ಮೈಸೂರು.ನವೆಂಬರ್.12- 2020-21ನೇ ಸಾಲಿನ ಮುಂಗಾರು ಋತುವಿನಲ್ಲಿ ಮೈಸೂರು ಜಿಲ್ಲೆಯ ರೈತರು ಬೆಳೆದ ಭತ್ತವನ್ನು ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ಕರ್ನಾಟಕ ಸರ್ಕಾರವು ಆದೇಶಿಸಿದೆ. ಅದರಂತೆ ಮೈಸೂರು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದ ಜಿಲ್ಲಾ ಕಾರ್ಯಪಡೆಯ ತೀರ್ಮಾನದಂತೆ ಉತ್ತಮ ಗುಣಮಟ್ಟದ ಭತ್ತವನ್ನು ರೈತರಿಂದ ಖರೀದಿಸಲಾಗುವುದು.
ಈ ಸಂಬಂಧ ಜಿಲ್ಲೆಯಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ರೈತರು ತಾವು ಬೆಳೆದ ಭತ್ತವನ್ನು ಕನಿಷ್ಠ ಬೆಂಬಲ ಬೆಲೆ ಖರೀದಿ ಕೇಂದ್ರಗಳ ಮೂಲಕ ಮಾರಾಟ ಮಾಡಲು ಕೋರಲಾಗಿದೆ.
ಭತ್ತ ಖರೀದಿಸಲು ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಸಹಕಾರ ಮಾರುಕಟ್ಟೆ ಮಹಾಮಂಡಳಿಯನ್ನು ಏಜೆನ್ಸಿಯನ್ನಾಗಿ ನೇಮಿಸಿದ್ದು, ಸಾಮಾನ್ಯ ಭತ್ತಕ್ಕೆ ಪ್ರತಿ ಕ್ವಿಂಟಾಲ್‍ಗೆ ಕನಿಷ್ಟ ಬೆಂಬಲ ಬೆಲೆ 1,868 ರೂ. ಹಾಗೂ ಗ್ರೇಡ್ ಎ ಭತ್ತಕ್ಕೆ 1,888 ರೂ. ನಿಗಧಿ ಪಡಿಸಲಾಗಿದೆ.
ಭತ್ತ ಖರೀದಿಗೆ ನೋಂದಣಿ ಪ್ರಾರಂಭವಾಗಿದ್ದು, ರೈತರು 30-11-2020 ರಿಂದ 30-12-2020 ರೊಳಗೆ ನೋಂದಾಯಿಸಿಕೊಳ್ಳಬೇಕು. ಅಕ್ಕಿ ಗಿರಣಿಗಳಿಂದ ನೋಂದಣೀ ವಿವರಕ್ಕನುಗುಣವಾಗಿ ಗಿರಣಿಗಳಲ್ಲಿ ಸಂಗ್ರಹಣೆ ಹಾಗೂ ಇತರೆ ವ್ಯವಸ್ಥೆಗಳಿಗೆ 01.12.2020 ರಿಂದ 10.12.2020 ರವರೆಗೆ ಕಾಲಾವಾಕಾಶ ನೀಡಲಾಗಿದೆ. ನೋಂದಾಯಿತ ರೈತರಿಂದ ಭತ್ತವನ್ನು ಖರೀದಿಸಿ ಮಿಲ್‍ಗಳಲ್ಲಿ ಶೇಖರಿಸುವ ಮತ್ತು ಪರಿವರ್ತಿಸುವ ಅವಧಿಯು 20.12.2020 ಪ್ರಾರಂಭವಾಗಿ 20.03.2021 ಕ್ಕೆ ಮುಕ್ತಾಯವಾಗಲಿದೆ.
ಬೆಂಬಲ ಬೆಲೆ ಯೋಜನೆಯಡಿ ಖರೀದಿಸುವ ಭತ್ತ ಸರಾಸರಿ ಉತ್ತಮ ಗುಣಮಟ್ಟದ್ದಾಗಿರಬೇಕು. ಅದರ ಗರಿಷ್ಠ ಮಿತಿಯನ್ನು ನೀಡಲಾಗಿದೆ. ಅನ್ಯ ವಸ್ತುಗಳಾದ ಅಜೈವಿಕ 1.0, ಸಾವಯಾವ ಶೇ.1.0, ವಿರೂಪಗೊಂಡ ಧಾನ್ಯಗಳು ಶೇ. 4.0, ಕುಗ್ಗಿದ ಮತ್ತು ಶ್ರವಣಿತ ಧಾನ್ಯಗಳು ಶೇ. 3.0, ಕೆಳವರ್ಗದ ಮಿಶ್ರಣ ಶೇ. 6.0, ತೇವಾಂಶವು ಗರಿಷ್ಠ ಶೇ.17.0 ರಷ್ಟು ಇರಬೇಕು.
ನೊಂದಾಯಿಸಿಕೊಂಡ ಸಣ್ಣ ಮತ್ತು ಅತೀ ಸಣ್ಣ ರೈತರಿಂದ ಮಾತ್ರ ಗರಿಷ್ಠ 40 ಕ್ವಿಂಟಾಲ್ ಭತ್ತವನ್ನು ಖರೀದಿಸಲಾಗುವುದು.( ಪ್ರತಿ ಎಕರೆಗೆ 16 ಕ್ವಿಂಟಾಲ್‍ನಂತೆ). ರೈತರು ಸರಬರಾಜು ಮಾಡುವ 1 ಕ್ವಿಂಟಾಲ್ ಸಾಮಥ್ರ್ಯದ ಚೀಲಕ್ಕೆ ರೂ.6/- ರಂತೆ ಪಾವತಿಸಲಾಗುವುದು. ಪ್ರತಿಯೊಬ್ಬ ರೈತರು ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಭತ್ತ ಮಾರಾಟ ಮಾಡಲು ಕೃಷಿ ಇಲಾಖೆಯಿಂದ ನೀಡಲಾಗಿರುವ ಫ್ರೂಟ್ ಐ.ಡಿ.ಯನ್ನು ನೀಡಿ ಖರೀದಿ ಕೇಂದ್ರಗಳಲ್ಲಿ ಮೊದಲು ನೊಂದಾಯಿಸಿಕೊಳ್ಳಬೇಕು.
ನೊಂದಣಿ ಮಾಡಿದ ರೈತರು ಇಲಾಖೆಯಿಂದ/ಖರೀದಿ ಏಜೆನ್ಸಿಯಿಂದ ಕಳುಹಿಸುವ ಎಸ್.ಎಂ.ಎಸ್ ಆಧಾರದ ಮೇಲೆ ಸಂಬಂಧಪಟ್ಟ ಅಕ್ಕಿಗಿರಣಿಗಳಿಗೆ ಭತ್ತದ ಮಾದರಿಯನ್ನು (ಸ್ಯಾಂಪಲ್) ಕಡ್ಡಾಯವಾಗಿ ನೀಡತಕ್ಕದ್ದು.
ಅಕ್ಕಿಗಿರಣಿ ಮಾಲೀಕರು ರೈತರಿಂದ ಸ್ವೀಕರಿಸಿದ ಭತ್ತದ ಮಾದರಿಯನ್ನು ಸಂಗ್ರಹಣಾ ಏಜೆನ್ಸಿಗಳಿಂದ ನೇಮಕ ಮಾಡುವ ಗುಣಮಟ್ಟ ಪರಿಶೀಲನಾ ಅಧಿಕಾರಿಯಿಂದ ಗುಣಮಟ್ಟ ದೃಢೀಕರಣ ಪಡೆದ ನಂತರವೇ ಭತ್ತವನ್ನು ಖರೀದಿಸಿ ಸಂಗ್ರಹಣೆ ಮಾಡತಕ್ಕದ್ದು.
ನೊಂದಾಯಿಸಿಕೊಂಡ ರೈತರು ತಾವು ಭತ್ತ ಸರಬರಾಜು ಮಾಡುವ ದಿನಾಂಕದ ಬಗ್ಗೆ ಖರೀದಿ ಕೇಂದ್ರದಿಂದ ಸರಬರಾಜು ಚೀಟಿಯನ್ನು ಪಡೆದು, ರೈತರಿಗೆ ನಿಗಧಿ ಪಡಿಸಿರುವ ದಿನಾಂಕದಂದು ಭತ್ತ ಸರಬರಾಜು ಮಾಡಬೇಕು. ರೈತರಿಂದ ಭತ್ತವನ್ನು ಪಡೆದ ಅಕ್ಕಿಗಿರಣಿ ಮಾಲೀಕರು ಸದರಿ ಮಾಹಿತಿಯನ್ನು ಆನ್‍ಲೈನ್‍ನಲ್ಲಿ ನಮೂದಿಸಬೇಕು. ಹೀಗೆ ನಮೂದಿಸುವಾಗ ಗುಣಮಟ್ಟ ಪರಿಶೀಲನಾ ಅಧಿಕಾರಿ ನೀಡಿರುವ ಒಪ್ಪಿಗೆ ಪತ್ರವನ್ನು ಆನ್‍ಲೈನ್‍ನಲ್ಲಿ ಸ್ಕ್ಯಾನ್ ಮಾಡಿ ಅಪಲೋಡ್ ಮಾಡಬೇಕು.
ರೈತರು ಭತ್ತವನ್ನು ಮ್ಯಾಪ್ ಮಾಡಿದ ಅಕ್ಕಿಗಿರಣಿಗಳಿಗೆ ತಮ್ಮ ಸ್ವಂತ ಖರ್ಚಿನಿಂದ ಸರಬರಾಜು ಮಾಡಬೇಕು ಯಾವುದೇ ಕಾರಣಕ್ಕೂ ಮಧ್ಯವರ್ತಿ ಅಥವಾ ಏಜೆಂಟರ್‍ಗಳನ್ನು ಬೆಂಬಲಿಸಬಾರದು. ಖರೀದಿಯಲ್ಲಿ ಮಧ್ಯವರ್ತಿಗಳು/ ಏಜೆಂಟ್‍ಗಳು ಭಾಗವಹಿಸುವುದು ಕಾನೂನು ಬಾಹಿರವಾಗಿರುತ್ತದೆ.
ರೈತರಿಂದ ಖರೀದಿಸುವ ಭತ್ತದ ಸರಕಿನ ಮೌಲ್ಯವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಪಾವತಿಸಲಾಗುವುದು. 2021ರ ಮಾರ್ಚ್ 20 ರೊಳಗೆ ಮಾತ್ರ ಭತ್ತ ಖರೀದಿಸಲಾಗುವುದು.
ಮಧ್ಯವರ್ತಿಗಳು/ಏಜೆಂಟರ್‍ಗಳು ಖರೀದಿ ಕೇಂದ್ರಗಳಿಗೆ ಭತ್ತವನ್ನು ತಂದಲ್ಲಿ ಅಂತಹವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಟಾಸ್ಕ್‍ಪೋರ್ಸ್ ಸಮಿತಿಯ ಅಧ್ಯಕ್ಷರೂ ಆಗಿರುವ ರೋಹಿಣಿ ಸಿಂಧೂರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

By admin