ಚಾಮರಾಜನಗರ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ತಾಲೂಕು ಕನ್ನಡ ಸಾಹಿತ್ಯ ಸಾಹಿತ್ಯ ವತಿಯಿಂದ ಮಹಾಮಾನವತಾವಾದಿ ಬಸವೇಶ್ವರರ ಜಯಂತಿಯನ್ನು ಆಚರಿಸಲಾಯಿತು. ನಗರಸಭೆ ಅಧ್ಯಕ್ಷರಾದ ಆಶಾ ನಟರಾಜುರವರು ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪ ಸಲ್ಲಿಸಿ ಉದ್ಘಾಟನೆ ನೆರವೇರಿಸಿದರು.
ಬಸವೇಶ್ವರರು ಸ್ತ್ರೀ ಸಮಾನತೆಗಾಗಿ ಹೋರಾಡಿದವರು. ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ ನೀಡಿದವರು . ಮಹನೀಯರುಗಳ ಜನ್ಮದಿನಾಚರಣೆಯ ಜೊತೆಗೆ ಅವರ ತತ್ವಗಳ ಆಚರಣೆಗೆ ಮಹತ್ವವನ್ನು ನೀಡಬೇಕಾದ್ದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
12ನೇ ಶತಮಾನದಲ್ಲಿ ಉಂಟಾಗಿದ್ದ ಸಾಮಾಜಿಕ ವ್ಯವಸ್ಥೆಯನ್ನು ಸರಿದಾರಿಗೆ ತರುವ ಪ್ರಯತ್ನ ಮಾಡಿದವರು ಎಂದರು.ಮುಖ್ಯ ಅತಿಥಿಗಳಾಗಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾದ ಬಿ.ಕೆ.ರವಿಕುಮಾರ್ ಮಾತನಾಡಿ, ವಚನ ಸಾಹಿತ್ಯದ ಮೂಲಕ ಮಾನವನ ಅಂತರಂಗ ಮತ್ತು ಬಹಿರಂಗದ ಶುದ್ಧತೆಗೆ ಮಹತ್ವ ನೀಡಿದವರು. ಬ್ರಾಹ್ಮಣ ಜನಾಂಗದಲ್ಲಿ ಜನಿಸಿದ ಬಸವೇಶ್ವರರು ಅಂದಿನ ಸಾಮಾಜಿಕ ಮತ್ತು ಧಾರ್ಮಿಕ ಸಮಸ್ಯೆಗಳ ವಿರುದ್ಧ ಹೋರಾಟ ನಡೆಸಿದವರು. ಜಾತಿಪದ್ಧತಿ, ಮೂಢನಂಬಿಕೆ , ಡಂಬಾಚಾರ ಮೇಲುಕೀಳುಗಳ ಭಾವನೆಗಳ ವಿರುದ್ಧ ಹೋರಾಟ ನಡೆಸಿದವರು.
ಎಲ್ಲ ಜಾತಿ ಧರ್ಮದ ಜನರು ಒಟ್ಟುಗೂಡಿ ಚರ್ಚೆ ಮಾಡಿ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ದಿಕ್ಕಿನಲ್ಲಿ ಅವರು ಸ್ಥಾಪಿಸಿದ ಅನುಭವ ಮಂಟಪ ವಿಶ್ವದ ಮೊದಲ ಸಂಸತ್ ಎಂದೇ ಪ್ರಸಿದ್ಧವಾಗಿದೆ. ಬಹುಜನರ ಜನಸಾಮಾನ್ಯರ ಭಾವನೆಗಳಿಗೆ ಅವರ ತತ್ವಗಳು ಇಂದಿಗೂ ಜನಪ್ರಿಯವಾಗಿರುವುದು ಸಾಕ್ಷಿಯಾಗಿದೆ ಎಂದು ತಿಳಿಸಿದರು. ಅಧ್ಯಕ್ಷತೆಯನ್ನು ವಹಿಸಿದ್ದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ, ಮಾನವನು ಪ್ರೀತಿ ಮತ್ತು ವಿಶ್ವಾಸದ ಅಂತಃಕರಣದ ಭಾವನೆಗಳನ್ನು ಅರಳಿಸಿ ಕೊಳ್ಳಬೇಕು ಪ್ರತಿಯೊಬ್ಬ ವ್ಯಕ್ತಿಯು ಸಹಜ ಪ್ರೀತಿಯ ಭಾವನೆಗಳನ್ನು ವ್ಯಕ್ತಪಡಿಸಬೇಕು. ಸಾಮಾಜಿಕ ಮೌಲ್ಯಗಳನ್ನು ತನ್ನೊಳಗೆ ತಂದುಕೊಳ್ಳುವ ಮೂಲಕ ಮಹನೀಯರ ಆಚರಣೆಗೆ ಸತ್ವವನ್ನು ತುಂಬಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಪಂಚಾಯತಿನ ಲೆಕ್ಕಾಧಿಕಾರಿ ಗಂಗಾಧರ್, ರಾಜ ನಗರಸಭಾಧ್ಯಕ್ಷ ಸುರೇಶ್ ನಾಯಕ. ಪ್ರಧಾನ ಕಾರ್ಯದರ್ಶಿ ಮಹಾಲಿಂಗ ಗಿರಿಗೆ, ದಾಕ್ಷಾಯಿಣಿ, ಮಾಜಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೋಮಶೇಖರ ಬಿಸಲ್ವಾಡಿ ಉಪಸ್ಥಿತರಿದ್ದರು.
