ಚಾಮರಾಜನಗರ: ಚಾಮರಾಜನಗರ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ಸಾವಿನ ಸಂಖ್ಯೆಯೂ ಅಧಿಕವಾಗುತ್ತಿದ್ದು ಸದ್ಯ ಸಕ್ರಿಯ ಪ್ರಕರಣ 4512ಕ್ಕೇರಿದೆ. ಹೀಗಾಗಿ ಸೋಂಕಿನ ಸರಪಳಿ ತಡೆಗೆ ವಾರದ ನಾಲ್ಕು ದಿನ ಸಂಪೂರ್ಣ ಬಂದ್ ಮಾಡಲಾಗುತ್ತಿದ್ದು ಉತ್ತಮ ಸ್ಪಂದನೆ ದೊರೆಯುತ್ತಿದೆ.
ಗುರುವಾರ ಒಂದೇ ದಿನ 799 ಹೊಸ ಪ್ರಕರಣಗಳು ದಾಖಲಾಗಿದ್ದರೆ, ಕೊರೊನಾ ಸೋಂಕಿನಿಂದ ಬಳಲುತ್ತಿದ್ದ 8 ಮಂದಿ ಸಾವನ್ನಪ್ಪಿದ್ದು ಇದುವರೆಗೆ ಜಿಲ್ಲೆಯಲ್ಲಿ 273 ಸೋಂಕಿತರು ಮೃತಪಟ್ಟಿದ್ದಾರೆ. ಸೋಂಕಿತರ ಸಂಖ್ಯೆಗಿಂತ ಗುಣಮುಖ ರಾಗುತ್ತಿರುವವರ ಸಂಖ್ಯೆ ಕಡಿಮೆ ಇರುವುದು ಕೂಡ ಆತಂಕಕಾರಿಯಾಗಿದೆ.
ಇನ್ನೊಂದು ಸಮಾಧಾನದ ಸಂಗತಿ ಏನೆಂದರೆ ಕೊರೊನಾ ಸೋಂಕು ನಿಯಂತ್ರಣಕ್ಕೆ ಜಿಲ್ಲಾ ಟಾಸ್ಕ್ ಪೋರ್ಸ್ ಸೂಚನೆಯಂತೆ ವಾರದ ಕೊನೆಯ ನಾಲ್ಕು ದಿನಗಳ ಸಂಪೂರ್ಣ ಲಾಕ್ ಡೌನ್ ಮಾಡಿದ್ದು ಇದಕ್ಕೆ ಜಿಲ್ಲೆಯ ಜನ ಸ್ಪಂದನೆ ನೀಡಿದ್ದಾರೆ. ಇದೀಗ ಸದಾ ಜನರಿಂದ ತುಂಬಿದ್ದ ಚಾಮರಾಜನಗರ ಜಿಲ್ಲಾ ಕೇಂದ್ರದ ದೊಡ್ಡಂಗಡಿ ಬೀದಿ, ಚಿಕ್ಕಂಗಡಿ ಬೀದಿಗಳಲ್ಲಿ ಜನ ದಟ್ಟಣೆ ಇಲ್ಲದೆ ಬಿಕೋ ಎನ್ನುತ್ತಿವೆ. ತಳ್ಳು ಗಾಡಿಗಳಲ್ಲಿ ತರಕಾರಿ ಮಾರಾಟವೂ ಸಹ ವಿರಳವಾಗಿದೆ.
ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಕೊರೋನಾ ಸೋಂಕು ಮತ್ತು ಸಾವಿನ ಪ್ರಮಾಣಗಳು ಹೆಚ್ಚುತ್ತಿರುವುದರಿಂದ ಜನ ಭಯ ಭೀತರಾಗಿದ್ದಾರೆ. ಈಗಾಗಲೇ ಸೋಂಕಿನಿಂದ ನರಳಾಡುತ್ತಿರುವವರನ್ನು ನೋಡಿದ ಮೇಲೆ ಒಂದಷ್ಟು ಜನ ತಮಗೆ ತಾವೇ ನಿರ್ಬಂರಧ ಹೇರಿಕೊಂಡಿದ್ದಾರೆ.
ಇನ್ನೊಂದೆಡೆ ಜನರ ತಾಳ್ಮೆ ಕಟ್ಟೆಯೂ ಒಡೆಯುತ್ತಿದೆ. ಹೀಗಾಗಿ ಸೋಂಕಿತರ ಸಂಬಂಧಿಕರು ಕೆಲವೆಡೆ ರೊಚ್ಚಿಗೆದ್ದು ದಾಂಧಲೆ ನಡೆಸುತ್ತಿರುವ ಘಟನೆಗಳು ನಡೆಯುತ್ತಿವೆ. ಗುಂಡ್ಲುಪೇಟೆ ತಾಲ್ಲೂಕು ಆಸ್ಪತ್ರೆಯಲ್ಲಿ ಕೋರೊನಾ ಸೋಂಕಿತ ಮಹಿಳೆ ನಾಗಮ್ಮ ಎಂಬಾಕೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರಿಂದ ರೊಚ್ಚಿಗೆದ್ದ ಸಂಬಂಧಿಕರು ಆಸ್ಪತ್ರೆಯಲ್ಲಿನ ಸಿಬ್ಬಂದಿ ಮೇಲೆ ಆಕ್ಸಿಜನ್ ಸಿಲಿಂಡರ್ ನಿಂದ ಹಲ್ಲೆಗೆ ಮುಂದಾಗಿ ಕಿಟಕಿ ಬಾಗಿಲು ಧ್ವಂಸ ಮಾಡಿದ್ದಾರೆ. ಹಠತ್ತಾಗಿ ನಡೆದ ಘಟನೆಯಿಂದ ಕಂಗಲಾದ ಆಸ್ಪತ್ರೆ ಸಿಬ್ಬಂದಿ ಆತಂಕಗೊಂಡಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಹಲ್ಲೆಗೆ ಮುಂದಾಗಿದ್ದ ಮೃತ ಸೋಂಕಿತರ ಸಂಬಂಧಿ ಗಿರೀಶ್ ಎಂಬಾತನನ್ನು ಗುಂಡ್ಲುಪೇಟೆ ಪೊಲೀಸರು ಬಂಧಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.
ಇದೆಲ್ಲದರ ನಡುವೆ ಆಕ್ಸಿಜನ್ ಕೊರತೆಯಿಂದ ಕೋವಿಡ್ ಆಸ್ಪತ್ರೆಯಲ್ಲಿ ಇಪ್ಪತ್ತ ನಾಲ್ಕು ಮಂದಿ ಸಾವನ್ನಪ್ಪಿದ ಪ್ರಕರಣದ ಸಂಬಂಧ ನ್ಯಾಯಾಂಗ ತನಿಖೆ ನಡೆಸಿದ ಸಮಿತಿ ವರದಿ ನೀಡಿದ್ದು ಇದರಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಮತ್ತು ಜಿಲ್ಲೆಯ ಆರೋಗ್ಯ ಇಲಾಖೆಯ ಹಿರಿಯ ವೈದ್ಯರುಗಳ ಕಾರ್ಯ ವೈಫಲ್ಯ ಇರುವುದು ಬಹಿರಂಗವಾಗಿದೆ. ಹಾಗಾದರೆ ರಾಜ್ಯ ಸರ್ಕಾರವ ತಪ್ಪಿತಸ್ಥರ ಮೇಲೆ ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಮತ್ತು ಯಾವಾಗ ಕೈಗೊಳ್ಳುತ್ತಾರೆ ಎಂಬ ಪ್ರಶ್ನೆ ಕಾಡತೊಡಗಿದೆ.
ಹಾಗೆನೋಡಿದರೆ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಕೊರೊನಾ ಸೋಂಕು ತಡೆಗಾಗಿ ಹಲವು ರೀತಿಯ ಕ್ರಮಗಳನ್ನು ಕೈಗೊಂಡಿದ್ದರು. ಇವರ ಬಗ್ಗೆ ಜಿಲ್ಲೆಯಲ್ಲಿ ಉತ್ತಮ ಹೆಸರಿತ್ತು. ಆದರೆ ಆಕ್ಸಿಜನ್ ಕೊರತೆಯಿಂದ ಸೋಂಕಿತರು ಸಾವನ್ನಪ್ಪಿದ ಘಟನೆ ಬಳಿಕ ಅದರಲ್ಲೂ ನ್ಯಾಯಾಂಗ ಸಮಿತಿ ವರದಿ ಬಹಿರಂಗವಾದ ನಂತರವಂತು ಒಂದಷ್ಟು ಜನಪ್ರಿಯತೆ ಕಡಿಮೆಯಾಗಿದೆ.
ಇನ್ನು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಸಹಿತ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಂ.ಸಿ. ರವಿ, ಮೆಡಿಕಲ್ ಕಾಲೇಜಿನ ಡೀನ್ ಡಾ. ಸಂಜೀವ್, ಜಿಲ್ಲಾಸ್ಪತ್ರೆಯ ಶಸ್ತ್ರ ಚಿಕಿತ್ಸಕ, ಕೇಂದ್ರ ಸ್ಥಾನಿಕ ವೈದ್ಯಾಧಿಕಾರಿಗಳ ಮೇಲೆ ಕ್ರಮ ಜರುಗಿಸುವುದು ಖಚಿತವಾಗಿದ್ದು, ಈ ಬಗ್ಗೆ ಸರ್ಕಾರ ಏನು ಕ್ರಮ ಕೈಗೊಳ್ಳಬಹುದು ಎಂಬುದನ್ನು ಕಾದು ನೋಡಬೇಕಾಗಿದೆ.