ಬೆಂಗಳೂರು: ಬಸಲಿಂಗಯ್ಯ ಎಂಬ ವ್ಯಕ್ತಿ ಕುರುಬ ಜಾತಿಯ ಬಗ್ಗೆ ತುಂಬಾ ಅವಹೇಳನಕಾರಿಯಾಗಿ ಮಾತನಾಡಿದ್ದು, ಈತನನ್ನು ಕೂಡಲೇ ಬಂಧಿಸಬೇಕು, ತಡವಾದರೆ ಆಗುವ ಅನಾಹುತಕ್ಕೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕರ್ನಾಟಕ ಪ್ರದೇಶ ಕುರುಬರ ಸಂಘ ಎಚ್ಚರಿಕೆ ನೀಡುತ್ತದೆ.

ಮಾಜಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರ ಹೇಳಿಕೆ‌ ಕುರಿತು ಖಾಸಗಿ ವಾಹಿನಿಗೆ ಕಲಬುರ್ಗಿಯಿಂದ ಫೋನ್ ಮಾಡಿ ಪ್ರತಿಕ್ರಿಯೆ ನೀಡಿರುವ ಬಸಲಿಂಗಯ್ಯ ಎಂಬ ವ್ಯಕ್ತಿ ಕುರುಬ ಜಾತಿಯನ್ನು ಅವಾಚ್ಯ ಪದಗಳಿಂದ ಹೋಲಿಕೆ ಮಾಡಿ ಪದೇ ಪದೇ ತುಚ್ಛರೀತಿಯಲ್ಲಿ ಜಾತಿ ನಿಂದನೆ ಮಾಡಿ ಲಕ್ಷಾಂತರ ಜನರ ಭಾವನಗೆ ಧಕ್ಕೆ ತಂದಿದ್ದಾನೆ.

ಇಂತಹ ಕೊಳಕು ಮನಸ್ಸಿನ ವ್ಯಕ್ತಿಯನ್ನು ಕೂಡಲೇ ಬಂಧಿಸಿ, ಕಾನೂನಾತ್ಮಕ ಶಿಕ್ಷೆ ಕೊಡದಿದ್ದರೆ, ಸಮಾಜ ಸಮಾಜಗಳ ನಡುವೆ ಘರ್ಷಣೆ ಏರ್ಪಟ್ಟು, ರಾಜ್ಯದಲ್ಲಿ ಅಶಾಂತಿ ಉಂಟಾಗುತ್ತದೆ. ಇಂತಹದಕ್ಕೆ ಅವಕಾಶ ನೀಡದಂತೆ ಸರ್ಕಾರ ತಡಮಾಡದೆ, ಕೂಡಲೇ ಈ ಬಸಲಿಂಗಯ್ಯನನ್ನು ಬಂಧಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘ ಒತ್ತಾಯಿಸುತ್ತದೆ.

ನಮ್ಮದು ಪ್ರಜಾತಂತ್ರ ವ್ಯವಸ್ಥೆ. ಇಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಯಾವುದೇ ವಿಷಯದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಬಹುದು. ಶ್ರೀ ಸಿದ್ದರಾಮಯ್ಯ ಅವರ ಹೇಳಿಕೆಗೂ ಪರ ವಿರೋಧ ಅಭಿಪ್ರಾಯ ವ್ಯಕ್ತಪಡಿಸಲು ಎಲ್ಲರೂ ಸ್ವತಂತ್ರರು. ಆದರೆ ಜಾತಿಯನ್ನು ಕುರಿತು ಅವಹೇಳನ ಮಾಡುವಂತಹದ್ದು ಖಂಡನಾರ್ಹ. ಕುರುಬ ಜಾತಿಯನ್ನು ನಿಂದನಾತ್ಮಕವಾಗಿ ಬಳಸುವುದನ್ನು ಸಮಾಜ ಸಹಿಸುವುದಿಲ್ಲ.

ಬಸಲಿಂಗಯ್ಯ ಹೇಳಿಕೆಯಿಂದ ಕುರುಬ ಸಮಾಜ ತೀವ್ರ ಆಕ್ರೋಶಗೊಂಡಿದೆ. ಸಮಾಜದ ಯುವಕರು ರೊಚ್ಚಿಗೆದ್ದು ಕಾನೂನು ಕೈಗೆತ್ತುಕೊಳ್ಳುವ ಸಂದರ್ಭ ಬರಲು ಅವಕಾಶ ನೀಡದಂತೆ ಆತನನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು. ಇಲ್ಲವಾದಲ್ಲಿ ಇದರಿಂದಾಗುವ ದುಷ್ಪರಿಣಾಮಗಳಿಗೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘ ಎಚ್ಚರಿಕೆ ನೀಡುತ್ತದೆ.