ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ಚೆನ್ನಾಗಿ ಕೆಲಸ ಮಾಡುತ್ತಿದ್ದು, ಪಕ್ಷದಲ್ಲಿ ಯಾವುದೇ ಭಿನ್ನಮತ ಇಲ್ಲ ಎನ್ನುವ ಮೂಲಕ ಸಿಎಂ ಬದಲಾವಣೆ ಇಲ್ಲ ಎಂಬ ವಿಚಾರವನ್ನು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಪರೋಕ್ಷವಾಗಿ ಭಿನ್ನಮತೀಯರಿಗೆ ಮುಟ್ಟಿಸಿದ್ದಾರೆ.
ನಗರದ ಕುಮಾರಕೃಪಾ ಅತಿಥಿ ಗೃಹದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಚಿವರು, ಶಾಸಕರ ಮಧ್ಯೆ ಯಾವುದೇ ಭಿನ್ನಮತವಿಲ್ಲ. ಯಾವುದೇ ಶಾಸಕರಿಗೆ ಏನಾದರೂ ಹೇಳುವುದಿದ್ದರೆ, ವೈಯಕ್ತಿಕವಾಗಿ ನನ್ನ ಬಳಿ ಹೇಳಿಕೊಳ್ಳಬಹುದು. ಮಾಧ್ಯಮಗಳ ಮುಂದೆ ಮಾತನಾಡಬಾರದು ಎಂಬ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಆದರೆ ಸಿಎಂ ಬದಲಾವಣೆ ಕುರಿತ ಪ್ರಶ್ನೆಗೆ ಮುಂದೆ ತಿಳಿಸುತ್ತೇನೆ ಎಂದು ಹೇಳುವ ಮೂಲಕ ನಾಯಕತ್ವ ಬದಲಾವಣೆ ಕುರಿತು ಮಾಹಿತಿ ನೀಡಲು ನಿರಾಕರಿಸಿದ್ದಾರೆ.
ಅರುಣ್ ಸಿಂಗ್ ಸ್ವಾಗತಕ್ಕೆ ದೆಹಲಿ ವಿಶೇಷ ಪ್ರತಿನಿಧಿ ಶಂಕರ್ ಗೌಡ ಪಾಟೀಲ್ ಆಗಮಿಸಿದ್ದರು. ಜೊತೆಗೆ ಸಾಕಷ್ಟು ಬಿಜೆಪಿ ಕಾರ್ಯಕರ್ತರು ಸಹ ಆಗಮಿಸಿದ್ದರು. ಅಲ್ಲದೆ ಹವಾಮಾನದ ವೈಪರೀತ್ಯ ಹಿನ್ನೆಲೆ ವಿಮಾನ 25 ನಿಮಿಷ ತಡವಾಗಿ ವಿಮಾನ ಲ್ಯಾಂಡ್ ಆಯಿತು. 3.55ಕ್ಕೆ ಏರ್ಪೋರ್ಟ್ ಗೆ ಆಗಮಿಸಿದ ಅರುಣ್ ಸಿಂಗ್, ಕಾರ್ಯಕರ್ತರೊಂದಿಗೆ ನಡೆದರು. ಈ ವೇಳೆ ಸಾಮಾಜಿಕ ಅಂತರ ಕಾಪಾಡದ್ದಕ್ಕೆ ಕಾರ್ಯಕರ್ತರು ಹಾಗೂ ಪೋಲೀಸರ ನಡುವೆ ಮಾತಿನ ಚಕಮಕಿ ಸಹ ನಡೆಯಿತು.
ರಾಜ್ಯ ಬಿಜೆಪಿಯಲ್ಲಿ ಸಿಎಂ ಬದಲಾವಣೆ ಬಗ್ಗೆ ದೊಡ್ಡ ಚರ್ಚೆ ಶುರುವಾಗಿತ್ತು. ಬಿಜೆಪಿ ಪಕ್ಷದೊಳಗಿನ ಆಂತರಿಕ ಬಿಕ್ಕಟ್ಟು ಹೈಕಮಾಂಡ್ ನಾಯಕರ ಇರಿಸು ಮುರಿಸಿಗೂ ಕಾರಣವಾಗಿತ್ತು. ಇದೇ ಕಾರಣಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಾಯಕತ್ವ ಬದಲಾವಣೆ ಸುತ್ತ ಸೃಷ್ಟಿಯಾಗಿರುವ ಬಿಕ್ಕಟ್ಟು ಬಗೆಹರಿಸಲು ಮೂರು ದಿನಗಳ ಕಾಲ ರಾಜ್ಯ ಪ್ರವಾಸಕ್ಕೆ ಅರುಣ್ ಸಿಂಗ್ ಅವರನ್ನು ರಾಜ್ಯಕ್ಕೆ ಕಳಿಸಲಾಗಿದೆ. ಅವರು ಎಲ್ಲಾ ಶಾಸಕರ ಮತ್ತು ಸಚಿವರುಗಳನ್ನು ಭೇಟಿ ಮಾಡಿ ಖುದ್ದು ಮಾತನಾಡಿ ಅಭಿಪ್ರಾಯ ಸಂಗ್ರಹಿಸಲಿದ್ದಾರೆ.
ರಾಜ್ಯಕ್ಕೆ ಆಗಮಿಸುವ ಮುನ್ನ ದೆಹಲಿಯಲ್ಲಿ ಮಾತನಾಡಿದ ಅವರು, ನಾನು ಎಲ್ಲಿ , ಏನು ಹೇಳಬೇಕೋ ಅಲ್ಲಿಯೇ ಹೇಳುತ್ತೇನೆ. ಇಲ್ಲಿ ಹೆಚ್ಚು ಮಾತನಾಡುವುದಿಲ್ಲ
ಮೂರು ದಿನಗಳ ಭೇಟಿಗಾಗಿ ಕರ್ನಾಟಕಕ್ಕೆ ಹೋಗುತ್ತಿದ್ದೇನೆ. ನಾನು ಎಲ್ಲಿ? ಏನು ಮಾತನಾಡಬೇಕೋ ಅಲ್ಲಿ ಮಾತನಾಡುತ್ತೇನೆ ಎಂದು ಮಾರ್ಮಿಕವಾಗಿ ನುಡಿದ ಅವರು, ಇಲ್ಲಿ ಹೆಚ್ಚು ಮಾತನಾಡುವುದಿಲ್ಲ. ಬೆಂಗಳೂರಿಗೆ ಹೋಗಿ ಶಾಸಕರು, ಸಚಿವರು, ಸಂಸದರು, ಪಕ್ಷದ ಪದಾಕಾರಿಗಳ ಜೊತೆ ಚರ್ಚೆ ಮಾಡುತ್ತೇನೆ. ಎಲ್ಲರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹೇಳಿಕೊಳ್ಳಬಹುದು ಎಂದು ತಿಳಿಸಿದರು.
ಹೈ ಕಮಾಂಡ್ ನಿರ್ದೇಶನದ ಮೇರೆಗೆ ಆಗಮಿಸಿರುವ ಅವರು, ಮೂರು ದಿನಗಳ ಕಾಲ ರಾಜ್ಯದಲ್ಲಿ ವಾಸ್ತವ್ಯ ಹೂಡಲಿದ್ದಾರೆ.