ್‌ಫ಼ುಲ್ ಇರುತ್ತಿತ್ತು! ಒಮ್ಮೊಮ್ಮೆ ರಾಜಕುಮಾರ್ ಚಿತ್ರಗಳಿಗಿಂತ ಹೆಚ್ಚು ಜನಪ್ರಿಯತೆ, ಗಲ್ಲಾಪೆಟ್ಟಿಗೆ, ಯಶಸ್ಸು, ದೊರಕುತ್ತಿತ್ತು. ಎಲ್ಲವರ್ಗದ ಎಲ್ಲಭಾಷೆಯ ಜನರೂ ಇ[ಕ]ಷ್ಟಪಟ್ಟು ಇವರ ಚಿತ್ರಗಳನ್ನು ನೋಡುತ್ತಿದ್ದರು. ೧೯೬೩ವರೆಗೆ ಕನ್ನಡ ಚಿತ್ರರಂಗದ ನಂಬರ್ ೧ ಸ್ಥಾನ ಆಕ್ರಮಿಸಿಕೊಂಡಿದ್ದರು. ಆದರೆ, ಬಂಗಾರಿ ಸಿನಿಮಾ ನಂತರ ೧೯೭೨ರವರೆಗೆ ೨ನೇ/೩ನೇ ಸ್ಥಾನಕ್ಕೆ ಇಳಿಯಲ್ಪಟ್ಟು, ರಾಜ್‌ಗೆ ಮೊದಲಸ್ಥಾನ ದೊರಕಿತು! ಕಾಲಕ್ರಮೇಣ ಪೋಷಕ ಪಾತ್ರಗಳಲ್ಲಿ ನಟಿಸುವ ಸ್ಥಿತಿಗತಿ ಒದಗಿತು! ೧೯೭೫ರಿಂದ ಸತತ ಪೋಷಕ ನಟನಾಗಿ ಮಾತ್ರ ನಟಿಸುತ್ತಿರುವಾಗಲೂ ತಮ್ಮ ಪ್ರತಿಷ್ಠೆಗೆ ದಾಸರಾಗಿದ್ದರು? ವಿಷ್ಣುವರ್ಧನ್ ಅಂಬರೀಷ್ ಮುಂತಾದ ಪ್ರಮುಖ ಹೀರೋಗಳ ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದ ಇವರು ಕಡೆಕಡೆಗೆ ಟಿ.ವಿ.ಸೀರಿಯಲ್‌ಗಳಲ್ಲೂ ಅಭಿನಯಿಸುವ ಹಂತ ತಲುಪಿದರು!

ಪಂಚಭಾಷಾ ನಟನಾಗಿ ೧೩೦ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ಕಲ್ಪನಾ ಜತೆಗಿನ ಬೆಳ್ಳಿಮೋಡ ಅರಿಶಿನಕುಂಕುಮ, ಬಿ.ಸರೋಜಾದೇವಿ ಜತೆಗಿನ ಬೆರೆತಜೀವ, ಜಯಂತಿ-ವಂದನಾ ಜತೆಗೆ ನಟಿಸಿದ್ದ ಕಲ್ಲುಸಕ್ಕರೆ ಕನ್ನಡ ಸಿನಿಮಾಗಳಲ್ಲದೆ ನೆಂಜಿಲ್‌ಒರುಆಲಯಂ ತಮಿಳು ಚಿತ್ರದಲ್ಲಿ ನಟಿಸಿ ಕಾಲಿವುಡ್ನಲ್ಲೂ ಬಿರುಗಾಳಿ ಎಬ್ಬಿಸಿದ್ದ ಅಧ್ಭುತ ಕಲಾವಿದ! ಯಾವಾಗಲೂ ಯಾವುದಕ್ಕೂ ಯಾರೊಡನೆಯೂ ಕಾಂಪ್ರಮೈಸ್ ಆಗದೆ ಬದುಕಿದ್ದ ಕಲಾರಸಿಕ ಕಲ್ಯಾಣ್‌ಕುಮಾರ್ ದಿನಾಂಕ ೧.೮.೧೯೯೯ರಂದು ಬೆಂಗಳೂರಲ್ಲಿ ನಿಧನರಾದರು. ತಮ್ಮ ೭೦ನೇ ಇಳಿವಯಸ್ಸಲ್ಲೂ ನಟಿಸಿದ್ದ ಕನ್ನಡ ಸಿನಿಮಾ ಸಂಕಟಬಂದಾಗ ವೆಂಕಟರಮಣ ಫ಼ಿಲಂ ಅವರು ವಿಧಿವಶರಾದ ನಂತರ ೨೦೦೦ನೇ ಇಸವಿಯಲ್ಲಿ ರಿಲೀಸ್ ಆದರೂ ಸಹ ಯಶಸ್ಸು ಗಳಿಸಿತ್ತು!

*ಕುಮಾರಕವಿ ಬಿ.ಎನ್.ನಟರಾಜ್ [೯೦೩೬೯೭೬೪೭೧]

ಬೆಂಗಳೂರು ೫೬೦೦೭೨