ಪಾಂಡುರಂಗನ ಪರಮಭಕ್ತೆ ಪಂಡರೀಬಾಯಿ ೧೯೩೦ರಲ್ಲಿ ಉತ್ತರ ಕನ್ನಡ ಜಿಲ್ಲೆ ಭಟ್ಕಳದಲ್ಲಿ ಶ್ರೀಮತಿ ಕಾವೇರಿಬಾಯಿ ಮತ್ತು ಶ್ರೀರಂಗರಾವ್ ದಂಪತಿಗೆ ಜೇಷ್ಠಪುತ್ರಿಯಾಗಿ ಜನಿಸಿದರು. ೧೯೪೩ರಲ್ಲಿ ’ವಾಣಿ’ ಕನ್ನಡ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿ ಆರ್.ನಾಗೇಂದ್ರರಾವ್, ಹೊನ್ನಪ್ಪಭಾಗವತರ್, ಕೆಂಪರಾಜಅರಸು, ಕೆ.ಎಸ್.ಅಶ್ವಥ್ ಅವರುಗಳೊಡನೆ ನಾಯಕನಟಿ ಯಾಗಿ ನಟಿಸಿದ್ದಲ್ಲದೆ ರಾಜ್‌ಕುಮಾರ್ ನಾಯಕನಟನಾಗಿದ್ದ ಪ್ರಪ್ರಥಮ ಸಿನಿಮ ’ಬೇಡರಕಣ್ಣಪ್ಪ’ ಚಿತ್ರದ ಹೀರೋಯಿನ್! ತಮಿಳಿನ ಶಿವಾಜಿಗಣೇಶನ್ ಹೀರೋ ಆಗಿ ನಟಿಸಿದ್ದ ಪ್ರಪ್ರಥಮ ಚಿತ್ರ ’ಪರಾಶಕ್ತಿ’ ಚಿತ್ರದಲ್ಲೂ ನಾಯಕಿಯಾಗಿ ಅಭಿನಯಿಸಿ ದಾಖಲೆ ನಿರ್ಮಿಸಿದ್ದರು. ಈ ಇಬ್ಬರು ಮೇರುನಟರುಗಳಲ್ಲದೆ ಎಂ.ಜಿ.ಆರ್. ರಜನೀಕಾಂತ್, ತೆಲುಗಿನ ಎನ್.ಟಿ.ಆರ್. ಹಾಗೂ ಹಿಂದಿ ಚಿತ್ರರಂಗದ ಸೂಪರ್‌ಸ್ಟಾರ್  ರಾಜೇಶ್‌ಖನ್ನ ಅಂಥವರಿಗೂ ತಾಯಿಯಾಗಿ ನಟಿಸಿ ಭಾರತ ಚಿತ್ರರಂಗದಲ್ಲಿ ನೂತನ ದಾಖಲೆ ಸೃಷ್ಟಿಸಿದ್ದರು! ೧೯೪೩ರಿಂದ ೧೯೯೩ವರೆಗೆ ಸತತ ೫೦ವರ್ಷಕಾಲ ಅವಿಶ್ರಾಂತವಾಗಿ ೧೫೦೦ಕ್ಕೂ ಮಿಕ್ಕು ಪಂಚಭಾಷಾ [ಕನ್ನಡ-ತುಳು-ತಮಿಳು-ತೆಲುಗು-ಹಿಂದಿ] ಚಿತ್ರಗಳಲ್ಲಿ ಅಭಿನಯಿಸಿದ ಹೆಗ್ಗಳಿಕೆ ಇವರದು.  

ನಾಟಕ-ಚಲನಚಿತ್ರ ರಂಗದ ಆಕರ್ಷಣೆಗೆ ಮನೆ ಮಠ ಬಂಧು ಬಳಗ ಎಲ್ಲವನ್ನು ತೊರೆದು ಆಗಮಿಸುತ್ತಿದ್ದ ಅನೇಕ ಹೊಸ ನಟನಟಿಯರ ಸರ್ವತೋಮುಖ ಮಾರ್ಗದರ್ಶನಕ್ಕೆ ಪ್ರಮುಖಪಾತ್ರ ವಹಿಸುತ್ತಿದ್ದ ಕರುಣಾಮಯಿ. ಕಾಲಾಯ ತಸ್ಮೈನಮಃ ಎಂಬಂತೆ ನಾಯಕನಟಿಯ ಪರ್ವಕಾಲ ಮುಗಿದು ಅದಕ್ಕೆ ಗುಡ್ ಬೈ ಹೇಳಿದ ಪಂಡರಿಬಾಯಿ ತಮ್ಮನ್ನು ತಾವೇ ’ಅiನ’ ಪಾತ್ರಕ್ಕೆ ಅರ್ಪಿಸಿಕೊಂಡರು. ವಿಧಿವಿಲಾಸವೇನೊ ಇವರೊಡನೆ ನಾಯಕನಟರಾಗಿ ಅಭಿನಯಿಸಿದ್ದ ಹೀರೋಗಳಿಗೇ ತಾಯಿ ಪಾತ್ರದಲ್ಲಿ ಅಭಿನಯಿಸುವ ಅಪರೂಪದ ಅವಕಾಶ ಪಡೆದ ಪ್ರಥಮ ಕನ್ನಡ ನಟಿ?! ಕಾಲಕ್ರಮೇಣ ಚಂದನವನದ ಬಹುತೇಕ ಎಲ್ಲ ಹೀರೋಗಳಿಗೆ, ವಿಶೇಷವಾಗಿ ಕಲ್ಯಾಣ್‌ಕುಮಾರ್ ಉದಯ್‌ಕುಮಾರ್ ರಾಜೇಶ್ ರಮೇಶ್ ಶ್ರೀನಾಥ್ ವಿಷ್ಣುವರ್ಧನ್ ಅಂಬರೀಶ್ ಅನಂತ್/ಶಂಕರ್‌ನಾಗ್ ಪ್ರಭಾಕರ್ ರವಿಚಂದ್ರನ್ ಮುಂತಾದವರಿಗೆ ತಾಯಿ ಪಾತ್ರದಲ್ಲಿ ಅತ್ಯುತ್ತಮ ಅಭಿನಯ ನೀಡಿದ ಅಭಿನೇತ್ರಿ ಪಂಚಭಾಷೆಯ ಸುಮಾರು ೩೫ನಾಯಕನಟರಿಗೆ ತಾಯಿ ಪಾತ್ರವಹಿಸಿ ೧೦೦ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದು ’ಕಲಾಮಾತೃಕೆ’ ಎನಿಸಿಕೊಂಡರು. ತುಳು ಕೊಂಕಣಿ ಕೊಡವ ಭಾಷೆ ಸೇರಿದಂತೆ ಪಂಡರೀಬಾಯಿ ನಟಿಸಿದ ಕನ್ನಡ ಚಿತ್ರಗಳ ಸಂಖ್ಯೆ ಒಟ್ಟು ೪೦೫! ಇದಲ್ಲದೆ ತಮಿಳು ಚಲನಚಿತ್ರ ರಂಗದ ಅತಿರಥ ಮಹಾರಥ ಎಂ.ಜಿ.ಆರ್, ಶಿವಾಜಿಗಣೇಶನ್, ಜೆಮಿನಿಗಣೇಶನ್, ಎಂ.ಆರ್.ರಾಧ, ಜೈಶಂಕರ್, ಮುಂತಾದ ೨೫ಕ್ಕೂ ಹೆಚ್ಚು ನಾಯಕನಟರಿಗೆ ಹಾಗೂ ತೆಲುಗು ಚಿತ್ರರಂಗದ ದಿಗ್ಗಜರು ಎನ್.ಟಿ.ಆರ್. ಎ.ನಾಗೇಶ್ವರರಾವ್ ಕೃಷ್ಣ ಮುಂತಾದ ೧೮ಕ್ಕೂ ಹೆಚ್ಚು ನಾಯಕನಟರಿಗೆ ತಾಯಿಯಾಗಿ ಸುಮಾರು ೬೮೫ಚಿತ್ರಗಳಲ್ಲಿ ಅಭಿನಯಿಸಿದ ಅಮ್ಮ ಪಂಡರೀಬಾಯಿ! ನಿರಂತರವಾಗಿ ಭಾರತದ ಚಲನಚಿತ್ರ ಪ್ರೇಕ್ಷಕರ ಮತ್ತು ಅಭಿಮಾನಿಗಳ ತನು ಮನದಲ್ಲಿ ಶಾಶ್ವತವಾದ ಅಮ್ಮ ಪಂಡರೀಬಾಯಿ. ಒಂದುಕಾಲಕ್ಕೆ ಅಮ್ಮಾ ಎಂದರೆ ಪಂಡರೀಬಾಯಿ ಎಂದು ವಿಶೇಷವಾಗಿ ಬ್ರಾಂಡ್ ಆಗಿದ್ದ ಅತ್ಯಂತ ಯಶಸ್ವಿ ಅಪರೂಪದ ಅಭಿನೇತ್ರಿ!
ಪಂಡರೀಬಾಯಿ ಜತೆ ನಟಿಸದ ನಟನಟಿಯರು ’ಅಭಾಗ್ಯವಂತರು’ ಎಂಬ ಪ್ರತೀತಿ ದಕ್ಷಿಣ ಭಾರತದ ಎಲ್ಲ ಭಾಷೆಯ ಕಲಾವಿದರಲ್ಲಿ ಮನೆಮಾಡಿತ್ತು. ಅಷ್ಟರಮಟ್ಟಿಗಿತ್ತು ಪಂಡರೀಬಾಯವರ ದೈವಾರಾಧನೆ ನಡೆನುಡಿ ಸಹಾಯ ಸಹಕಾರ ದಾನ ಧರ್ಮ ಹಾಗೂ ಸಹನಾಗುಣ. ತಮ್ಮ ಅಪ್ರತಿಮ ಪ್ರತಿಭಾವಂತ ಗುಣದಿಂದ ಯಾವುದೇ ಭಾಷೆಯ ಚಿತ್ರವಾಗಿರಲಿ ಆಯಾ ರಾಜ್ಯ ಅಥವ ಪ್ರದೇಶದ/ಭಾಷೆಯ ನಿರ್ಮಾಪಕ ನಿರ್ದೇಶಕ ತಾಂತ್ರಿಕವರ್ಗದ ಹಾಗೂ ಸಹಕಲಾವಿದರ ಪ್ರೀತಿ ಗೌರವ ಸ್ನೇಹ ವಿಶ್ವಾಸ ಬಾಂಧವ್ಯ ಗಳಿಸಿ ಸದಾ ಯಾರ ಮನಸ್ಸನ್ನು ನೋಯಿಸದ ಸಾಧ್ವಿಮಣಿ ಎನಿಸಿದ್ದರು! ಆದರೆ ಇಂಥ ಮಹಾನ್ ಕಲಾವಿದೆಗೂ ಮಿತ್ಯಾರೋಪ ತಪ್ಪಲಿಲ್ಲ. ಇದಕ್ಕೆ ಜ್ವಲಂತ ನಿದರ್ಶನ; ೧೯೬೩ರ ಆಸುಪಾಸು ೫ ಭಾಷೆಗಳಲ್ಲಿ ಮದ್ರಾಸಿನಿಂದ ಪ್ರಕಟವಾಗುತ್ತಿದ್ದ ಹಿಂದೂನೇಷನ್ ಪತ್ರಿಕೆಯಲ್ಲಿ ಇವರ ಬಗ್ಗೆ ಪ್ರಕಟವಾದ ಅವಹೇಳನಕಾರಿ ಸುದ್ದಿ?! ಸತ್ಯಮೇವಜಯತೆ ಎಂಬಂತೆ ಇದಾದ ಕೆಲವು ತಿಂಗಳಲ್ಲೆ ಸದರಿ ವಾರಪತ್ರಿಕೆಯು ಅಂತ್ಯ ಕಂಡು, ಇದರ ಪ್ರಧಾನ ಸಂಪಾದಕ ಅಕಾಲ ಮೃತ್ಯುವಿಗೆ ಬಲಿಯಾದರು ಎಂಬುದು ನಿತ್ಯಸತ್ಯ ಘಟನೆ!
ಸತ್ಯಹರಿಶ್ಚಂದ್ರ ಚಿತ್ರವು ಏಕಕಾಲಕ್ಕೆ ಕನ್ನಡ-ತಮಿಳು-ತೆಲುಗು; ಮೂರೂ ಭಾಷೆಗಳಲ್ಲಿ ನಿರ್ಮಾಣಗೊಂಡು ಒಂದೇ ವರ್ಷದ ಅವಧಿಯಲ್ಲಿ ಮೂರೂ ರಾಜ್ಯಗಳಲ್ಲಿ ಬಿಡುಗಡೆಗೊಂಡಿತು. ಮಹಾರಾಜ ಹರಿಶ್ಚಂದ್ರನ ಪಾತ್ರವನ್ನು ಕನ್ನಡದಲ್ಲಿ ರಾಜ್‌ಕುಮಾರ್, ತಮಿಳಿನಲ್ಲಿ ಶಿವಾಜಿಗಣೇಶನ್ ಹಾಗೂ ತೆಲುಗಿನಲ್ಲಿ ಎನ್.ಟಿ.ರಾಮರಾವ್ ನಟಿಸಿದ್ದರು. ಈ ಮೂವರು ಮಹಾನ್ ಮೇರುನಟರ ಮೂರೂ ಭಾಷೆಯ ಚಿತ್ರಗಳಲ್ಲಿ ನಟಿಸಿದ್ದವರು ಪಂಡರೀಬಾಯಿ ಒಬ್ಬರೇ ಎಂದು ಭಾರತೀಯ ಚಿತ್ರರಂಗದ ಚರಿತ್ರೆಯಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದ ಅದ್ಭುತ ಆಶ್ಚರ್ಯದ ಇತಿಹಾಸ! ಪ್ರಪಂಚದ ಯಾವುದೇ ಮೂರು ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರೆ ಹೀರೋ ನಟಿಸಿದ ಒಂದೇ ಹೆಸರು, ಕಥೆ, ಚಿತ್ರಕಥೆ ಇರುವಂಥ ಸಿನಿಮಾದಲ್ಲಿ ಬೇರೆ ಬೇರೆ ಪಾತ್ರವನ್ನು ಈವರೆಗೂ ಯಾವ ಹೀರೋಯಿನ್ ಕೂಡ ಪ್ರಪಂಚದ ಬೇರಾವ ಭಾಷೆಯಲ್ಲೂ ಅಭಿನಯಿ(ಸಿಲ್ಲ)ಸಲಾಗಿಲ್ಲ! ಹಾಗಾಗಿ ಪಂಡರೀಬಾಯವರ ಚಿರಸ್ಮರಣೀಯ ಪಾತ್ರಾಭಿನಯ ಇಂದಿಗೂ ಅಜರಾಮರ!
ಪಂಡರೀಬಾಯಿವರು ತಮಗೆ ಇಂಥದ್ದೇ ಪಾತ್ರ ಬೇಕೆಂಬ ಬೇಡಿಕೆಯನ್ನು ಎಂದೂ ಇಟ್ಟವರಲ್ಲ. ತಮಗೆ ದೊರೆತ ಅವಕಾಶವು ದೊಡ್ಡದಿರಲಿ ಚಿಕ್ಕದೇ ಆಗಿರಲಿ ಕಿಂಚಿತ್ ಭೇದಭಾವ ಎಣಿಸದೆ ತ್ರಿಕರಣ ಶುದ್ಧಿಯಿಂದ ಸ್ವೀಕರಿಸುತ್ತಿದ್ದರು. ಭಕ್ತಿಪ್ರಧಾನ ಸಿನಿಮಾಗಳಿಂದ ಒಳ್ಳೆಯ ಹೆಸರು ಪಡೆದು ಸಾಂಸಾರಿಕ ಚಿತ್ರಗಳಲ್ಲೂ ಅಭಿನಯಿಸಿ ಅತ್ಯಂತ ಜನಪ್ರಿಯ ನಾಯಕನಟಿ ಎನಿಸಿ ಕೊಂಡರು. ಬೇಡರಕಣ್ಣಪ್ಪ, ಗುಣಸಾಗರಿ, ಸತ್ಯಹರಿಶ್ಚಂದ್ರ, ಭಲೇಜೋಡಿ, ನಮ್ಮಮಕ್ಕಳು, ಕೆರಳಿದಸಿಂಹ, ಮೋಜುಗಾರ ಸೊಗಸುಗಾರ, ಕಲಿಯುಗಭೀಮ, ಮುಂತಾದ ಅನೇಕ ಚಿತ್ರಗಳಲ್ಲಿನ ಅಮೋಘ ಅಭಿನಯಕ್ಕೆ ಅನೇಕ ಬಾರಿ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗಳನ್ನು ಪಡೆದುಕೊಂಡರು. ಸಾಮಾಜಿಕ, ಪೌರಾಣಿಕ ಅಥವಾ ಐತಿಹಾಸಿಕ ಯಾವುದೇ ಪಾತ್ರವನ್ನಾಗಲಿ ಸ್ವಯಂ ಅನುಭವಿಸಿ ಜೀವ ತುಂಬುತ್ತಿದ್ದರು. ಪರಕಾಯ ಪ್ರವೇಶದೊಂದಿಗೆ ಕಲೆಗೆ-ಕಲಾವಿದರಿಗೆ ನ್ಯಾಯ ಒದಗಿಸಿ ಕೊಡುವುದರ ಜತೆಗೆ ನಿರ್ಮಾಪಕ ನಿರ್ದೇಶಕರಿಗೆ ಶುಭ ಲಾಭ ಕೋರುತಿದ್ದರು. ತಮ್ಮಿಂದ ಯಾರಿಗೂ ಕಷ್ಟ ನಷ್ಟ ಒದಗದಂತೆ ನಿಗಾ ವಹಿಸುತ್ತಿದ್ದರಲ್ಲದೆ ಸರ್ವರಿಗೂ ಸದಾಶಯವನ್ನೆ ಬಯಸುತಿದ್ದರು. ಶೂಟಿಂಗ್ ಸಮಯದಲ್ಲಿ ವಿರಾಮವಿದ್ದಾಗಲೆಲ್ಲ ಪಾಂಡುರಂಗನ ಭಜನೆ ಮಾಡುತ್ತಿದ್ದರು ಮತ್ತು ಚಿತ್ರೀಕರಣವಿಲ್ಲದ ದಿನಗಳಲ್ಲಿ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿ ದೇವರನ್ನು ಪ್ರಾರ್ಥಿಸುತ್ತಿದ್ದರು. ದೇವರನ್ನು ಬಹಳವಾಗಿ ನಂಬುತ್ತಿದ್ದ ಇವರು ’ಒಳ್ಳೆಯವರಿಗೆ ಭಗವಂತನು ಒಳ್ಳೆಯದನ್ನೆ ಮಾಡುತ್ತಾನೆ’ ಎಂದು ಸದಾ ಹೇಳುತ್ತಿದ್ದರು. ಮುಂಜಾನೆಯಿಂದ ಸಂಜೆವರೆಗು ನಿತ್ಯಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು. ಅನವರತ ತಮ್ಮ ದಿನಚರಿ, ಚಿತ್ರನಿರ್ಮಾಣದ ಅಥವ ನಟನೆಯ ಬಗ್ಗೆ ತಳೆದ ಯೋಜನೆ-ಯೋಚನೆ ಯಾವುದನ್ನೂ ಎಂದೂ ಬದಲಾಯಿಸಿದವರಲ್ಲ! ಯಾರೊಂದಿಗೂ ಯಾವುದಕ್ಕೂ ರಾಜೀ ಮಾಡಿಕೊಳ್ಳದೆ ಶಿಸ್ತು ಸಂಯಮದಿಂದ ಜೀವನ ನಡೆಸುತ್ತಿದ್ದ ಧೀರಮಹಿಳೆ.
೧೯೯೫ರಲ್ಲಿ ಒಮ್ಮೆ ಅನಿರೀಕ್ಷಿತವಾಗಿ ಆಂಧ್ರಪ್ರದೇಶದ ಚಿತ್ತೂರು ಬಳಿ ಜರುಗಿದ ರಸ್ತೆ ಅಪಘಾತ ಒಂದರಲ್ಲಿ ತಮ್ಮ ಕೈ ಕಳೆದುಕೊಂಡರು. ಆನಂತರ ತಮ್ಮ ಸಹೋದರಿ(ತಂಗಿ) ಮೈನಾವತಿಯವರ ಸಹಾಯ-ಸಹಕಾರದಿಂದ ಕೆಲವಾರು ವರ್ಷಕಾಲ ಚಿಕಿತ್ಸೆ ಪಡೆದನಂತರ ತುಸು ಚೇತರಿಸಿಕೊಂಡರು. ತಮ್ಮ ಜೀವನದ ಅಂತಿಮ ದಿನಗಳ ಬಗ್ಗೆ ತಮಗೇ ತೀವ್ರ ಬೇಸರ ಉಂಟಾಗಿದೆ ಎಂದು ಅನೇಕಸಲ ಮಾಧ್ಯಮಗಳ ಮುಂದೆ ತಮ್ಮ ಅಳಲು ಅಸಹಾಯಕತೆ ಅಲವತ್ತು ಮಾಡಿಕೊಂಡಿದ್ದುಂಟು? ರಾಜ್‌ರಂತೆ ಪಂಡರೀಬಾಯಿ ಕೂಡ ಚಲನಚಿತ್ರ ಪ್ರೇಕ್ಷಕರನ್ನು ಬಹಳ ಗೌರವ ವಿಶ್ವಾಸಗಳಿಂದ ಕಾಣುತ್ತಿದ್ದರು. ತೀವ್ರ ಅನಾರೋಗ್ಯದಿಂದ ಬಳಲುವ ಸಂದರ್ಭ ಒದಗಿಬಂತು. ಆಗಲೂ ಸಹ ಪಂಡರಿಬಾಯಿ ಎಂದಿನಂತೆ ತಾವು ಅಚಲವಾಗಿ ನಂಬಿದ್ದ ಪಾಂಡುರಂಗ ವಿಠಲನನ್ನು ತೊರೆಯಲಿಲ್ಲ, ಆತನ ಮೇಲಿನ ಅನನ್ಯ ಭಕ್ತಿಯನ್ನು ಮೊಟಕು ಗೊಳಿಸಲಿಲ್ಲ! ಇದನ್ನು ಕಣ್ಣಾರೆ ಕಂಡ ಕೆಲವರು ಇವರ ಆಧ್ಯಾತ್ಮಿಕ ಮನೋಬಲವನ್ನು ’ಮೂಢನಂಬಿಕೆ’ ಎಂದು ಅಪಹಾಸ್ಯ ಮಾಡಿದರೂ ಧೈರ್ಯಗೆಡಲಿಲ್ಲ, ಯಾವುದೇ ಆತಂಕಕ್ಕೆ ಎಡೆಮಾಡಿಕೊಳ್ಳದೆ ಇನ್ನೂ ಹೆಚ್ಚಿನ ಧೈರ್ಯ ಸ್ಥೈರ್ಯದಿಂದ ಇದ್ದರು. ಆ ಸಂದರ್ಭದಲ್ಲಿ ರಾಜಕುಮಾರ್‌ರವರ ಪೂರ್ಣ ಬೆಂಬಲದಿಂದ ಕೆರಳಿದಸಿಂಹ ಚಿತ್ರನಿರ್ಮಾಣ ಕಾರ್ಯ ಪೂರ್ಣಗೊಳಿಸಿ ಸಿನಿಮಾವನ್ನು ರಾಜ್ಯದಾದ್ಯಂತ ಸರಿಸಮಯದಲ್ಲೇ ಯಶಸ್ವಿಯಾಗಿ ಬಿಡುಗಡೆ ಮಾಡಿಸಿದರು. ಸುದೈವದಿಂದ ಕೆರಳಿದಸಿಂಹ ಚಿತ್ರವು ಹಣ ಕೀರ್ತಿ ಪ್ರಶಸ್ತಿ ಎಲ್ಲವಿಭಾಗದಲ್ಲು ಗೆದ್ದು ಇವರ ಹಿತೈಷಿ ಮಿತ್ರ [ಹಿತ]ಶತ್ರು ಆದಿಯಾಗಿ ಎಲ್ಲರ ಬಾಯಿ ಮುಚ್ಚಿಸಿತು. ಪ್ರೇಕ್ಷಕವರ್ಗ ಮತ್ತು ಮಾಧ್ಯಮ ವರ್ಗದವರಿಂದಲೂ ಸೈ ಎನಿಸಿಕೊಂಡ ಕೆರಳಿದಸಿಂಹ ಫಿಲಂ ಪಂಡರಿಬಾಯಿ ಜೀವನದ ಪುನರುತ್ಥಾನದ ಇತಿಹಾಸ ಬರೆಯಿತು!
ಕ್ರಿ.ಶ.೨೦೦೦ನೇ ಇಸವಿಯಲ್ಲಿ ಬಿಡುಗಡೆಯಾದ ಶಿವರಾಂ ನಾಯಕನಟನಾಗಿದ್ದ ’ಹ್ಯಾಟ್ಸ್ ಆಫ಼್ ಇಂಡಿಯ’ ಚಿತ್ರ ಪಂಡರಿಬಾಯಿ ನಟಿಸಿದ ಅಂತಿಮ ಫಿಲಂ! ಈ ಸಿನಿಮಾದ ನಿರ್ಮಾಪಕರು ಜಿ.ನಂದಕುಮಾರ್ ಹಾಗೂ ನಿರ್ದೇಶಕರು ಆರ್.ರಘುನಾಥ್. ಪಂಢರೀಬಾಯಿಯಂಥ ಅನರ್ಘ್ಯರತ್ನವು ತೀವ್ರ ತರಹದ ಕಿಡ್ನಿ ವೈಫಲ್ಯಕ್ಕೆ ತುತ್ತಾಗಿ ದೀರ್ಘಾವಧಿಯವರೆಗೆ ಮದ್ರಾಸಿನ [ಚೆನ್ನೈ] ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಕಡೆಗೂ ಚಿಕಿತ್ಸೆಯು ಫಲಕಾರಿ ಆಗದೇ ಇದ್ದುದರಿಂದ ದಿನಾಂಕ ೨೯ನೇ ಜನವರಿ ೨೦೦೩ರಂದು ಬೆಳಗ್ಗೆ ಪಂಡರೀಬಾಯಿ ಇಹಲೋಕ ತ್ಯಜಿಸಿ ಸ್ವರ್ಗಸ್ಥರಾದರು. ಚಂದನವನಕ್ಕೆ ಮಾತ್ರವಲ್ಲದೆ ಇಡೀ(ದಕ್ಷಿಣ) ಭಾರತದ ಚಲನಚಿತ್ರ ಲೋಕಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿ ಕಣ್ಮರೆಯಾದರು. ಪಂಡರೀಬಾಯಿ ದೈಹಿಕವಾಗಿ ನಮ್ಮೊಡನೆ ಬದುಕಿಲ್ಲವಾದರೂ ಮಾನಸಿಕವಾಗಿ ದೇಶದ ಎಲ್ಲ ಭಾಷೆಯ ಪ್ರತಿಯೊಬ್ಬ ಚಿತ್ರಾಭಿಮಾನಿಗಳ ಹೃನ್ಮನಗಳಲ್ಲಿ ಎಂದೆಂದು ನೆಲೆಸಿರುತ್ತಾರೆ. ಭಾರತದ ಪ್ರತಿಯೊಂದು ಮನೆಯಲ್ಲಿರುವ ಪ್ರತಿಯೊಬ್ಬ ತಾಯಂದಿರಷ್ಟೇ ಮಮತೆ ವಾತ್ಸಲ್ಯದಿಂದ ಭಾರತೀಯ ಚಲನಚಿತ್ರ ಮತ್ತು ನಾಟಕ ರಂಗದ ನೂರಾರು ಕಲಾವಿದರಿಗೆ ಮಾತ್ರವಲ್ಲದೆ ದೇಶದ ಕೋಟ್ಯಾಂತರ ಕಲಾಭಿಮಾನಿ ಪ್ರೇಕ್ಷಕರಿಗೂ ಮಾತೆಯಾಗಿ, ಪಂಚಭಾಷಾ ತಾರೆಯಾಗಿ, ಯಶಸ್ವಿ ನಿರ್ಮಾಪಕಿಯಾಗಿ, ಐದು ದಶಕದ ಕಾಲ ಮಿನುಗಿ ಮೆರೆದು ಮರೆಯಾದರೂ ಕಲಾಮಾತೃಕೆ ಪಂಡರೀಬಾಯಿ ಆಚಂದ್ರಾರ್ಕ ಅಜರಾಮರ!

ಪಂಡರಿಬಾಯಿ ಅವರು ನಟಿಸಿದ ಪ್ರಮುಖ ಫಿಲಂಸ್
ಕ್ರ.ಸಂ. ಫಿಲಂ ಹೆಸರು ಕ್ರ.ಸಂ. ಫಿಲಂ ಹೆಸರು
೧ ವಾಣಿ/೧೯೪೪ ೩೮ ನಮ್ಮಮಕ್ಕಳು
೨ ರಾಜಾವಿಕ್ರಮ ೩೯ ಮಧುರಮಿಲನ
೩ ಗುಣಸಾಗರಿ ೪೦ ಭಾಗೀರಥಿ
೪ ಬೇಡರಕಣ್ಣಪ್ಪ ೪೧ ಚೌಕದ ದೀಪ
೫ ಭಕ್ತ ಮಲ್ಲಿಕಾರ್ಜುನ ೪೨ ಗೆಜ್ಜೆಪೂಜೆ
೬ ಸಂತ ಸಕ್ಕೂಬಾಯಿ ೪೩ ಮೂರುಮುತ್ತುಗಳು
೭ ಸೋದರಿ ೪೪ ಭಲೇಜೋಡಿ
೮ ಭಕ್ತ ವಿಜಯ ೪೫ ಮಹಡಿಯಮನೆ
೯ ಹರಿಭಕ್ತ ೪೬ ನಮ್ಮಬದುಕು
೧೦ ಹರಿಭಕ್ತ ೪೭ ಪ್ರತಿಧ್ವನಿ
೧೧ ರೇಣುಕಾ ಮಹಾತ್ಮೆ ೪೮ ಬಾಂಧವ್ಯ
೧೨ ರಾಯರ ಸೊಸೆ ೪೯ ರೌಡಿರಂಗಣ್ಣ
೧೩ ಸತಿ ನಳಾಯಿನಿ ೫೦ ಭಲೇರಾಣಿ
೧೪ ಅಬ್ಬಾ ಆಹುಡುಗಿ ೫೧ ಅನುಗ್ರಹ
೧೫ ಸತ್ಯ ಹರಿಶ್ಚಂದ್ರ ೫೨ ಹೃದಯಸಂಗಮ
೧೬ ತೇಜಸ್ವಿನಿ ೫೩ ಹೇಮರೆಡ್ಡಿ ಮಲ್ಲಮ್ಮ
೧೭ ಶ್ರೀರಾಮಾಂಜನೇಯ ಯುದ್ಧ ೫೪ ಜನ್ಮರಹಸ್ಯ
೧೮ ಸಂತ ತುಕಾರಾಂ ೫೫ ಭದ್ರಕಾಳಿ
೧೯ ನವಜೀವನ ೫೬ ಮದರ್
೨೦ ಅನ್ನಪೂರ್ಣ ೫೭ ಅಂತ
೨೧ ಮುರಿಯದಮನೆ ೫೮ ತ್ಯಾಗಿ
೨೨ ಪ್ರತಿಜ್ಞೆ ೫೯ ಕಲಿಯುಗಭೀಮ
೨೩ ಪತಿಯೇದೈವ ೬೦ ಸಾಹಸಸಿಂಹ
೨೪ ಚಂದ್ರಹಾಸ ೬೧ ಗುರು
೨೫ ಬೆಟ್ಟದಹುಲಿ ೬೨ ರಾಮ ಲಕ್ಷ್ಮಣ
೨೬ ಬಾಲನಾಗಮ್ಮ ೬೩ ಕರುಣಾಮಯಿ
೨೭ ಶ್ರೀಕನ್ಯಕಾಪರಮೇಶ್ವರಿ ಕಥೆ ೬೪ ದಾದಾ
೨೮ ಮಹಾಸತಿ ಅನಸೂಯ ೬೫ ರುದ್ರ
೨೯ ಅನುರಾಧ ೬೬ ಮಣ್ಣಿನದೋಣಿ
೩೦ ಸಂಧ್ಯಾರಾಗ ೬೭ ನಾಗ ಕಾಳ ಭೈರವ
೩೧ ಶ್ರೀಪುರಂದರದಾಸರು ೬೮ ನ್ಯಾಯದಕಣ್ಣು
೩೨ ಅಮ್ಮ ೬೯ ಚಲಿಸುವ ಮೋಡಗಳು
೩೩ ಬೆಳ್ಳಿಮೋಡ ೭೦ ಕೆರಳಿದಸಿಂಹ
೩೪ ಸುವರ್ಣಭೂಮಿ ೭೧ ಹೊಸನೀರು
೩೫ ಒಡಹುಟ್ಟಿದವರು ೭೨ ಮಹಾಶಕ್ತಿ ಮಾಯೆ
೩೬ ಅಪರಾಜಿತೆ ೭೩ ರಾಮರಾಜ್ಯದಲ್ಲಿ ರಾಕ್ಷಸರು
೩೭ ಮನಶ್ಯಾಂತಿ ೭೪ ಮಣಿಕಂಠನ ಮಹಿಮೆ

ಕುಮಾರಕವಿ ಬಿ.ಎನ್.ನಟರಾಜ್
ಬೆಂಗಳೂರು
೯೦೩೬೯೭೬೪೭೧