ಬೆಂಗಳೂರು: ಕೋವಿಡ್ ರೋಗಿಗಳ ಆರೋಗ್ಯ ಸ್ಥಿತಿಯ ಆಧಾರದ ಮೇಲೆ ಆಸ್ಪತ್ರೆ ದಾಖಲಾತಿಯ ಅಗತ್ಯವನ್ನು ನಿರ್ಧರಿಸುವ ಸಲುವಾಗಿ ಟ್ರಯಾಜ್ ಕೇಂದ್ರವನ್ನು ಪ್ರಾರಂಭಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಿಳಿಸಿದರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ಕೆಂಗೇರಿ ಉಪನಗರದಲ್ಲಿನ ಅಂಬೇಡ್ಕರ್ ಭವನದಲ್ಲಿ ಪ್ರಾರಂಭಿಸಲಾಗಿರುವ ಟ್ರಯಾಜ್ ಕೇಂದ್ರಗಳನ್ನು ಉದ್ಘಾಟನೆ ಮಾಡಿ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಈ ಕೇಂದ್ರದಲ್ಲಿ ದಿನದ 24 ಗಂಟೆಯೂ ವೈದ್ಯರು ಲಭ್ಯವಿರುತ್ತಾರೆ. ಮೂರು ಪಾಳಿಯಲ್ಲಿ ವೈದ್ಯರು ಕರ್ತವ್ಯ ನಿರ್ವಹಿಸುತ್ತಾರೆ. ವೈದ್ಯರು ಇಲ್ಲಿ ರೋಗಿಗಳ ತಪಾಸಣೆ ನಡೆಸಿ ಅಗತ್ಯವಿದ್ದಲ್ಲಿ ಕೋವಿಡ್ ಆರೈಕೆ ಕೇಂದ್ರ ಅಥವಾ ಆಸ್ಪತ್ರೆಗೆ ಸೇರಿಸುವಂತೆ ಶಿಫಾರಸ್ಸು ಮಾಡುತ್ತಾರೆ.
ಸೋಂಕಿತರ ಆರೋಗ್ಯ ಸ್ಥಿತಿಯನ್ನು ಅವಲೋಕಿಸಿ ಅವರಿಗೆ ಸಾಮಾನ್ಯ ಹಾಸಿಗೆ ಸಾಕೇ ಅಥವಾ ಐ.ಸಿ.ಯು ಘಟಕಕ್ಕೆ ದಾಖಲಿಸಬೇಕೇ ಎಂಬುದನ್ನು ಇಲ್ಲಿ ವೈದ್ಯರು ನಿರ್ಧರಿಸುತ್ತಾರೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿಲ್ಲದವರಿಗೆ ಅಗತ್ಯತೆ ಇದ್ದಲ್ಲಿ ಕೋವಿಡ್ ಕೇರ್ ಸೆಂಟರ್ ಇಲ್ಲವೇ ಹೋಂ ಐಸೋಲೇಷನ್ ಮಾಡಲು ಶಿಫಾರಸ್ಸು ಮಾಡುತ್ತಾರೆ.
ಈ ಟ್ರಯಾಜ್ ಕೇಂದ್ರದಲ್ಲಿ ಅಗತ್ಯವಿರುವ ಉಪಕರಣ ಹಾಗೂ ಔಷಧಿಗಳು ಲಭ್ಯವಿದ್ದು, ಕೇಂದ್ರಕ್ಕೆ ಹೊಂದಿಕೊಂಡಂತೆ ಒಂದು ಆಂಬ್ಯೂಲೆನ್ಸ್ ಸಹ ಲಭ್ಯವಿರುತ್ತದೆ. ಮನೆ ಆರೈಕೆಯಲ್ಲಿ ಇರುವ ಸೊಂಕಿತರಿಗೆ ವೈದ್ಯಕೀಯ ಸಲಹೆ ಮತ್ತು ಔಷಧಿಗಳನ್ನು ಸಹ ನೀಡಲಾಗುವುದು.
ಟ್ರಯಾಜ್ ಕೇಂದ್ರದಿಂದ ಸೋಂಕಿತರಿಗೆ ಸೂಕ್ತ ಚಿಕಿತ್ಸಾ ಸೌಲಭ್ಯ ದೊರೆಯುವುದಲ್ಲದೆ, ಈ ಸೌಲಭ್ಯಗಳ ದಕ್ಷ ಹಾಗೂ ಸಮರ್ಥ ರೀತಿಯಿಂದ ಸದ್ಬಳಕೆಯಾಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು ಸೋಂಕಿತರು ಟ್ರಯಾಜ್ ಕೇಂದ್ರದ ಸದುಪಯೋಗವನ್ನು ಪಡೆಯಲು ಪಡೆಯಲು ಮನವಿ ಮಾಡಿದರು.

By admin