
ಚಾಮರಾಜನಗರ:ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲಿ ಪ್ರತಿ ಮನೆಮನೆಯಲ್ಲೂ, ಎಲ್ಲಾ ಸರ್ಕಾರಿ ಕಟ್ಟಡಗಳು ಹಾಗೂ ವಾಣಿಜ್ಯ ಮಳಿಗೆಗಳಲ್ಲಿ ಧ್ವಜ ಹಾರಿಸುವ ಹರ್ ಘರ್ ತಿರಂಗಾ ಅಭಿಯಾನ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಇಂದು ಚಾಲನೆ ನೀಡಿದರು.
ನಗರದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿಂದು ಸ್ವಾತಂತ್ರ್ಯ ಧ್ವಜಾರೋಹಣ ನೆರವೇರಿಸಿದ ಬಳಿಕ ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದವರೆಗೆ ಹಮ್ಮಿಕೊಳ್ಳಲಾಗಿದ್ದ ಸ್ವಾತಂತ್ರ್ಯದ ನಡಿಗೆ ಜಾಥಾಗೆ ಹಸಿರು ನಿಶಾನೆ ತೋರಿದರು.
ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಕುರಿತು ಜಾಗೃತಿ ಮೂಡಿಸಲು ಆಯೋಜಿಸಲಾಗಿದ್ದ ಆಕರ್ಷಕ ಜಾಥಾ ಕಾರ್ಯಕ್ರಮದಲ್ಲಿ ಸ್ವತಹ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ತ್ರಿವರ್ಣ ಧ್ವಜ ಹಿಡಿದು ಹೆಜ್ಜೆ ಹಾಕಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರು ಜಿಲ್ಲಾಧಿಕಾರಿಯವರಿಗೆ ಸಾಥ್ ನೀಡಿದರು.
ಜಾಥಾ ಕಾರ್ಯಕ್ರಮದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳು, ಸಿಬ್ಬಂದಿ, ವಿವಿಧ ಶಾಲಾಮಕ್ಕಳು, ಅಂಗನವಾಡಿ ಕಾರ್ಯಕರ್ತೆಯರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಅದರಲ್ಲೂ ಶಾಲಾ ವಿದ್ಯಾರ್ಥಿಗಳು ೩೦ಅಡಿ ಉದ್ದದ ತ್ರಿವರ್ಣ ಧ್ವಜ ಹಿಡಿದು ಜಾಥಾದ ಉದ್ದಕ್ಕೂ ಸಾಗಿದ್ದು ನೋಡುಗರ ಗಮನ ಸೆಳೆಯಿತು. ಬೋಲೋ ಭಾರತ್ ಮಾತಾಕೀ ಉದ್ಘೋಷಗಳು ಮುಗಿಲು ಮುಟ್ಟುವಂತಿತ್ತು.
ಜಿಲ್ಲಾಡಳಿತ ಭವನದಿಂದ ಹೊರಟ ಸ್ವಾತಂತ್ರ್ಯ ಅಮೃತ ಮಹೋತ್ಸವದ ಜಾಥಾ ಬಿ. ರಾಚಯ್ಯ ಜೋಡಿ ರಸ್ತೆ ಮೂಲಕ ಸಾಗಿ ಚಾಮರಾಜೇಶ್ವರ ದೇವಸ್ಥಾನದವರೆಗೆ ತಲುಪಿ ಮತ್ತೆ ಜಿಲ್ಲಾಡಳಿತ ಭವನಕ್ಕೆ ಹಿಂತಿರುಗಿ ಮುಕ್ತಾಯವಾಯಿತು.
ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಎಲ್ಲರಿಗೂ ಅಜಾದಿ ಕಾ ಅಮೃತ ಮಹೋತ್ಸವದ ಶುಭಾಷಯಗಳು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿರ್ದೇಶನದನ್ವಯ ದೇಶಾದ್ಯಂತ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಆಗಸ್ಟ್ ೧೩ರಿಂದ ೧೫ರವರೆಗೆ ಹರ್ ಘರ್ ತಿರಂಗಾ ಅಭಿಯಾನ ಆಯೋಜಿಸಲಾಗಿದೆ. ಈ ಪ್ರಯುಕ್ತ ಜಿಲ್ಲೆಯಲ್ಲಿಯೂ ೩ ದಿನಗಳ ಕಾಲ ಜಾಗೃತಿ ಜಾಥಾದಂತಹ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
