ಚಾಮರಾಜನಗರ: ಕೊರೊನಾದಿಂದ ಹೈರಾಣರಾಗಿರುವ ರೈತರಿಗೆ ಚಿರತೆಯ ಹಾವಳಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಗುಂಡ್ಲುಪೇಟೆ ತಾಲ್ಲೂಕಿನ ಕಲ್ಲಿಗೌಡನ ಹಳ್ಳಿ ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ತೋಟದ ಮನೆಯಲ್ಲಿ ಕಟ್ಟಿ ಹಾಕಿದ್ದ ಕರುವೊಂದನ್ನು ಕೊಂದು ತಿನ್ನುವ ಮೂಲಕ ಭಯದ ವಾತಾವರಣ ಸೃಷ್ಟಿ ಮಾಡಿದೆ.
ಕಲ್ಲೀಗೌಡನಹಳ್ಳಿ ಗ್ರಾಮದ ಪ್ರಭುಸ್ವಾಮಿ ಅವರಿಗೆ ಸೇರಿದ ಸುಮಾರು ಮೂರು ವರ್ಷದ ಕರುವನ್ನು ಚಿರತೆ ಬಲಿ ಪಡೆದಿದೆ. ಎಂದಿನಂತೆ ತಮ್ಮ ಕೊಟ್ಟಿಗೆಯಲ್ಲಿ ರಾತ್ರಿ ಕಟ್ಟಿ ಹಾಕಿದ್ದರು. ಮಧ್ಯರಾತ್ರಿಯನ್ನು ಕೊಟ್ಟಿಗೆಗೆ ನುಗ್ಗಿದ ಚಿರತೆ ಕರುವನ್ನು ಕೊಂದು ಸ್ವಲ್ಪ ಭಾಗವನ್ನು ತಿಂದು ಪರಾರಿಯಾಗಿದೆ.
ಬೆಳಿಗ್ಗೆ ಎಂದಿನಂತೆ ಎದ್ದು ಕೊಟ್ಟಿಗೆಗೆ ತೆರಳಿದ ಪ್ರಭುಸ್ವಾಮಿ ಅವರಿಗೆ ಕರು ಸತ್ತು ಬಿದ್ದಿರುವುದು ಕಾಣಿಸಿದೆ. ಕಳೆದ ಒಂದು ವರ್ಷದಿಂದ ಕಲ್ಲಿಗೌಡನಹಳ್ಳಿ ಸುತ್ತಮುತ್ತ ಸುಮಾರು 20ಕ್ಕೂ ಹೆಚ್ಚು ಪ್ರಾಣಿಗಳ ಮೇಲೆ ಚಿರತೆ ದಾಳಿ ನಡೆಸಿ ಕೊಂದು ಹಾಕಿದೆ ಆದ್ದರಿಂದ ಇದನ್ನು ಶೀಘ್ರ ಸೆರೆ ಹಿಡಿಯಬೇಕೆಂದು ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.