ಚಾಮರಾಜನಗರ: ಜಿಲ್ಲೆಯಲ್ಲಿ ಎಲ್ಲಾ ಬಿ.ಪಿ.ಎಲ್ ಕುಟುಂಬಗಳಿಗೆ ಆರೋಗ್ಯ ಕಾರ್ಡ್ ವಿತರಿಸುವ ಪ್ರಕ್ರಿಯೆಯನ್ನು ಚುರುಕುಗೊಳಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ ಅವರು ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿಂದು ಆರೋಗ್ಯ ಕಾರ್ಡ್ ವಿತರಣೆ ಸಂಬಂಧ ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳ ಆಡಳಿತ ವೈದ್ಯಾಧಿಕಾರಿಗಳು ಹಾಗೂ ಸುವರ್ಣ ಆರೋಗ್ಯ ಟ್ರಸ್ಟ್ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಎಲ್ಲಾ ಬಿ.ಪಿ.ಎಲ್ ಕುಟುಂಬಗಳಿಗೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತವಾಗಿ ೫ ಲಕ್ಷ ರೂ. ಗಳವರೆಗೂ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಿದೆ. ಪ್ರತಿ ಬಡಕುಟುಂಬದ ಸದಸ್ಯರಿಗೂ ಆರೋಗ್ಯ ಕಾರ್ಡ್ ವಿತರಿಸಿ ಉಚಿತ ಸೇವೆ ಒದಗಿಸುವುದೇ ಸರ್ಕಾರದ ಉದ್ದೇಶವಾಗಿದೆ. ಈ ಸೌಲಭ್ಯ ಪ್ರತಿ ಬಿ.ಪಿ.ಎಲ್ ಕುಟುಂಬಕ್ಕೂ ಲಭ್ಯವಾಗುವಂತೆ ವೈದ್ಯಾಧಿಕಾರಿಗಳು ನಿಗಾ ವಹಿಸಬೇಕು ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ತಿಳಿಸಿದರು.
ಜಿಲ್ಲೆಯಲ್ಲಿ ೧೦ ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಇದ್ದು, ಈ ಪೈಕಿ ಕೋವಿಡ್ ಅಲೆ ಆರಂಭಕ್ಕೂ ಮೊದಲು ೨ ಲಕ್ಷದ ೬೦ ಸಾವಿರ ಜನರಿಗೆ ಆರೋಗ್ಯ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಕಾರ್ಡ್ ವಿತರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಪ್ರಸ್ತುತ ಆರೋಗ್ಯ ಕಾರ್ಡ್‌ಗಳನ್ನು ವಿತರಣೆಯನ್ನು ಮರುಚಾಲನೆಗೊಳಿಸಬೇಕಾಗಿರುವ ನಿಟ್ಟಿನಲ್ಲಿ ಅವಶ್ಯಕ ಸಿದ್ದತಾ ಕಾರ್ಯಗಳನ್ನು ಕೈಗೊಳ್ಳುವಂತೆ ಸೂಚಿಸಿದರು.
ಆರೋಗ್ಯ ಕಾರ್ಡ್‌ಗಳನ್ನು ಜಿಲ್ಲಾಸ್ಪತ್ರೆ, ಎಲ್ಲಾ ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಸೇವಾಸಿಂಧು ಕೇಂದ್ರಗಳು ಹಾಗೂ ಬಾಪೂಜಿ ಸೇವಾ ಕೇಂದ್ರಗಳಲ್ಲಿ ವಿತರಣೆ ಮಾಡಲಾಗುವುದು. ಆರೋಗ್ಯ ಕಾರ್ಡ್ ಹೊಂದಿರುವ ಬಿ.ಪಿ.ಎಲ್ ಕುಟುಂಬಕ್ಕೆ ೫ ಲಕ್ಷದವರೆಗೆ ಹಾಗೂ ಎ.ಪಿ.ಎಲ್ ಕಾರ್ಡ್ ಹೊಂದಿರುವವರಿಗೆ ೫ ಲಕ್ಷ ರೂ.ಗಳಲ್ಲಿ ಶೇ.೩೦ರಷ್ಟು ಅಂದರೆ ೧.೫೦ ಲಕ್ಷ ರೂ.ಗಳವರೆಗೆ ಉಚಿತ ಚಿಕಿತ್ಸಾ ಸೇವಾ ಸೌಲಭ್ಯ ದೊರೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೌಲಭ್ಯ ಪಡೆಯಬೇಕು ಎಂದರು.
ಜಿಲ್ಲೆಯಾದ್ಯಂತ ಆರೋಗ್ಯ ಕಾರ್ಡ್ ವಿತರಣೆ ಕಾರ್ಯವನ್ನು ಸಂಬಂಧಪಟ್ಟ ವೈದ್ಯಾಧಿಕಾರಿಗಳು ವೇಗಗೊಳಿಸಬೇಕು. ಶೀಘ್ರವಾಗಿ ಯೋಜನೆ ಹೆಚ್ಚು ಜನರನ್ನು ತಲುಪಬೇಕೆನ್ನುವುದೇ ಜಿಲ್ಲಾ ಪಂಚಾಯಿತಿ ಆಶಯವಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ ಅವರು ತಿಳಿಸಿದರು.
ಜಿಲ್ಲಾ ಸರ್ವೇಲೆನ್ಸ್ ಅಧಿಕಾರಿ ಡಾ. ನಾಗರಾಜು ಅವರು ಮಾತನಾಡಿ ಕಾರ್ಡ್ ಹೊಂದಿರುವ ಬಿ.ಪಿ.ಎಲ್ ಕುಟುಂಬದವರು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ನೇರವಾಗಿ ಆರೋಗ್ಯ ಸೌಲಭ್ಯ ಪಡೆಯಬಹುದು. ಆರೋಗ್ಯ ಕಾರ್ಡ್ ಇಲ್ಲದಿದ್ದರೂ ಸಹ ಬಿ.ಪಿ.ಎಲ್ ಕಾರ್ಡ್ ಆಧಾರದಲ್ಲಿ ಸೇವೆ ನೀಡಲಾಗುತ್ತಿದೆ. ಎ೪ ಅಳತೆಯ ಕಾರ್ಡ್ ಪಡೆಯಲು ೧೦ ರೂ. ಗಳು ಹಾಗೂ ಪಿ.ವಿ.ಸಿ ಅಳತೆಯ ಕಾರ್ಡ್‌ಗಾಗಿ ೩೫ ರೂ.ಗಳ ಶುಲ್ಕವನ್ನು ಬಿ.ಪಿ.ಎಲ್ ಕುಟುಂಬ ಸದಸ್ಯರು ಪಾವತಿಸಿ ಆರೋಗ್ಯ ಕಾರ್ಡ್ ಪಡೆಯಬೇಕೆಂದು ಸಭೆಗೆ ಮಾಹಿತಿ ನೀಡಿದರು.
ಜಿಲ್ಲಾಸ್ಪತ್ರೆಯ ಸರ್ಜನ್ ಡಾ. ಶ್ರೀನಿವಾಸ್, ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡಾ. ಮಹೇಶ್, ಸುವರ್ಣ ಆರೋಗ್ಯ ಟ್ರಸ್ಟ್ ಜಿಲ್ಲಾ ಸಂಯೋಜಕರಾದ ಡಾ. ನವೀನ್‌ಕುಮಾರ್, ಕೊಳ್ಳೇಗಾಲ ಉಪವಿಭಾಗ ಅಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ರಾಜಶೇಖರ್, ಯಳಂದೂರು ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಶ್ರೀಧರ್, ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಮಂಜುನಾಥ್, ತಾಲೂಕು ಆರೋಗ್ಯ ಅಧಿಕಾರಿ ಡಾ. ಶ್ರೀನಿವಾಸ್, ಡಾ. ಗೋಪಾಲ್, ಡಾ. ಮಂಜುನಾಥ್, ಇತರರು ಸಭೆಯಲ್ಲಿ ಹಾಜರಿದ್ದರು.
