ನಂಜೀಪುರದಲ್ಲಿ ಮಲೆ ಮಹದೇಶ್ವರಸ್ವಾಮಿ ರಥೋತ್ಸವ–ಕೊಂಡೋತ್ಸವ

ಸರಗೂರು, ಫೆ.27:ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ನಂಜೀಪುರ ಗ್ರಾಮದಲ್ಲಿ ಮಲೆ ಮಹದೇಶ್ವರಸ್ವಾಮಿ ರಥೋತ್ಸವ ಹಾಗೂ ಕೊಂಡೋತ್ಸವವು ಶುಕ್ರವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ಜಾತ್ರೆಯ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ದೇವಸ್ಥಾನವನ್ನು ವಿವಿಧ ಬಣ್ಣಗಳಿಂದ ಬಳಿದು ಅಲಂಕರಿಸಲಾಗಿತ್ತು. ವಿದ್ಯುತ್ ದೀಪಾಲಂಕಾರ ಹಾಗೂ ಬಗೆಬಗೆಯ ಹೂವಿನಿಂದ ರಥವನ್ನು ಮಧುವಣಗಿತ್ತಿಯಂತೆ ಸಿಂಗಾರಿಸಲಾಗಿತ್ತು. ಉತ್ಸವಮೂರ್ತಿಯನ್ನು ರಥದಲ್ಲಿ ವಿರಾಜಮಾನವಾಗಿ ಕೂರಿಸಿ, ಗ್ರಾಮ ಬೀದಿಗಳಲ್ಲಿ ಜಾನಪದ ಕಲಾತಂಡಗಳಾದ ವೀರಗಾಸೆ ಕುಣಿತ, ನಗಾರಿ, ಮಂಗಳ ವಾದ್ಯಗಳೊಂದಿಗೆ ಭವ್ಯ ಮೆರವಣಿಗೆ ನಡೆಯಿತು. ಸತ್ತಿಗೆಗಳ ಮೆರವಣಿಗೆಗೆ ವಿಶೇಷ ಮೆರಗು ನೀಡಿತು.

ಬೆಳಗ್ಗೆಯಿಂದಲೇ ಹೋಮ–ಹವನಗಳು ನೆರವೇರಿದವು. ಉತ್ಸವಮೂರ್ತಿಯನ್ನು ನುಗು ನದಿ ದಡಕ್ಕೆ ಕರೆತಂದು ವಿಶೇಷ ಪೂಜೆ ಸಲ್ಲಿಸಿ, ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ತರಲಾಯಿತು. ನಂತರ ದೇವಸ್ಥಾನ ಆವರಣದಲ್ಲಿ ಆಯೋಜಿಸಿದ್ದ ಕೊಂಡೋತ್ಸವಕ್ಕೆ ಪೂಜೆ ಸಲ್ಲಿಸಿ, ಭಕ್ತರು ಕೊಂಡ ಹಾಯುವ ಮೂಲಕ ಭಕ್ತಿಯನ್ನು ಪ್ರದರ್ಶಿಸಿದರು. ಇದೇ ವೇಳೆ ವೃಕ್ಷಪೂಜೆ, ಬಸವಪೂಜೆ ನೆರವೇರಿತು. ಭಕ್ತರು ಶ್ರೀ ಮಲೆ ಮಹದೇಶ್ವರಸ್ವಾಮಿ ರಥವನ್ನು ಎಳೆದು ಹರಕೆ ತೀರಿಸಿದರು. ನಂತರ ಅನ್ನಸಂತರ್ಪಣೆ ನಡೆಯಿತು.

ಕಾರ್ಯಕ್ರಮದಲ್ಲಿ ಗ್ರಾಮಸ್ಥರಾದ ಗೌಡಿಕೆ ಶಿವಮಲ್ಲಪ್ಪ, ಶಿವರಾಜಪ್ಪ ಪ್ರಭುಸ್ವಾಮಿ, ಗುರುಸ್ವಾಮಿ, ಎನ್.ಪಿ. ನಾಗರಾಜಪ್ಪ, ಎನ್.ಪಿ. ಶಿವಣ್ಣ, ಶಿವಕುಮಾರ್, ಶಿಕ್ಷಕರಾದ ಪರಶಿವಮೂರ್ತಿ ಎನ್.ಪಿ., ಮಹೇಶ್, ಕುಮಾರ, ರವಿ, ಮಂಜುನಾಥ, ಮಹದೇವಪ್ಪ, ಸತೀಶ್ ಸೇರಿದಂತೆ ಸುತ್ತಮುತ್ತಲಿನ ಸಹಸ್ರಾರು ಭಕ್ತರು ಭಾಗವಹಿಸಿದ್ದರು.

Leave a Reply