ಮಂಗಳೂರು: ತೌಕ್ತೆ ಚಂಡಮಾರುತದ ಅಬ್ಬರಕ್ಕೆ ಕರಾವಳಿ ನಲುಗಿದ್ದು, ಸಮುದ್ರದಲ್ಲಿ ಅಲೆಗಳು ವೀರಾವೇಶ ತೋರುತ್ತಿದ್ದು ಕಡಲ್ಕೊರೆತ ಸೇರಿದಂತೆ ಹಲವು ರೀತಿಯ ಹಾನಿಗಳು ಸಂಭವಿಸಿದ್ದು ವ್ಯಾಪಕ ಮಳೆ ಸುರಿಯುತ್ತಿದೆ.


ಅರಬ್ಭಿ ಸಮುದ್ರದ ಆಗ್ನೇಯ ಭಾಗದಲ್ಲಿ ಕಾಣಿಸಿಕೊಂಢಿರುವ ‘ತೌಕ್ತೇ’ ಚಂಡಮಾರುತದ ಪರಿಣಾಮ ಶನಿವಾರ ಬೆಳಿಗ್ಗಿನಿಂದ ಭಾರಿ ಗಾಳಿ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ ಭಾರಿ ಗಾತ್ರದ ಅಲೆಗಳು ತೀರ ಪ್ರದೇಶಕ್ಕೆ ಅಪ್ಪಳಿಸುತ್ತಿರುವುದರಿಂದ ಕಡಲತೀರದ ಮಂದಿಯಲ್ಲಿ ಆತಂಕ ಮನೆ ಮಾಡಿದೆ. ಕಡಲ ತೀರದಲ್ಲಿರುವವರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗುತ್ತಿದೆ. ಕ್ಷಣ ಕ್ಷಣಕ್ಕೂ ಅಲೆಗಳ ಅಬ್ಬರ ಬಿರುಸಾಗುತ್ತಿದ್ದು, ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ತೀರದಿಂದ ಕೆಲವು ಮೀಟರ್ ಗಳಷ್ಟು ದೂರವಿದ್ದ ಕಡಲು, ಇದೀಗ ತೀರಕ್ಕೆ ಸಮೀಪವಾಗುತ್ತಿದೆ. ಮೀನುಗಾರಿಕಾ ರಸ್ತೆಯನ್ನು ದಾಟಿ ಮೇಲೆ ಬರುತ್ತಿರುವ ಕಡಲ ಅಲೆಗಳು ಏರಿ ಬರುತ್ತಿದ್ದು ಮಲ್ಪೆ ಬೀಚ್ ಸಂಪೂರ್ಣ ಮುಳುಗಡೆಯಾದೆ ಅಲ್ಲದೆ ಮಲ್ಪೆಯ ಬೀಚ್ ಗೆ ಭಾರಿ ಗಾತ್ರದ ಅಲೆಗಳಿಂದ ಹಾನಿಯುಂಟಾಗಿದೆ.


ಚಂಡಮಾರುತ ಭೀತಿಯಿಂದಾಗಿ ಮೀನುಗಾರರು ತಮ್ಮ ಮೀನುಗಾರಿಕಾ ಬೋಟ್ ಗಳನ್ನು ಕ್ರೈನ್ ಗಳ ಮೂಲಕ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುತ್ತಿದ್ದಾರೆ. ಭಾರಿ ಅಲೆಗಳಿಗೆ ಕಡಲ್ಕೊರೆತ ತಡೆಯಲು ಹಾಕಿದ ಕಲ್ಲುಗಳು ಸಮುದ್ರಪಾಲಾಗಿವೆ. ಇನ್ನೊಂದೆಡೆ ಉಡುಪಿ ಜಿಲ್ಲೆಯ ಮರವಂತೆಯಲ್ಲೂ ಕಡಲ್ಕೊರೆತದಿಂದ ಮೂರು ದಿನಗಳಿಂದ ತೊಂದರೆಯಾಗಿದೆ. ಅಲೆಗಳ ಅಬ್ಬರದಿಂದ ೧೦೦ಕ್ಕೂ ಅಧಿಕ ತೆಂಗಿನ ಮರಗಳು ಉರುಳಿವೆ. ರಸ್ತೆ ಕೊಚ್ಚಿ ಹೋದರೆ ಮೀನುಗಾರರ ೨೫ ಮನೆಗಳಿಗೆ ಅಪಾಯವಾಗುವ ಸಾಧ್ಯತೆ ಇದೆ. ಕಾಪು ತಾಲ್ಲೂಕಿನ ಪಡುಬಿದ್ರಿ, ಹೆಜಮಾಡಿ, ಬಡಾ, ಮೂಳೂರು, ತೆಂಕದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದೆ.
ಒಂದೆಡೆ ಕಡಲಿನಲ್ಲಿ ರುದ್ರನರ್ತನವಾಗುತ್ತಿದ್ದರೆ, ಇನ್ನೊಂದೆಡೆ ಮಳೆ ಸುರಿಯುತ್ತಿದೆ. ಒಟ್ಟಾರೆ ತೌಕ್ತೆ ಚಂಡಮಾರುತ ಇನ್ಯಾವ ರೀತಿಯ ಅನಾಹುತಗಳನ್ನು ತಂದೊಡ್ಡುತ್ತದೆಯೋ ಎಂಬ ಭಯದಲ್ಲಿ ಜನ ಕಾಲ ಕಳೆಯುತ್ತಿದ್ದಾರೆ.

By admin