ಗುಂಡ್ಲುಪೇಟೆ: ಪಟ್ಟಣದ ಪ್ರಮುಖ ಜನನಿಬಿಡ ಪ್ರದೇಶ ಹಾಗೂ ತಾಲೂಕು ಕಚೇರಿ ಮುಂಭಾಗ ಬೈಕ್‍ಗಳು ಕಳ್ಳತನವಾಗುತ್ತಿದೆ. ಈ ಕಾರಣದಿಂದ ಕೂಡಲೇ ಸಿಸಿ ಕ್ಯಾಮರಾ ಅಳವಡಿಸಿಸುವಂತೆ ತಾಲೂಕು ಕಾವಲು ಪಡೆ ಸಂಘಟನೆ ಸದಸ್ಯರು ತಹಸೀಲ್ದಾರ್ ಹಾಗೂ ಪೊಲೀಸ್ ಇಲಾಖೆಗೆ ಒತ್ತಾಯಿದರು.

ಈ ಸಂದರ್ಭದಲ್ಲಿ ಕಾವಲು ಪಡೆ ಸಂಘಟನೆ ತಾಲೂಕು ಅಧ್ಯಕ್ಷ ಎ.ಅಬ್ದುಲ್ ಮಾಲಿಕ್ ಮಾತನಾಡಿ, ತಾಲೂಕು ಕಚೇರಿ ಮುಂದೆ ನಿರಂತರವಾಗಿ ಬೈಕ್ ಕಳವು ಪ್ರಕರಣಗಳು ನಡೆಯುತ್ತಿರುವ ಕಾರಣ ಸಿಸಿ ಕ್ಯಾಮರಾ ಅಳವಡಿಸುವಂತೆ ಈಗಾಗಲೇ ತಹಸೀಲ್ದಾರ್ ರವಿಶಂಕರ್ ಅವರಿಗೆ ಹಲವು ಬಾರಿ ಮನವಿ ಮಾಡಿದ್ದರೂ ಸಹ ಪ್ರಯೋಜನವಗಿಲ್ಲ. ಸಿಸಿ ಕ್ಯಾಮರಾ ಇಲ್ಲದಿರುವುದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವು ಖದೀಮರು ಸಾರ್ವಜನಿಕರ ಬೈಕ್ ಕಳ್ಳತನ ಮಾಡುತ್ತಿದ್ದಾರೆ. ಆದ್ದರಿಂದ ಈ ಕೂಡಲೇ ಸಿಸಿ ಕ್ಯಾಮರಾ ಅಳವಡಿಕೆ ಮಾಡಲು ಮುಂದಾಗಬೇಕು. ಇಲ್ಲದಿದ್ದರೆ ಸಂಘಟನೆಯಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕಾವಲು ಪಡೆ ತಾಲೂಕು ಗೌರವಾಧ್ಯಕ್ಷ ವೆಂಕಟೇಶ್ ಗೌಡ, ಕಾರ್ಯದರ್ಶಿ ಎಸ್.ಮುಬಾರಕ್, ಕಾರ್ಯಾಧ್ಯಕ್ಷರಾದ ಇಲಿಯಾಸ್, ಕುಣಗಳ್ಳಿ ಶಿವು, ನಾಗರಾಜು ಸೇರಿದಂತೆ ಇತರರು ಇದ್ದರು

ವರದಿ: ಬಸವರಾಜು ಎಸ್.ಹಂಗಳ