ಮೈಸೂರು: ಮೈಸೂರು ನಗರದಲ್ಲಿ ಕೋವಿಡ್ ಸಂಕಷ್ಟದ ಸಮಯದಲ್ಲಿಯೂ ರಕ್ತದಾನದತ್ತ ಯುವಜನತೆ ಒಲವು ತೋರಿರುವುದು ಸಂತಸದ ವಿಷಯವಾಗಿದೆ
ಈಗಾಗಲೇ ಹಲವು ಸಂಸ್ಥೆಗಳು ರಕ್ತದಾನದ ಶಿಬಿರ ಆಯೋಜಿಸಿದ್ದು ಇದರಲ್ಲಿ ಯುವಕ ಯುವತಿಯರು ಉತ್ಸಾಹದಿಂದ ಪಾಲ್ಗೊಂಡು ರಕ್ತದಾನ ಮಾಡುತ್ತಿದ್ದಾರೆ. ಸದ್ಯ ಎದುರಾಗಿರುವ ರಕ್ತದ ಕೊರತೆಯನ್ನು ಆ ಮೂಲಕ ನೀಗಿಸುವ ಕಾರ್ಯಗಳು ನಗರದಲ್ಲಿ ನಡೆಯುತ್ತಿದೆ.
ಜಾಗೋ ಮೈಸೂರು ವತಿಯಿಂದ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಸಿದ್ಧಾರ್ಥ ಲೇಔಟ್ ನಲ್ಲಿರುವ ಐಸಿಐಸಿಐ ಬ್ಯಾಂಕ್ ಸಮೀಪ ಜೀವಧಾರ ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ ನಡೆಸಲಾಗಿದ್ದು, ಇದರಲ್ಲಿ ಸ್ವಯಂಪ್ರೇರಿತವಾಗಿ ಮೂವತ್ತಕ್ಕೂ ಹೆಚ್ಚು ಯುವಕಯುವತಿಯರು ರಕ್ತದಾನ ಮಾಡಿ ಗಮನಸೆಳೆದಿದ್ದಾರೆ.
ಈ ವೇಳೆ ಮಾತನಾಡಿದ ಜಾಗೋ ಭಾರತ್ ಅಧ್ಯಕ್ಷ ಚೇತನ್ ಮಂಜುನಾಥ್ ಅವರು, ಜನತಾ ಕರ್ಫ್ಯೂ ಸಮಯದಲ್ಲಿ ತುರ್ತಾಗಿ ರಕ್ತ ಬೇಕಾದರೆ ಒದಗಿಸುವುದು ಕಷ್ಟವಾಗುತ್ತದೆ. ಜತೆಗೆ ದಾನಿಗಳಿಗೂ ರಕ್ತದಾನ ಮಾಡಲು ತೊಂದರೆಯಾಗುತ್ತದೆ. ಈಗಾಗಲೇ ಕೋವಿಡ್ ಲಸಿಕೆ ೪೫ ವರ್ಷ ಮೇಲ್ಪಟ್ಟವರಿಗೆ ನೀಡಲಾಗುತ್ತಿದೆ. ಹಾಗೂ ೧೮ ವರ್ಷ ಮೇಲ್ಪಟ್ಟವರಿಗೂ ಸಹ ಕೋವಿಡ್ ಲಸಿಕೆ ನೀಡಲು ಸರ್ಕಾರ ತೀರ್ಮಾನ ತೆಗೆದುಕೊಂಡು ಈಗಾಗಲೇ ಪ್ರಾರಂಭಿಸಿದೆ. ಲಸಿಕೆ ಪಡೆದ ಕೆಲ ದಿನಗಳ ಕಾಲ ರಕ್ತದಾನ ಮಾಡಲು ಸಾಧ್ಯವಾಗದೆ ಇರಬಹುದು ಎಂಬ ಕಾರಣಕ್ಕೆ ಜಾಗೋ ಭಾರತ್ ಕಾರ್ಯಕರ್ತರು ಈಗಿನಿಂದಲೇ ರಕ್ತದಾನ ಮಾಡಲು ನಿರ್ಧರಿಸಿ, ಶಿಬಿರ ನಡೆಸಿದ್ದು, ಸದ್ಯ ಸುಮಾರು ೩೦ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ರಕ್ತದಾನ ಮಹಾದಾನ, ಯುವ ತರುಣರೇ ತುಂಬಿರುವ ದೇಶದಲ್ಲಿ ಆರೋಗ್ಯವಂತ ಭಾರತ ನಿರ್ಮಾಣವಾಗಬೇಕಾದರೆ ರಕ್ತದಾನ ಮಾಡಬೇಕು. ನಮ್ಮ ಒಂದೊಂದು ಹನಿರಕ್ತವೂ ಮತ್ತೊಂದು ಜೀವವನ್ನು ಉಳಿಸುವ ಸಂಜೀವಿನಿಯಾಗಬಹುದು. ಆದ್ದರಿಂದ ರಕ್ತದಾನ ಮಾಡಲು ಅರ್ಹರಾಗಿರುವವರು ರಕ್ತದಾನ ಮಾಡುವಾಗ ಮತ್ತು ಮಾಡಿದ ನಂತರ ವಹಿಸಬೇಕಾದ ಕೆಲವೊಂದು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳಿದುಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ರಕ್ತದಾನ ಶಿಬಿರದಲ್ಲಿ ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್, ನಗರ ಪಾಲಿಕಾ ಸದಸ್ಯರಾದ ಡಾ.ರೂಪ ಯೋಗೇಶ್, ಸ್ಯಾಮ್ಯುಲ್ ವಿಲ್ಸನ್, ಡಾ.ಅವಿನಾಶ್, ದಿಲೀಪ್, ಗಿರೀಶ್, ಜಾಗೋ ಮೈಸೂರು ಸದಸ್ಯರಾದ ಚರಣ್, ಸ್ವಾರ್ಥಕೆ ಪಿ ಗೌಡ, ಶೇಖರ್, ಸಂದೀಪ್, ಸಾವಿತ್ರಿ ಇನ್ನಿತರರು ಇದ್ದರು