‘ಕನ್ನಡ ವಿಶ್ವಕೋಶ’ ಮೈಸೂರು ವಿಶ್ವವಿದ್ಯಾನಿಲಯದ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ, ಕನ್ನಡದ ಒಂದು ಪ್ರತಿಷ್ಠಿತ, ಶಾಶ್ವತ ಯೋಜನೆ. ಇದೊಂದು ವಿದ್ವತ್ತಿನ ಬೌದ್ಧಿಕ ಕೆಲಸ. 1969 ರಿಂದ ಇದುವರೆಗೆ ನಿರಂತರವಾಗಿ ಈ ಕೆಲಸ ನಡೆಯುತ್ತ ಬಂದಿದೆ. ಕನ್ನಡ ಸಾಮಾನ್ಯ ವಿಶ್ವಕೋಶ ಮತ್ತು ಕನ್ನಡ ವಿಷಯ ವಿಶ್ವಕೋಶ ಎಂಬ ಎರಡು ಯೋಜನೆಗಳಲ್ಲಿ ಇದುವರೆಗೆ ಪರಿಷ್ಕಾರ ಮತ್ತು ಪುನರ್ ಮುದ್ರಣವೂ ಸೇರಿದಂತೆ 32 ಬೃಹತ್ ಸಂಪುಟಗಳು ಪ್ರಕಟವಾಗಿವೆ. ಇಡೀ ಭಾರತೀಯ ಭಾಷೆಗಳಲ್ಲಿಯೇ ಕನ್ನಡದ ಈ ಕೆಲಸ ಮುಂಚೂಣಿಯಲ್ಲಿದೆ. ಇದೊಂದು ಕನ್ನಡದ ದಾಖಲೆ ಪ್ರಪಂಚದ ಸಕಲ ಜ್ಞಾನವನ್ನು ಕನ್ನಡಿಗರಿಗೆ ಕನ್ನಡದಲ್ಲಿ ಅಧಿಕೃತವಾಗಿ ಕೊಡಬೇಕು. ಎಂಬುದು ಕನ್ನಡ ವಿಶ್ವಕೋಶದ ಆಶಯ. ಈ ಆಶಯ ಪೂರೈಸುವಲ್ಲಿ ‘ಕನ್ನಡ ವಿಶ್ವಕೋಶ’ ಸದಾ ಬದ್ಧತೆಯಿಂದ ಕೆಲಸ ಮಾಡಿದೆ. ಇಡೀ ಭಾರತೀಯ ಭಾಷೆಗಳಲ್ಲಿ ಈ ಬಗೆಯ ಕೆಲಸ ಈ ರೂಪದಲ್ಲಿ ನಡೆದಿಲ್ಲ ಎಂದು ಹೆಮ್ಮೆಯಿಂದ ಹೇಳಬಹುದು ಎಂದು ಡಾ. ಹಾ.ತಿ ಕೃಷ್ಣೇಗೌಡರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈಗ ಇಲ್ಲಿ ಪ್ರಸ್ತಾಪಿಸಬೇಕೆಂದುಕೊಂಡಿರುವ ವಿಚಾರ ಎಂದರೆ ಕರ್ನಾಟಕದ ದೊಡ್ಡ ಪುಸ್ತಕ ಪ್ರಕಾಶನ ಸಂಸ್ಥೆಯೊಂದು ಯಾವುದೇ ಅನುಮತಿ ಪಡೆಯದೆ, ಹೇಳದೆ ಕೇಳದೆ ಕನ್ನಡ ವಿಶ್ವಕೋಶದಿಂದ ನೇರವಾಗಿ ವಿಷಯ ತೆಗೆದುಕೊಂಡು ‘ಸ್ವಂತ’ ಪುಸ್ತಕವೆಂದು ಪ್ರಕಟಿಸಿರುವುದಾಗಿ ಎಂದು ಮಾತನಾಡುತ್ತ…….
‘ಸಪ್ನ ಬುಕ್ ಹೌಸ್’ ಎಂಬ ಪುಸ್ತಕ ಪ್ರಕಾಶನ ಸಂಸ್ಥೆ ಕರ್ನಾಟಕದ ಚರಿತ್ರೆಗೆ ಸಂಬಂಧಿಸಿದಂತೆ ‘ಕರ್ನಾಟಕ ಇತಿಹಾಸ ಮಾಲೆ’ ಎಂಬ ಶೀರ್ಷಿಕೆಯಲ್ಲಿ ಕೆಲವು ಪುಸ್ತಕವನ್ನು ಪ್ರಕಟಿಸಿದೆ. ಈ ಮಾಲೆಯಲ್ಲಿ ಪ್ರಕಟಿಸಿರುವ 6 ಕೃತಿಗಳು ಹೀಗಿವೆ: ಕದಂಬರು, ಗಂಗರು, ಚಾಲುಕ್ಯರು, ಹೊಯ್ಸಳರು, ಶಾತವಾಹನರು, ವಿಜಯನಗರ ಸಾಮ್ರಾಜ್ಯ ಈ 6 ಕೃತಿಗಳನ್ನು ‘ಆರ್‌ಡಿಜಿ’ ಎಂಬ ಸಂಕೇತನಾಮದಲ್ಲಿ ಪ್ರಕಟಿಸಲಾಗಿದೆ.
ಈ 6 ಪುಸ್ತಕಗಳಲ್ಲಿ ಕದಂಬರು, ಹೊಯ್ಸಳರು, ಚಾಲುಕ್ಯರು ಮತ್ತು ವಿಜಯನಗರ ಸಾಮ್ರಾಜ್ಯ – ಈ 4 ಪುಸ್ತಕಗಳ ವಿಚಾರವನ್ನು ನೇರವಾಗಿ, ಅನಾಮತ್ತಾಗಿ, ಯಥಾವತ್ತು ಕನ್ನಡ ವಿಷಯ ವಿಶ್ವಕೋಶ ‘ಕರ್ನಾಟಕ ಸಂಪುಟ-೧’ ಮತ್ತು ಕರ್ನಾಟಕ ಸಂಪುಟ-೨’ – ಈ ಎರಡು ಸಂಪುಟಗಳಿಂದ ಎತ್ತಿಕೊಳ್ಳಲಾಗಿದೆ. ಹೀಗೆ ಮಾಡುವಾಗ ಲೇಖನದ ಶೀರ್ಷಿಕೆಯನ್ನು ಮಾತ್ರ ಬದಲಾಯಿಸಲಾಗಿದೆ, ಅಲ್ಲೊಂದು ಇಲ್ಲೊಂದು ಪದವನ್ನು ಮಾರ್ಪಡಿಸಿದೆ ಅಷ್ಟೇ ಕರ್ನಾಟಕ ವಿಷಯ ವಿಶ್ವಕೋಶ ಸಂಪುಟದಲ್ಲಿ ಮೂಲ ಲೇಖನ ‘ವಿಜಯನಗರ’ ಎಂದಿದ್ದರೆ ಅದನ್ನು ‘ವಿಜಯನಗರ ಸಾಮ್ರಾಜ್ಯ’ ಎಂದು ಬದಲಾಯಿಸಿದೆ. ‘ಕದಂಬ ವಂಶ’ ಎಂಬುದು ‘ಕದಂಬರು’ ಎಂದಾಗಿದೆ. ‘ಹೊಯ್ಸಳ ವಂಶ’ ಎಂಬುದು ‘ಹೊಯ್ಸಳರು’ ಎಂದಾಗಿದೆ. ‘ಚಾಳುಕ್ಯ ವಂಶ’ ಎಂಬುದು ‘ಚಾಲುಕ್ಯರು’ ಆಗಿದೆ. ಈ ಒಂದು ಬದಲಾವಣೆಯನ್ನುಳಿದರೆ ಲೇಖನದ ಮೊದಲ ಅಕ್ಷರದಿಂದ ಕೊನೆಯ ಅಕ್ಷರದವರೆಗೆ ಯಥಾವತ್ತು ನಕಲು ಮಾಡಿ ಅಚ್ಚುಹಾಕಲಾಗಿದೆ. “ಇದು ಅಪ್ಪಟ ಕೃತಿಚೌರ್ಯ. ಕಾಪಿರೈಟ್‌ನ (ಕೃತಿಸ್ವಾಮ್ಯ) ಸ್ಪಷ್ಟ ಉಲ್ಲಂಘನೆ”.
ಇನ್ನು ‘ಗಂಗರು’, ‘ಶಾತವಾಹನರು’ ಎಂಬ ಎರಡು ಶೀರ್ಷಿಕೆಗಳ ವಿಚಾರವನ್ನು ಲೇಖಕರು ಯಾವ ಮೂಲದಿಂದ ‘ವರ’ಪಡಿಸಿಕೊಂಡಿದ್ದಾರೋ ತಿಳಿಯದು.
ಮೇಲೆ ಹೇಳಿದ ಕರ್ನಾಟಕ ಸಂಪುಟದ ನಾಲ್ಕೂ ಲೇಖನಗಳು ಸಮೀಕ್ಷಾ ಲೇಖನಗಳು, ದೀರ್ಘವಾಗಿರುತ್ತವೆ; ಅನೇಕ ವಿಭಾಗಗಳಿರುತ್ತವೆ. ಒಂದೊಂದು ವಿಭಾಗದ ವಿಚಾರವನ್ನೂ, ಉದಾ. ರಾಜಕೀಯ ಇತಿಹಾಸ, ನಾಣ್ಯಗಳು, ಶಾಸನಗಳು, ಲಲಿತಕಲೆ ಇತ್ಯಾದಿ ವಿಷಯಗಳನ್ನು ಒಬ್ಬೊಬ್ಬ ಪರಿಣತ ವಿದ್ವಾಂಸರು ಬರೆದಿರುತ್ತಾರೆ. ಆಯಾ ಭಾಗಕ್ಕೆ ಅವರ ಹೆಸರನ್ನು ಸಂಕೇತಾಕ್ಷರದಲ್ಲಿ ನೀಡಲಾಗುತ್ತದೆ. ಉದಾಹರಣೆಗೆ: ಎವಿಎನ್- ಎ. ವಿ. ನರಸಿಂಹಮೂರ್ತಿ. ಆದರೆ ಇಲ್ಲಿ ಲೇಖಕರ ಹೆಸರನ್ನೂ ಕೈಬಿಡಲಾಗಿದೆ. ಇಡೀ ಪುಸ್ತಕ ‘ಆರ್‌ಡಿಜಿ’ ಎಂಬ ಹೆಸರಿನಲ್ಲಿದೆ. ಹಾಗಾದರೆ ‘ಆರ್‌ಡಿಜಿ’ ಯಾರು? ಇಂಗ್ಲಿಷ್ ನಲ್ಲಿ ಇಂಥವರನ್ನು Ghost writer ಎಂದು ಕರೆಯುತ್ತಾರೆ.
ಕರ್ನಾಟಕ ಪುಸ್ತಕ ಪ್ರಕಾಶನದ ದೊಡ್ಡ ಸಂಸ್ಥೆಯೊಂದು ಇಂಥ ‘ಸಣ್ಣ’ ಕೆಲಸಮಾಡಿರುವುದು ಕನ್ನಡಕ್ಕೆ, ಕನ್ನಡ ವಿಶ್ವಕೋಶಕ್ಕೆ ಮಾಡಿರುವ ದ್ರೋಹ, ಮೋಸ. ಮೈಸೂರು ವಿಶ್ವವಿದ್ಯಾನಿಲಯ ಈ ಬಗ್ಗೆ ಕ್ರಮಕೈಗೊಂಡು ಕಾನೂನು ಕ್ರಮ ಜರುಗಿಸಬೇಕು ಎಂದು ನಾನು ಮನವಿ ಮಾಡಿದರು.ಪತ್ರಿಕಾಗೋಷ್ಠಿಯಲ್ಲಿ ಡಾ. ಅಶೋಕ್ ರಾವ್, ಡಾ. ವಿ. ಶೋಭಾ, ಡಾ ಪಿ. ಗೌರೀಶ್, ಟಿ. ಶ್ರೀನಿವಾಸ್, ಶಿವಣ್ಣ, ಮಂಜುನಾಥ ಬಿ.ಆರ್. ಈಶ್ವರ್.ಹಾಜರಿದ್ದರು.