ಗುಂಡ್ಲುಪೇಟೆ: ತಾಲ್ಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿರುವ ಸಾರ್ವಜನಿಕ ಗ್ರಂಥಾಲಯದ ಮೇಲ್ಛಾವಣಿ ಚೆಕ್ಕೆಗಳು ಎಡೆದು ಬೀಳುತ್ತಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ಬೊಮ್ಮಲಾಪುರ ಗ್ರಾಮದಲ್ಲಿ ಅಧಿಕ ಮಂದಿ ವಿದ್ಯಾವಂತ ಯುವಕರಿದ್ದು, ಹೆಚ್ಚಿನ ಜನರು ದಿನ ಪತ್ರಿಕೆ ಓದಲು ಗ್ರಂಥಾಲಯಕ್ಕೆ ಆಗಮಿಸುತ್ತಾರೆ. ಕಿರಿದಾದ ಒಂದು ಕೊಠಡಿಯಲ್ಲಿ ಗ್ರಂಥಾಲಯ ಕಾರ್ಯ ನಿರ್ವಹಿಸುತ್ತಿದ್ದು, ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ.
ಕೊರೊನಾ ಸಂದರ್ಭದಲ್ಲಿ ಶಾಲಾ-ಕಾಲೇಜುಗಳು ಬಾಗಿಲು ಮುಚ್ಚಿದವು. ಈ ವೇಳೆ ಹಳ್ಳಿಗಳತ್ತ ಧಾವಿಸಿದ ವಿದ್ಯಾರ್ಥಿಗಳು ಇಲ್ಲಿನ ಗ್ರಂಥಾಲಯಕ್ಕೆ ಆಗಮಿಸಿ ಓದಲು ಮುಂದಾದರು. ಆದರೆ ಗ್ರಂಥಾಲಯದಲ್ಲಿ ಸರಿಯಾದ ರೀತಿಯ ವ್ಯವಸ್ಥೆ ಇಲ್ಲದ ಕಾರಣ ಹೆಚ್ಚಿನ ಮಂದಿಗೆ ಇಲ್ಲಿಗೆ ಬರಲು ಹಿಂದೇಟು ಹಾಕಿದ್ದಾರೆ.
ಗ್ರಂಥಾಲಯಕ್ಕೆ 2-3 ಪತ್ರಿಕೆಗಳು ಮಾತ್ರ ಬರುತ್ತಿದ್ದು, ದಿನ ನಿತ್ಯ 30ರಿಂದ 50 ಮಂದಿ ಓದಲು ಆಗಮಿಸುತ್ತಾರೆ. ಎಲ್ಲರಿಗೂ ಪತ್ರಿಕೆಗಳು ಓದಲು ಸಿಗುತ್ತಿಲ್ಲ. ಮೊದಲು ಬಂದವರು ಪತ್ರಿಕೆ ತೆಗೆದುಕೊಂಡು ಓದಲು ಆರಂಭಿಸಿದರೆ ಅವರು ಮುಗಿಸಿದ ನಂತರ ಕಾಯ್ದು ಕುಳಿತು ನಂತರ ಓದಬೇಕಿದೆ. ಜೊತೆಗೆ ಇಂಗ್ಲಿಷ್ ಪತ್ರಿಕೆ ಬರುತ್ತಿಲ್ಲ. ಸ್ಪರ್ಧಾತ್ಮದ ಪುಸ್ತಕಗಳಂತು ಗ್ರಂಥಾಲಯದಲ್ಲಿ ಇಲ್ಲವೇ ಇಲ್ಲ. ಈ ಬಗ್ಗೆ ಗ್ರಾಮ ಪಂಚಾಯಿತಿ ಪಿಡಿಓ ಪ್ರಶ್ನೆ ಮಾಡಿದರೆ ಮೌನಕ್ಕೆ ಶರಣಾಗುತ್ತಾರೆ ಎಂದು ಅತಿಥಿ ಶಿಕ್ಷಕರಾದ ಕಾರ್ತಿಕ್ ದೂರಿದರು.
ಕಿರಿದಾದ ಗ್ರಂಥಾಲಯದಲ್ಲಿ ಹೆಚ್ಚಿನ ಮಂದಿ ಕುಳಿತುಕೊಂಡು ಓದಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಮೇಲ್ಛಾವಣಿ ಕುಸಿಯುತ್ತಿದ್ದು, ನೆಲ ಹಾಸಿಗೆಯೂ ಕೂಡ ಕಿತ್ತು ಹೋಗಿದೆ. ಕಿಟಕಿಯೂ ಸಹ ದುರಸ್ತಿಗೊಂಡಿದ್ದು, ಗಾಳಿ ಬೆಳಕು ಬರುತ್ತಿಲ್ಲ. ಉತ್ತಮ ವ್ಯಾಸಂಗಕ್ಕೆ ದೊಡ್ಡ ದೊಡ್ಡ ಪುಸ್ತಕಗಳಿಲ್ಲದಾಗಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಗ್ರಂಥಾಲಯಕ್ಕೆ ಮೂಲ ಸೌಕರ್ಯ ಒದಗಿಸಿ ವಿದ್ಯಾರ್ಥಿಗಳ ಓದಿಗೆ ಅನುಕೂಲ ಮಾಡಿಕೊಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಕಳೆದ ಐದು ತಿಂಗಳ ಹಿಂದೆ ಗ್ರಾಮ ಪಂಚಾಯಿತಿಗೆ ಗ್ರಂಥಾಲಯದ ಉಸ್ತುವಾರಿ ವಹಿಸಲಾಗಿದ್ದು, ಪತ್ಯೇಕವಾದ ಕಟ್ಟಡ ನಿರ್ಮಾಣಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಅಷ್ಟರೊಳಗೆ ಇರುವ ಕಟ್ಟಡವನ್ನೇ ದುರಸ್ತಿಗೊಳಿಲಾಗುವುದು. ಜೊತೆಗೆ ಓದುಗರಿಗೆ ಉಪಯುಕ್ತವಾಗುವ ವಾತಾವರಣ ನಿರ್ಮಿಸಿ ಸ್ಫರ್ಧಾತ್ಮಕ ಸೇರಿದಂತೆ ಇನ್ನಿತರ ಹಲವು ಪುಸ್ತಕಗಳ ವ್ಯವಸ್ಥೆ ಮಾಡಲಾಗುವುದು ಎಂದು ಬೊಮ್ಮಲಾಪುರ ಪಿಡಿಓ ರಷಿಯಾ ತಿಳಿಸಿದರು.
ವರದಿ: ಬಸವರಾಜು ಎಸ್ ಹಂಗಳ