ಬೆಂಗಳೂರು: ಸುಮಾರು ಎರಡು ತಿಂಗಳ ಬಳಿಕ ಕೆಎಸ್ ಆರ್ ಟಿಸಿ ಬಸ್ ಗಳು ಜೂನ್.21 ರಿಂದ ರಸ್ತೆಗೆ ಇಳಿಯಲಿದ್ದು, ರಾಜಧಾನಿ ಬೆಂಗಳೂರಿನಲ್ಲಿ 2000 ಬಸ್‌ಗಳು ಕೋವಿಡ್ ನಿಯಮ ಪಾಲಿಸಿಕೊಂಡು ಸಂಚಾರ ನಡೆಸಲಿವೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ. ಶಿಖಾ ಹೇಳಿದ್ದಾರೆ.
ನಗರದ ಬಿಎಂಟಿಸಿಯಲ್ಲಿ 6,400 ಬಸ್‌ಗಳಿದ್ದು, ಮೊದಲ ಹಂತದಲ್ಲಿ 1,500 ರಿಂದ 2,000 ಸಾವಿರ ಬಸ್‌ಗಳು ಓಡಾಟ ನಡೆಸಲಿವೆ. ಆದರೆ ಕೊರೊನಾ ಭೀತಿ ಹಿನ್ನೆಲೆ ಬಿಎಂಟಿಸಿ ಎಸಿ ವೋಲ್ವೋ ಬಸ್‌ಗಳು ಸಂಚಾರ ನಡೆಸುವುದಿಲ್ಲ ಎಂದು ಹೇಳಿದ್ದಾರೆ.
ಕಳೆದ ಏಪ್ರಿಲ್ 7ರಿಂದ ಏ.21ರವರೆಗೆ ನಡೆದ ಸಾರಿಗೆ ನೌಕರರ ಮುಷ್ಕರ ಮತ್ತು ಏ.27ರಿಂದ ಜೂನ್ 20ರವರೆಗೂ ಕೊರೊನಾ ಲಾಕ್‌ಡೌನ್‌ನಿಂದಾಗಿ ಡಿಪೋಗಳಲ್ಲೇ ನಿಂತಿದ್ದ ಬಸ್‌ಗಳು ಸದ್ಯ ಧೂಳು ತುಂಬಿಕೊಂಡಿದ್ದು, ಅವುಗಳ ಸ್ವಚ್ಛತಾ ಕಾರ್ಯ ಈಗಾಗಲೇ ನಡೆಸಲಾಗಿದ್ದು, ಎಲ್ಲಾ ಬಸ್‌ಗಳನ್ನು ಸ್ವಚ್ಛಗೊಳಿಸಿ, ಬಸ್ ಸೀಟ್‌ಗಳಿಗೆ ಸ್ಯಾನಿಟೈಸ್ ಕೂಡ ಮಾಡಲಾಗುತ್ತಿದೆ. ಇನ್ನು ಬಿಎಂಟಿಸಿ ಚಾಲನಾ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಲು ಕಡ್ಡಾಯವಾಗಿ ಮೊದಲನೇ ಕೊರೊನಾ ಲಸಿಕೆ ಪಡೆದಿರಬೇಕು ಜತೆಗೆ RTPCR ಟೆಸ್ಟ್ ಮಾಡಿಸಿ ಕೊಂಡಿರುವ ವರದಿ ತರಬೇಕು ಎಂದು ಎಂಡಿ ಶಿಖಾ ತಿಳಿಸಿದ್ದಾರೆ.
ಸೋಮವಾರದಿಂದ ಬಿಎಂಟಿಸಿ ಬಸ್ ಸಂಚಾರ ಆರಂಭಿಸಲಿರುವುದರಿಂದ ಕಾರ್ಯ ಚಟುವಟಿಕೆಗಳು ನಿಧಾನವಾಗಿ ಆರಂಭವಾಗಲಿದ್ದು, ಬಸ್ ಗಳಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಹೇಗೆ ಸಂಚಾರ ನಡೆಸುತ್ತಾರೆ ಎಂಬುದು ಸಂಚಾರ ಆರಂಭವಾದ ಬಳಿಕ ಗೊತ್ತಾಗಲಿದೆ.