
ಚಾಮರಾಜನಗರ: ಬ್ರಿಟಿಷರ ವಿರುದ್ಧ ಕ್ರಾಂತಿಕಾರಕ ಉದ್ದೇಶವನ್ನಿಟ್ಟುಕೊಂಡು ಭಾರತದ ಸ್ವಾತಂತ್ರ್ಯಕ್ಕೋಸ್ಕರ ಅವಿರತ ಹೋರಾಟ ನಡೆಸಿ ತ್ಯಾಗ-ಬಲಿದಾನ ನಡೆಸಿದ ಚಂದ್ರಶೇಖರ್ ಆಜಾದ್ ವೀರ ಮರಣ ಮರೆಯಲಾಗದು ಎಂದು ಅಖಿಲ ಭಾರತ ಗ್ರಾಹಕ ಪಂಚಾಯತ್ನ ಕ್ಷೇತ್ರಿಯ ಸಂಘಟನಾ ಮಂತ್ರಿ ಬೆಂಗಳೂರಿನ ರಾಜೇಶ್ ಪ್ರಸಾದ್ ತಿಳಿಸಿದರು.

ಅವರು ಜೈಹಿಂದ್ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಚಂದ್ರಶೇಖರ ಆಜಾದ್ ಪುಣ್ಯ ದಿನದಲ್ಲಿ ಆಜಾದ್ ಅವರ ಭಾವಚಿತ್ರಕ್ಕೆ ಪುಷ್ಪವನ್ನು ಸಲ್ಲಿಸಿ ಮಾತನಾಡುತ್ತಾ ಮೈ ಆಜಾದ್ ಹೂಂ, ಆಜಾದಿ ರಹುಂಗ ಎಂಬ ತಮ್ಮ ಘೋಷಿತ ವಾಕ್ಯದಂತೆ ನಡೆದುಕೊಂಡು ದೇಶಕ್ಕಾಗಿ ಬಲಿದಾನ ಮಾಡಿದರು. ಸಾರ್ವಜನಿಕ ರಕ್ಷಣಾ ಮಸೂದೆ, ವ್ಯಾಪಾರ ತಕರಾರು ಮಸೂದೆ ಅಂತಹ ಸನ್ನಿವೇಶಗಳಲ್ಲಿ ಉಗ್ರ ಹೋರಾಟ ನಡೆಸುವುದರ ಜೊತೆಗೆ ನೂರಾರು ಯುವಕರನ್ನು ಹಾಗೂ ಮಹಿಳೆಯರನ್ನು ಕ್ರಾಂತಿಕಾರಿಗಳಾಗಿ ರೂಪಿಸಿದವರು ಚಂದ್ರಶೇಖರ್ ಆಜಾದ್ .
ರಾಷ್ಟ್ರಕ್ಕಾಗಿ ತ್ಯಾಗ ಬಲಿದಾನದ ನೂರಾರು ಮಹಾತ್ಮರ ಕಾರ್ಯಕ್ರಮಗಳನ್ನು ಸ್ಮರಿಸಿಕೊಳ್ಳುವ ಮೂಲಕ ಜೈಹಿಂದ್ ಕಟ್ಟೆ ಮಾದರಿಯಾಗಿದೆ. ಹುತಾತ್ಮ ಕ್ರಾಂತಿಕಾರಿಗಳನ್ನು ಸ್ಮರಿಸುವ ಅವರ ಇತಿಹಾಸವನ್ನು ಸ್ಮರಣೆ ಮಾಡಿಕೊಳ್ಳುವ ಮೂಲಕ ಶ್ರೇಷ್ಠ ಕಾರ್ಯವನ್ನು ಮೂರು ದಶಕಗಳಿಂದ ನಡೆಸುತ್ತಿರುವ ಋಗ್ವೇದಿ ಅವರು ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುತ್ತಿರುವ ವ್ಯಕ್ತಿಯಾಗಿದ್ದಾರೆ ಎಂದರು.
ಜೈಹಿಂದ್ ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ ಚಂದ್ರಶೇಖರ್ ಆಜಾದ್ ಚಳುವಳಿಯಲ್ಲಿ ಭಾಗವಹಿಸಿ ಬಾಲ್ಯದಲ್ಲೇ ೧೨ ಚಡಿ ಏಟಿಗೆ ಒಳಗಾದವರು. ರಾಮ್ ಪ್ರಸಾದ್ ಬಿಸ್ಮಿಲ್ಲಾ ರವರ ಜೊತೆ ಸೇರಿ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ಭಾಗಿಯಾದ ಚಂದ್ರಶೇಖರ ಆಜಾದ್ ತದನಂತರ ಹಿಂದುಸ್ಥಾನ್ ಸೋಸಿಯಲಿಸ್ಟ್ ರಿಪಬ್ಲಿಕ್ ಆರ್ಮಿ ಸ್ಥಾಪಿಸಿ ಪಂಜಾಬಿನ ಸಿಂಹ ಲಾಲಾಲಜಪತರಾಯ ರವರ ಮರಣಕ್ಕೆ ಕಾರಣರಾದ ಬ್ರಿಟಿಷ್ ಪೊಲೀಸ್ ಅಧಿಕಾರಿಯನ್ನು ಹತ್ಯೆ ಮಾಡುವ ಹಾಗೂ ಶಾಸನಸಭೆಯಲ್ಲಿ ಹುಸಿ ಬಾಂಬ್ ಸ್ಫೋಟ ಕಾರ್ಯಾಚರಣೆಯನ್ನು ರೂಪಿಸಿದವರು ಚಂದ್ರಶೇಖರ್ ರವರು. ಬ್ರಿಟಿಷರ ವಿರುದ್ಧ ಹೋರಾಡುತ್ತಲೇ ತನ್ನ ಕೊನೆಯ ಗುಂಡನ್ನು ಹಾರಿಸಿ ಕೊಳ್ಳುವುದರ ಮೂಲಕ ಬ್ರಿಟಿಷರಿಗೆ ಜೀವಸಹಿತ ಸಿಗದೇ ಹುತಾತ್ಮರಾದವರು ಚಂದ್ರಶೇಖರ್ ಆಜಾದ್ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಝಾನ್ಸಿ ಮಕ್ಕಳ ಪರಿಷತ್ತಿನ ಶ್ರಾವ್ಯ ಋಗ್ವೇದಿ ಉಪಸ್ಥಿತರಿದ್ದರು

