ಟೈಗರ್ ಪ್ರಭಾಕರ್

’ರೌಡಿರಂಗಣ್ಣ’ ಚಿತ್ರದ ಮೂಲಕ ೧೯೬೮ರಲ್ಲಿ ಸಿನಿಮಾ ರಂಗಕ್ಕೆ ಮೈಸೂರಿನ ಪ್ರೀಮಿಯರ್ ಸ್ಟುಡಿಯೋ ಮೂಲಕ ಪಾದಾರ್ಪಣೆ ಕ್ರಿಶ್ಚಿಯನ್ ಧರ್ಮದ ಈತ ಚಿಕ್ಕಂದಿನಿಂದಲೂ ಬಾಡಿ ಬಿಲ್ಡರ್. ಬೆಂಗಳೂರು ಕಂಟೋನ್ಮೆಂಟ್‌ನ ಪುಲಿಕೇಶಿ ನಗರದಲ್ಲಿ ೧೯೫೦ರಲ್ಲಿ ಜನಿಸಿದರು. ತಾಯಿ ತೌರುಮನೆ ಮೈಸೂರು ನಗರದ ಸೌತ್ ಇಂಡಸ್ಟ್ರೆಯಲ್ ಸಬರ್ಬ್. ಬಹಳ ವರ್ಷ ಮೈಸೂರಿನಲ್ಲೂ ಜಿಮ್ ಮಾಡಿಕೊಂಡಿದ್ದಾಗ ನಿರ್ಮಾಪಕ-ನಿರ್ದೇಶಕ ಎಂ.ಪಿ. ಶಂಕರ್ ಕಣ್ಣಿಗೆ ಬೀಳುತ್ತಾರೆ.  ಗುಂಗುರು ಕೂದಲು ೬ ಪ್ಯಾಕ್ ಬಾಡಿ ಎಲ್ಲರನ್ನು ಆಕರ್ಷಿಸುವಂಥ ನಡೆ-ನುಡಿ. ಹಾಗಾಗಿ ಎಂ.ಪಿ.ಶಂಕರ್ ತಮ್ಮ ಎಲ್ಲಾ ಚಿತ್ರಗಳಿಗೆ ಇವರನ್ನು ಪರ್ಮನೆಂಟ್ ನಟನಾಗಿ ಬುಕ್ ಮಾಡಿಕೊಳ್ಳುತ್ತಾರೆ. ಕಾಡಿನರಾಜ, ಸೇಡಿಗೆಸೇಡು, ಗಂಧದಗುಡಿ ಮುಂತಾದ ಅನೇಕ ಚಿತ್ರಗಳಲ್ಲಿ ಅಭಿನಯಿಸುತ್ತಾರೆ. ತಾವು ಹೀರೋ ಆಗಿ ನಟಿಸುವ ವರೆಗೆ ಕನ್ನಡದ ಬೆಸ್ಟ್ ವಿಲನ್‌ಗಳಲ್ಲಿ ಇವರೂ ಒಬ್ಬರು.  ಇವರು ನಟಿಸಿದ ಅಂತ, ಸಾಹಸಸಿಂಹ, ಗರುಡರೇಖೆ ಮುಂತಾದ ಅನೇಕ ಚಿತ್ರಗಳು ಹಣ ಮಾತು ಕೀರ್ತಿ ತಂದುಕೊಟ್ಟವು. ದಿನದಿಂದ ದಿನಕ್ಕೆ ಚಿತ್ರದಿಂದ ಚಿತ್ರಕ್ಕೆ ಇವರ ಅಭಿನಯದ ಹೆಸರು ಜನಪ್ರಿಯವಾಯಿತು.  ಕನ್ನಡಿಗರು ಇವರ ಖಳನಾಯಕ ಪಾತ್ರವನ್ನು ಒಪ್ಪಿಕೊಂಡರು. ಇವರೊಡನೆ ವಿಲನ್ ಆಗಿ ನಟಿಸುತ್ತಿದ್ದ ಸುಧೀರ್ ಮಾತ್ರ ವಿಲನ್ ಆಗೇ ಉಳಿದರು.  ಪ್ರಭಾಕರ್ ಮಾತ್ರ ದೇವರ ಕೃಪೆಯಿಂದಲೋ ಅದ್ರುಷ್ಟದಿಂದಲೋ ಸುಧೀರ್ ವಿರುದ್ಧವೇ ಹೀರೋ ಆಗಿ ಅನೇಕ ಚಿತ್ರಗಳಲ್ಲಿ ಅಭಿನಯಿಸಿದರು.

ಪ್ರಭಾಕರ್‌ಗೆ ಹೆಸರು ಬಂದಿದ್ದು ’ಟೈಗರ್’ ಚಿತ್ರದ ಮೂಲಕ.  ಇದು ಅವರ ಜೀವನದಲ್ಲಿ ಕ್ಲಿಕ್ ಅಥವಾ ಟರ್ನಿಂಗ್ ಪಾಯಿಂಟ್. ಕನ್ನಡ ಚಿತ್ರ ರಸಿಕರು ಅಥವಾ ಅಭಿಮಾನಿಗಳು ಅದುವರೆಗೂ ವಿಲನ್ ಪಾತ್ರದಲ್ಲಿ ಮೆಚ್ಚಿಕೊಂಡಿದ್ದರೂ ಈತ ಹೀರೋ ಆದಾಗ ಅವರ ಪಾತ್ರದ ಪ್ರಾಮಾಣಿಕತನವನ್ನು ಮೆಚ್ಚಿ ಒಪ್ಪಿ ಸ್ವಾತಗಿಸಿದರು. ಇನ್ನು ಮುಂದಿನ ೧೦೦ ಚಿತ್ರಗಳವರೆಗೂ ಹೀರೋ ಆಗೆ ಇದ್ದವರು ಹಿಂದಿರುಗಿ ನೋಡಲೇ ಇಲ್ಲ. ಪ್ರಭಾಕರ್‌ಗೆ ಮೊದಲೇ ಶ್ರೀಮತಿ ಅಂಜು ಎಂಬ ಮಡದಿ ಇದ್ದರೂ ಸಹ ನಂತರ ಚಿತ್ರನಟಿ ಜಯಮಾಲರನ್ನು ಮೆಚ್ಚಿ, ಪ್ರೀತಿಸಿ ತಮ್ಮ ದ್ವಿತೀಯ ಪತ್ನಿಯನ್ನಾಗಿ ಸ್ವೀಕರಿಸಿದ್ದರು.  ಒಟ್ಟು ೫ ಮಕ್ಕಳ ತಂದೆಯಾಗಿ ಹೇಗೋ ಕೈತುಂಬ ಇದ್ದ ಚಿತ್ರಗಳಲ್ಲಿ ನಟಿಸುತ್ತಿದ್ದರು.  ಟೈಗರ್, ಒಂದೇಗೂಡಿನಹಕ್ಕಿಗಳು, ಕಿಲಾಡಿತಾತ, ಮದರ್‌ಇಂಡಿಯಾ, ವಿಘ್ನೇಶ್ವರನ ವಾಹನ[ದ್ವಿಪಾತ್ರ] ಹಾಗೂ ಅಗ್ನಿಪರೀಕ್ಷೆ ಚಿತ್ರದ [ಜಸ್ಟೀಸ್ ಜಗನ್ನಾಥ್] ಪಾತ್ರಗಳು ಕನ್ನಡ ಕುಲಕೋಟಿ ಎಂದಿಗು ಮರೆಯದೆ ಸ್ಮರಿಸುವಂಥಾದ್ದು! ಇದ್ದಕ್ಕಿದ್ದಂತೆ ಟೈಗರ್ ಜೀವನದಲ್ಲಿ ಬಿರುಗಾಳಿ ಎದ್ದಿತು.  ನಟಿ ಜಯಮಾಲ ಇವರಿಂದ ದೂರವಾದರು. ಅವರ ವ್ಯಯಕ್ತಿಕ ಜೀವನ ಹಾಗೂ ಸಿನಿಮಾ ಜೀವನ ಮುದುಡಿ ಹೋಯಿತು. ದಿನೇ ದಿನೇ ಪ್ರಭಾಕರ್ ದೈಹಿಕ ಹಾಗು ಮಾನಸಿಕ ಸ್ಥಿತಿ ಬಿಗಡಾಯಿಸುತ್ತ ಬಹಳ ಕುಗ್ಗಿ ಹೋದರು.  ಅಂತ್ಯಕಾಲವು ದುರಂತಮಯ ಆಗುವ ಲಕ್ಷಣ ತಲುಪಿತು. ಹೆಚ್ಚೆಚ್ಚು ಮದ್ಯವ್ಯಸನಿ ಆದರು. ಶರೀರ ರೋಗದ ಗೂಡಾಯಿತು. ದ.ಭಾರತದ ೪ ಭಾಷೆಗಳಲ್ಲಿ ಒಟ್ಟು ೨೨೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿ ಕೊಂಡಿದ್ದ ಟೈಗರ್ ಪ್ರಭಾಕರ್ ಅನೇಕ ಪ್ರಶಸ್ತಿ ಬಹುಮಾನಗಳನ್ನು ಗಳಿಸಿದ್ದರು. ಕೊನೆಗೂ ಮದ್ಯದ ದಾಸರಾಗಿ ಸ್ವಯಂಕೃತ ಅಪರಾಧವೆಂಬಂತೆ ಅನಾರೋಗ್ಯದಿಂದ ತಮ್ಮ ಕೇವಲ ೫೧ನೇ ವಯಸ್ಸಿನಲ್ಲಿ ದಿನಾಂಕ ೨೫.೩.೨೦೦೧ ರಲ್ಲಿ ಬೆಂಗಳೂರಿನ ಮಲ್ಯ ಆಸ್ಪತ್ರೆಯಲ್ಲಿ ಟೈಗರ್ ಪ್ರಭಾಕರ್ ನಿಧನರಾದರು.  ಇವರ ಪುತ್ರ ವಿನೋದ್ ಪ್ರಭಾಕರ್ ಕೂಡ ತಂದೆಯಂತೆ ಮರಿ ಟೈಗರ್ ಪ್ರಭಾಕರ್ ಆಗಿ ಅವರ ಹೆಸರು ಉಳಿಸಲು ಅನನ್ಯ ಪ್ರಯತ್ನ ಮಾಡುತ್ತಿದ್ದಾರೆ.  ಈತ ನಾಯಕನಟನಾಗಿ ಕೆಲವಾರು ಚಿತ್ರಗಳಲ್ಲಿ ನಟಿಸುವುದರ ಜತೆಗೆ ’ನವಗ್ರಹ’ ಚಿತ್ರದಲ್ಲಿ ಚೆನ್ನಾಗಿ ಅಭಿನಯಿಸಿ ಜನಪ್ರಿಯರಾದರು.