ಸರಗೂರು ಪಟ್ಟಣ ಪಂಚಾಯಿತಿ ಕಚೇರಿ ಆವರಣದಲ್ಲಿ ಬುಧವಾರ ಅಧ್ಯಕ್ಷೆ ರಾಧಿಕಾ ಶ್ರೀನಾಥ್ 2022-23ನೇ ಸಾಲಿನ ಆಯವ್ಯಯ ಮಂಡಿಸಿದರು.

ಸರಗೂರು: ಪಟ್ಟಣ ಪಂಚಾಯಿತಿಯ 2022-2023ನೇ ಸಾಲಿನಲ್ಲಿ ಒಟ್ಟು 7.77 ಲಕ್ಷ ರೂ ಉಳಿತಾಯ ಆಯವ್ಯಯ ಮಂಡಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ಮಂಡಿಸಲಾದ ಬಜೆಟ್‍ನಲ್ಲಿ ಪಟ್ಟಣದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ.


ಬುಧವಾರ ಪಟ್ಟಣ ಪಂಚಾಯಿತಿ ಆವರಣದಲ್ಲಿ ನಡೆದ ಬಜೆಟ್ ಮಂಡನೆ ಸಭೆಯಲ್ಲಿ ಅಧ್ಯಕ್ಷೆ ರಾಧಿಕಾ ಶ್ರೀನಾಥ್, 2022-23ನೇ ಸಾಲಿನ ಪ್ರಾರಂಭಿಕ ಶುಲ್ಕ 6.63 ಕೋಟಿ ರೂ, ಒಟ್ಟು ನಿರೀಕ್ಷಿತ ಆದಾಯ 482.26 ಲಕ್ಷ ರೂ. ಇದರಲ್ಲಿ ಒಟ್ಟು ಜುಮ್ಲಾ 1145.26 ಲಕ್ಷ ರೂ. ಈ ಪೈಕಿ ನಿರೀಕ್ಷಿತ ಪಾವತಿಗಳು 1137.49 ಲಕ್ಷ ರೂ. ಆಗಲಿದ್ದು, 7.77 ಉಳಿತಾಯವಾಗಲಿದೆ ಎಂದು ಬಜೆಟ್ ಮಂಡಿಸಿದರು.


ಪಟ್ಟಣ ಪಂಚಾಯಿತಿಯ ಆದಾಯ ಹೆಚ್ಚಿಸುವ ಜೊತೆಗೆ ಅಭಿವೃದ್ಧಿ ಆದ್ಯತೆ ನೀಡಿರುವ ಬಜೆಟ್‍ನಲ್ಲಿ ಪ್ರಸಕ್ತ ಸಾಲಿನಲ್ಲಿ ವಿವಿಧ ಮೂಲಗಳಿಂದ 1.30 ಕೋಟಿ ರೂ. ಸಂಗ್ರಹಿಸಲಾಗಿದೆ. ಆಸ್ತಿ ತೆರಿಗೆಯಿಂದ 45 ಲಕ್ಷ ರೂ., ನೀರು ಸರಬರಾಜು ಶುಲ್ಕ 20 ಲಕ್ಷ ರೂ., ವಾಣಿಜ್ಯ ಸಂಕೀರ್ಣಗಳ ಬಾಡಿಗೆ 15 ಲಕ್ಷ ರೂ., ಉದ್ದಿಮೆ ರಹದಾರಿ 6 ಲಕ್ಷ ರೂ.,ಕಟ್ಟಡ ಪರವಾನಗಿ ಶುಲ್ಕ 2 ಲಕ್ಷ ರೂ., ಅಭಿವೃದ್ಧಿ ಶುಲ್ಕ 5 ಲಕ್ಷ ರೂ., ಸೇರಿದಂತೆ ಇನ್ನಿತರ ಮೂಲಗಳಿಂದ 37 ಲಕ್ಷ ರೂ.ಗಳನ್ನು ಸಂಗ್ರಹಿಸಲಾಗಿದೆ ಎಂದು ಹೇಳಿದರು.


ಇದಲ್ಲದೆ ಸರಕಾರದಿಂದಲೂ 3.74 ಕೋಟಿ ರೂ.ವಿವಿಧ ಅನುದಾನ ಹಂಚಿಕೆಯಾಗಿದ್ದು, ಎಸ್‍ಎಫ್‍ಸಿ ಅನುದಾನ 1.83 ಕೋಟಿ ರೂ., 15ನೇ ಹಣಕಾಸು ಯೋಜನೆ ಅನುದಾನ 61 ಲಕ್ಷ ರೂ., ಎಸ್‍ಬಿಎಂ ಅನುದಾನ 80 ಲಕ್ಷ ರೂ. ಹಾಗೂ ಇತರೆ ಮೂಲಗಳಿಂದ 50 ಲಕ್ಷ ರೂ.ಅನುದಾನ ಹಂಚಿಕೆಯಾಗಿದೆ ಎಂದು ತಿಳಿಸಿದರು.
ಪಟ್ಟಣದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿರುವ ಬಜೆಟ್‍ನಲ್ಲಿ 4.12 ಕೋಟಿ ರೂ.ಅನುದಾನವನ್ನು ವಿವಿಧ ಕಾಮಗಾರಿಗಳಿಗೆ ಪಾವತಿಸಲಾಗಿದೆ. ಆ ಪೈಕಿ ಘನ ತ್ಯಾಜ್ಯ ವಸ್ತು ನಿರ್ವಹಣೆಗೆ 1 ಕೋಟಿ ರೂ.ಅನುದಾನ ಮೀಸಲಿಡಲಾಗಿದ್ದು, ರಸ್ತೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ 50 ಲಕ್ಷ ರೂ., ಬೀದಿ ದೀಪ ಹಾಗೂ ನೀರು ಸರಬರಾಜಿನ ವಿದ್ಯುತ್ಛಕ್ತಿ ಬಿಲ್ ಪಾವತಿಗೆ 50 ಲಕ್ಷ ರೂ., ಖಾಯಂ ನೌಕರರ ವೇತನಕ್ಕೆ 70 ಲಕ್ಷ ರೂ., ಸೇರಿದಂತೆ ಇನ್ನಿತರ ಕಾಮಗಾರಿಗಳಿಗೆ ಅನುದಾನ ಪಾವತಿಸಲಾಗಿದೆ ಎಂದು ಅವರು ವಿವರಿಸಿದರು.


ಮುಖ್ಯಮಂತ್ರಿಗಳ ನಗರೋತ್ಥಾನ ಹಂತ-4 ಯೋಜನೆಯಡಿಯೂ ಪಟ್ಟಣ ಪಂಚಾಯಿತಿಗೆ 5 ಕೋಟಿ ರೂ.ಅನುದಾನ ಹಂಚಿಕೆಯಾಗಿದ್ದು, ಕ್ರಿಯಾ ಯೋಜನೆ ರೂಪಿಸಿ, ಅನುಮೋದನೆಯಾಗಿದ್ದು, ಕಲ್ಯಾಣ ಕಾರ್ಯಕ್ರಮಗಳು ಸೇರಿದಂತೆ ಮೂಲ ಸೌಲಭ್ಯಗಳ ಅಭಿವೃದ್ಧಿಗೂ ಹೆಚ್ಚಿನ ಅನುದಾನ ನೀಡಲಾಗಿದೆ. ಜತೆಗೆ ಪತ್ರಕರ್ತರು ಮತ್ತು ಅವರು ಕುಟುಂಬಸ್ಥರ ಕಲ್ಯಾಣ ನಿಧಿಗೆ 2 ಲಕ್ಷ ರೂ., ಕ್ರೀಡಾಂಗಣ ಅಭಿವೃದ್ಧಿಗೆ 3 ಲಕ್ಷ ರೂ., ವಾಣಿಜ್ಯ ಮಳಿಗೆಗಳ ನಿರ್ಮಾಣಕ್ಕೆ 15 ಲಕ್ಷ ರೂ., ಸಾರ್ವಜನಿಕ, ಸಮುದಾಯ ಶೌಚಾಲಯ ನಿರ್ಮಾಣಕ್ಕೆ 10 ಲಕ್ಷ ರೂ., ಸೇರಿದಂತೆ ಸಾರ್ವಜನಿಕರ ಕೋರಿಕೆ ಮೇರೆಗೆ ಇನ್ನಿತರ ಕಾಮಗಾರಿಗಳಿಗೆ ಅನುದಾನ ಬೀಡಲಾಗಿದೆ ಎಂದರು.
ಪಟ್ಟಣದ ಪಂಚಾಯಿತಿ ಉಪಾಧ್ಯಕ್ಷ ವಿನಾಯಕ ಪ್ರಸಾದ್, ಸದಸ್ಯರಾದ ಎಸ್.ಎಲ್.ರಾಜಣ್ಣ, ಶ್ರೀನಿವಾಸ್, ಶಿವಕುಮಾರ್, ಚಲುವಕೃಷ್ಣ, ಸಣ್ಣತಾಯಮ್ಮ, ಹೇಮಾವತಿ ರಮೇಶ್, ಉಮಾರಾಮು, ಚೈತ್ರಾಸ್ವಾಮಿ, ನಾಮ ನಿರ್ದೇಶನ ಸದಸ್ಯ ಎನ್.ಎಸ್.ಪ್ರತಾಪ್, ಮುಖ್ಯಾಧಿಕಾರಿ ಬಿ.ಜಿ.ಸತೀಶ್ ಸೇರಿದಂತೆ ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ಹಾಜರಿದ್ದರು.


ಸರಗೂರು ಪಟ್ಟಣದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವ ಹಿನ್ನೆಲೆಯಲ್ಲಿ ಉಳಿತಾಯ ಬಜೆಟ್ ಮಂಡಿಸಲಾಗಿದ್ದು, ಬಜೆಟ್‍ನಲ್ಲಿನ ಕಾಮಗಾರಿಗಳನ್ನು ಸಂಪೂರ್ಣವಾಗಿ ಅನುಷ್ಠಾನಕ್ಕೆ ತರುತ್ತೇನೆ. ಜನಪರ ಬಜೆಟ್ ಮಂಡಿಸಿದ್ದೇನೆ.ರಾಧಿಕಾ ಶ್ರೀನಾಥ್, ಅಧ್ಯಕ್ಷರು, ಸರಗೂರು ಪಟ್ಟಣ ಪಂಚಾಯಿತಿ.