ಮೆದುಳು ನಿಷ್ಕ್ರಿಯ : ಅಂಗಾಂಗ ದಾನ, ಸಾವಿನಲ್ಲೂ ಸಾರ್ಥಕತೆ ಮೆರೆದ ಸವಿತಾ
ಮೈಸೂರು:ಮೆದುಳಿನ ರಕ್ತಸ್ರಾವದಿಂದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ ಸವಿತಾಳ ಅಂಗಾಂಗಗಳನ್ನು ಕುಟುಂಬವರ್ಗದವರು ದಾನ ಮಾಡುವ ಮೂಲಕ ನಾಲ್ಕು ಜೀವಗಳಿಗೆ ಆಸರೆಯಾಗಿದ್ದಾರೆ.
ನಂಜನಗೂಡು ತಾಲ್ಲೂಕು ಆಲಂಬೂರು ಗ್ರಾಮದ ನಂಜುಂಡಸ್ವಾಮಿ ಅವರ ಪತ್ನಿ ೪೦ ವರ್ಷದ ಸವಿತಾ ಸಾವಿನಲ್ಲೂ ಸಾರ್ಥಕತೆಯನ್ನು ಮೆರೆದಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಸವಿತಾ ಫೆ.೧೮ರಂದು ಆಪೋಲೋ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿ, ಚೇತರಿಸಿಕೊಳ್ಳುತ್ತಿರುವಾಗಲೇ ಮತ್ತೆ ಆನಾರೋಗ್ಯಕ್ಕೆ ಒಳಗಾದರು. ಎರಡು ದಿನಗಳ ಕಾಲ ವೆಂಟಿಲೇಟರ್‌ನಲ್ಲಿಡಲಾಗಿತ್ತು. ಮೆದುಳು ನಿಷ್ಕ್ರಿಯಗೊಂಡಿರುವುದಾಗಿ ಮಾರ್ಚ್ ೦೯ ರಂದು ಬೆಳಗ್ಗೆ ವೈದ್ಯರು ಘೋಷಣೆ ಮಾಡಿದರು.
ಹಲವಾರು ಪರೀಕ್ಷೆಗಳಿಂದ ಅವರು ಅಂಗಾಂಗ ದಾನಕ್ಕೆ ಅರ್ಹರು ಎಂದು ಖಚಿತಪಡಿಸಲಾಯಿತು. ನಿಗದಿತ ಶಿಷ್ಟಾಚಾರ ನಿಯಮಗಳ ಪ್ರಕಾರ ಅಂಗಾಂಗ ದಾನಕ್ಕಾಗಿ ಅವರ ಕುಟುಂಬದವರಿಗೆ ಸಲಹೆ ನೀಡಲಾಯಿತು. ಈ ಸಂದರ್ಭದಲ್ಲಿ ಶ್ರೀಮತಿ ಸವಿತಾರವರ ಗಂಡ ಅಂಗಾಂಗ ದಾನ ಮಾಡಲು ಮುಂದೆ ಬಂದರು. ಅವರ ಕುಟುಂಬದವರ ಒಪ್ಪಿಗೆ ಪಡೆದು ಅಂಗಾಂಗಗಳನ್ನು ಪಡೆಯಲಾಯಿತು ಎಂದು ಅಪೋಲೋ ಬಿಜಿಎಸ್ ಆಸ್ಪತ್ರೆ ಉಪಾಧ್ಯಕ್ಷ (ಆಡಳಿತ ವಿಭಾಗ) ಎ.ಜಿ.ಭರತೀಶ ರೆಡ್ಡಿ ತಿಳಿಸಿದರು.
ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆಯಿಂದ ಬುಧವಾರ ಸಂಜೆ ಜೀವಂತ ಹೃದಯವನ್ನು ಗ್ರೀನ್ ಕಾರಿಡಾರ್ ವ್ಯವಸ್ಥೆ ಮೂಲಕ ಬೆಂಗಳೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಗೆ ಸಾಗಿಸಲಾಯಿತು. ಮತ್ತೊಂದು ಆಂಬ್ಯುಲೆನ್ಸ್‌ನಲ್ಲಿ ೧ ಕಿಡ್ನಿಯನ್ನು ಯಶವಂತ ಪುರದಲ್ಲಿರುವ ಸ್ಪರ್ಶ ಆಸ್ಪತ್ರೆಗೆ ರವಾನಿಸಲಾಯಿತು. ೧ ಕಿಡ್ನಿ, ೧ ಯಕೃತ್‌ನ್ನು ಅಪೋಲೋ ಬಿಜಿಎಸ್ ಆಸ್ಪತ್ರೆಯಲ್ಲೇ ರೋಗಿಗಳಿಗೆ ಕಸಿ ಮಾಡಲಾಗಿದೆ. ಕಾರ್ನಿಯಾಗಳನ್ನು ಮೈಸೂರಿನ ಕಣ್ಣಿನ ಬ್ಯಾಂಕ್‌ಗೆ ರವಾನಿಸಲಾಗಿದ್ದು, ಇಬ್ಬರಿಗೆ ಇದರ ನೆರವು ಸಿಗಲಿದೆ.
ಮೈಸೂರಿನ ಅಪೊಲೊ ಬಿಜಿಎಸ್ ಹಾಸ್ಪಿಟಲ್ಸ್ ಮೈಸೂರಿನಲ್ಲಿ ಬಹುಅಂಗಾಂಗ ಕಸಿ ನೆರವೇರಿಸಲು ಪರವಾನಗಿ ಪಡೆದಿರುವ ಕೇಂದ್ರವಾಗಿದೆ ಮತ್ತು ಗರಿಷ್ಠಸಂಖ್ಯೆಯ ಯಕೃತ್ತು ಮತ್ತು ಮೂತ್ರಪಿಂಡ ಕಸಿ ನೆರವೇರಿಸುವ ಮೂಲಕ ಈ ವಲಯದಲ್ಲಿ ಅಂಗಾಂಗ ಕಸಿಗೆ ಕಾಯುತ್ತಿರುವ ರೋಗಿಗಳ ಪಾಲಿಗೆ ಭರವಸೆಯ ಆಶಾಕಿರಣವಾಗಿದ್ದು, ಹೊಸಬೆಳಕು ಮೂಡಿಸಿದೆ. ಈವರೆಗೆ ೩೦೦ ಅಂಗಾಂಗ ಕಸಿ ನೆರವೇರಿಸಲಾಗಿದೆ ಎಂದು ಅಪೋಲೋ ಬಿಜಿಎಸ್ ಆಸ್ಪತ್ರೆ ಉಪಾಧ್ಯಕ್ಷ (ಆಡಳಿತ ವಿಭಾಗ) ಎ. ಜಿ.ಭರತೀಶ ರೆಡ್ಡಿ ತಿಳಿಸಿದರು.