ಚಾಮರಾಜನಗರ: ಬಾಲ ಕಾರ್ಮಿಕ ಪದ್ದತಿ, ಬಾಲ್ಯ ವಿವಾಹ, ಮಕ್ಕಳ ಕಳ್ಳತನ ತಡೆಯಲು ಹಲವು ಕಾಯ್ದೆಗಳು ಜಾರಿಗೆ ಬಂದಿದ್ದು ಪೋಷಕರಿಗೆ ಈ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ ಪ್ರಕರಣಗಳನ್ನು ತಡೆಯಬೇಕಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿಯವರಾದ ಎಸ್. ಕಾತ್ಯಾಯಿನಿದೇವಿ ಅವರು ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದ ಹಳೇ ಕೆ.ಡಿ.ಪಿ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಮಕ್ಕಳ ಹಕ್ಕುಗಳು, ಬಾಲ್ಯವಿವಾಹ ನಿಷೇಧ ಕಾಯ್ದೆ ಹಾಗೂ ಮಕ್ಕಳ ಗ್ರಾಮಸಭೆ ಕುರಿತು ಸಂವೇದನಾಶೀಲ ಕಾರ್ಯಗಾರದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಾಲ್ಯದಲ್ಲಿಯೇ ಮಕ್ಕಳಿಗೆ ದುಡಿಮೆಗೆ ದೂಡಿ ಅವರ ಹಕ್ಕುಗಳನ್ನು ಮೊಟಕುಗೊಳಿಸಬಾರದು. ಶಿಕ್ಷಣ ನೀಡಿ ಮಕ್ಕಳ ಉತ್ತಮ ಭವಿಷ್ಯಕ್ಕೆ ಪೋಷಕರು ಉತ್ತೇಜನ ನೀಡಬೇಕು. ಬಾಲಕಾರ್ಮಿಕ ಪದ್ದತಿಗೆ ಯಾವುದೇ ಕಾರಣಕ್ಕೂ ಪ್ರೋತ್ಸಾಹ ನೀಡಬಾರದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿಯವರು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರ್‌ರಾಜ್ ಅವರು ಮಕ್ಕಳ ಹಕ್ಕುಗಳ ರಕ್ಷಣೆ ಎಲ್ಲರ ಜವಾಬ್ಧಾರಿಯಾಗಿದೆ. ಮಕ್ಕಳ ಮೇಲೆ ನಡೆಯುವ ದೌರ್ಜನ್ಯ, ಶೋಷಣೆಗಳನ್ನು ತಡೆಯಲು ಮುಂದಾಗಬೇಕು. ಇದಕ್ಕಾಗಿ ಮಕ್ಕಳ ಹಕ್ಕುಗಳು ಹಾಗೂ ದೌರ್ಜನ್ಯ ತಡೆಯಲು ಇರುವ ಕಾಯ್ದೆಗಳ ಕುರಿತು ವ್ಯಾಪಕವಾಗಿ ತಿಳಿವಳಿಕೆ ನೀಡಬೇಕಿದೆ ಎಂದರು. 
ಶಿಕ್ಷಣದ ಕೊರತೆಯಿಂದ ಮಕ್ಕಳು ತಪ್ಪು ದಾರಿಗೆ ಸಾಗುತ್ತಿರುವುದನ್ನು ನೋಡಬಹುದಾಗಿದೆ. ಸರಿಯಾದ ಉತ್ತಮ ಮಾರ್ಗದರ್ಶನವಿಲ್ಲದಿದ್ದಲ್ಲಿ ಮುಂದೆ ಇನ್ನಷ್ಟು ತೊಂದರೆಗೆ ಒಳಗಾಗಬೇಕಾಗುತ್ತದೆ. ಹೀಗಾಗಿ ಬಾಲ್ಯದಲ್ಲಿಯೇ ಮಕ್ಕಳ ರಕ್ಷಣೆ ಹಾಗೂ ಭವಿಷ್ಯದ ಹಿತದೃಷ್ಠಿಯಿಂದ ಒಳ್ಳೆಯ ನಿರ್ಧಾರಗಳನ್ನು ತೆಗೆದುಕೊಳ್ಳಬೇಕೆಂದು ಕೆ.ಎಸ್. ಸುಂದರ್‌ರಾಜ್ ಅವರು ಸಲಹೆ ಮಾಡಿದರು.  
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಎಚ್.ಆರ್. ಸುರೇಶ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಗೋವಿಂದ, ಮೊಬಿಲಿಟಿ ಇಂಡಿಯಾದ ಹಿರಿಯ ಕಾರ್ಯಕ್ರಮ ವ್ಯವಸ್ಥಾಪಕರಾದ ಎಸ್.ಎನ್. ಆನಂದ್, ಚೈಲ್ಡ್ ರೈಟ್ಸ್ ಟ್ರಸ್ಟ್‌ನ ಎಸ್. ಜಯರಾಮ್‌ಸತೀಶ್, ಎಲ್. ಲಿಂಗರಾಜು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.