ಸರಗೂರು ತಾಲೂಕಿನ ಹಂಚೀಪುರ ಗ್ರಾಮದಲ್ಲಿ ಮಂಗಳವಾರ ಕಟ್ಟೆ ಮಾರಮ್ಮನವರ ಜಾತ್ರೆ ಮಹೋತ್ಸವ, ಅಮ್ಮನವರ ಪಲ್ಲಕ್ಕಿ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು

ಸರಗೂರು: ತಾಲೂಕಿನ ಹಂಚೀಪುರ ಗ್ರಾಮದಲ್ಲಿ ಮಂಗಳವಾರ ಗ್ರಾಮ ದೇವತೆ ಕಟ್ಟೆ ಮಾರಮ್ಮನವರ ಜಾತ್ರೆ ಮಹೋತ್ಸವ, ಅಮ್ಮನವರ ಪಲ್ಲಕ್ಕಿ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು.

ಜಾತ್ರಾ ಮಹೋತ್ಸವ ಅಂಗವಾಗಿ ಅಮ್ಮನವರಿಗೆ ಗುಡಿ ಚಪ್ಪರ ಕಟ್ಟಿ, ವಿವಿಧ ಬಗೆಯ ಹೂವಿನಿಂದ ಅಲಂಕಾರ ಮಾಡಲಾಗಿತ್ತು. ದೇವರ ಗುಡಿಯನ್ನು ಹಸಿರು ತೋರಣದಿಂದ ಮಧುವಣಗಿತ್ತಿಯಂತೆ ಸಿಂಗಾರಿಸಲಾಗಿತ್ತು. ದೇವಿಯ ಉತ್ಸವಮೂರ್ತಿಯನ್ನು ಗುಡಿಯಲ್ಲಿ ಕೂರಿಸಿ ವಿಶೇಷ ಪೂಜೆ ನೆರವೇರಿಸಲಾಯಿತು. ಭಕ್ತರು ಈರುಳ್ಳಿ ಸರವನ್ನು ಹೊತ್ತು ತಂದು ಹರಕೆ ತೀರಿಸಿದರು. ನಂತರ ಮಹಾಮಂಗಳಾರತಿ ಮಾಡಲಾಯಿತು.

ಗ್ರಾಮದ ಶ್ರೀ ಸಿದ್ದಮಲ್ಲೇಶ್ವರ ಪಟ್ಟದ ಮಠದಿಂದ ಅಮ್ಮನವರ ಹೂವಿನ ಅಲಂಕಾರದ ಪಲ್ಲಕ್ಕಿ ಉತ್ಸವವನ್ನು ಬಸವದೊಂದಿಗೆ ಮೆರವಣಿಗೆ ನಡೆಸಲಾಯಿತು. ನಂದಿ ಧ್ವಜ, ವೀರಗಾಸೆ ನೃತ್ಯ, ಸತ್ತಿಗೆ, ಮಂಗಳವಾದ್ಯ, ನಗಾರಿ, ಬಾಣ ಬಿರುಸು ಇನ್ನಿತರ ಜಾನಪದ ಕಲಾಪ್ರಕಾರಗಳು ಮೆರವಣಿಗೆಯಲ್ಲಿ ಮೆರಗು ನೀಡಿದವು. ಮಠದ ಚನ್ನಬಸವ ಸ್ವಾಮೀಜಿ, ಕಿರಿಯ ತೋಂಟದಾರ್ಯ ಸ್ವಾಮೀಜಿ ಅವರು ದಿವ್ಯ ಸಾನ್ನಿಧ್ಯ ವಹಿಸಿದ್ದರು. ಹಂಚೀಪುರ, ಸಿದ್ದಾಪುರ ಗ್ರಾಮಸ್ಥರು ಹಾಜರಿದ್ದರು.