ಗುಂಡ್ಲುಪೇಟೆ: ಜಾತಿ-ಧರ್ಮದ ಪ್ರಚೋದನೆಯಿಂದ ಬಿಜೆಪಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್‍ಗೆ ಹಿನ್ನೆಡೆಯಾದರೂ ಜನರ ಸಮಸ್ಯೆಗಳಿಗೆ ಸದಾ ಸ್ಪಂದಿಸುವ ಕೆಲಸ ಮಾಡುತ್ತಿದೆ ಎಂದು ಮಾಜಿ ಸಂಸದ ಆರ್. ಧೃವನಾರಾಯಣ್ ತಿಳಿಸಿದರು.

ಪಟ್ಟಣದಲ್ಲಿ ಗುಂಡ್ಲುಪೇಟೆ ಮತ್ತು ಬೇಗೂರು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಕಾಂಗ್ರೆಸ್ ಬೆಂಬಲಿತರಾಗಿ ಗ್ರಾಮ ಪಂಚಾಯಿತಿಗೆ ಆಯ್ಕೆಯಾದ ನೂತನ ಸದಸ್ಯರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇಲ್ಲದಿದ್ದರೂ ಅಧಿಕ ಗ್ರಾಮ ಪಂಚಾಯಿತಿಗಳಲ್ಲಿ ಗದ್ದುಗೆ ಹಿಡಿದಿರುವುದು ಹೆಮ್ಮೆಯ ವಿಷಯ ಎಂದರು.

ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 40 ಗ್ರಾಮ ಪಂಚಾಯಿತಿಗಳಲ್ಲಿ 296 ಮಂದಿ ಕಾಂಗ್ರೆಸ್ ಬೆಂಬಲಿತರು ಗೆಲುವು ಸಾಧಿಸಿರುವುದನ್ನು ನೋಡಿದರೆ ಎಚ್.ಎಸ್. ಮಹದೇವಪ್ರಸಾದ್ ಅವರ ಅಭಿವೃದ್ಧಿ ಕಾರ್ಯಗಳೇ ಇದಕ್ಕೆ ಸಾಕ್ಷಿ. ಕಳೆದ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ನಮಗೆ ಸೋಲಾಗಿರಬಹುದು. ಆದರೆ ನಾವು ಸೋಲನ್ನು ಸವಾಲಾಗಿ ಸ್ವೀಕರಿಸಿ ಅಭಿವೃದ್ಧಿ ಕಾರ್ಯಗಳತ್ತ ಗಮನ ಹರಿಸಿದ್ದೇವೆ. ಆದ್ದರಿಂದ ಯಾರು ಸೋಲಿಗೆ ಧೃತಿಗೆಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.

ಕಳೆದ ಬಾರಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಯಾವುದೇ ಕಪ್ಪುಚುಕ್ಕೆ ಇಲ್ಲದೆ 5 ವರ್ಷ ಪೂರೈಸಿದ್ದಾರೆ. ಮಹದೇವಪ್ರಸಾದ್ ಸಿದ್ದರಾಮಯ್ಯ ಅವರನ್ನು ಚಾಮರಾಜನಗರಕ್ಕೆ ಕರೆತಂದು ಕೋಟ್ಯಾಂತರ ರೂ. ಅಭಿವೃದ್ಧಿ ಕೆಲಸ ಮಾಡಿಸಿದ್ದಾರೆ. ಆದರೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜಿಲ್ಲೆಗೆ ಬರಲು ಹೆದರುತ್ತಿದ್ದು, ಬಿಜೆಪಿ ಸರ್ಕಾರದಿಂದ ಜಿಲ್ಲೆಯ ಪ್ರಗತಿ ಶೂನ್ಯ. ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ಶಾಶ್ವತ ಕುಡಿಯುವ ನೀರು, ಮೆಡಿಕಲ್ ಕಾಲೇಜು, ನೂತನ ಆಸ್ಪತ್ರೆ, ರಸ್ತೆ ಸೇರಿದಂತೆ ಅನೃಕ ಅಭಿವೃದ್ಧಿ ಕಾಂಗ್ರೆಸ್ ಸರ್ಕಾರದ ವೇಳೆ ಆಗಿದೆ ಎಂದರು.

ಗ್ರಾಮ ಪಂಚಾಯಿತಿಯಲ್ಲಿ ಗೆದ್ದಿರುವ ಸದಸ್ಯರು ಪ್ರಾಮಾಣಿಕವಾಗಿ ಕೆಲಸ ಮಾಡುವ ಮೂಲಕ ನಿರ್ಗತಿಕರು, ಬಡವರ ಪರ ನಿಲ್ಲಬೇಕು. ಮುಂದೆ ಬರುವ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಯಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ತಾಲ್ಲೂಕಿನ ಅಭಿವೃದ್ಧಿಗೆ ನಾಂದಿಯಾಡಬೇಕು. ಗುಂಡ್ಲುಪೇಟೆ ಶಾಸಕರು ಯಾವುದೇ ಒಂದು ಹೊಸ ಯೋಜನೆಯನ್ನು ತರದೆ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಕುಟುಕಿದರು.

ಮಾಜಿ ಸಚಿವರಾದ ಗೀತಾ ಮಹದೇವಪ್ರಸಾದ್ ಮಾತನಾಡಿ, ಕಳೆದ ಉಪ ಚುನಾವಣೆಯಲ್ಲಿ ನನಗೆ ಅಧಿಕಾರ ಸಿಕ್ಕ ಅವಧಿ ಕೇವಲ ಒಂದು ವರ್ಷ. ಅದರಲ್ಲೂ ಸಚಿವರಾಗಿದ್ದು ಬರೀ ಏಳು ತಿಂಗಳು ಮಾತ್ರ. ಆ ವೇಳೆ ನಾನು ತಂದು ಅನುದಾನವನ್ನು ಈಗಿನ ಶಾಸಕ ನಿರಂಜನಕುಮಾರ್ ತಮ್ಮದೆಂದು ಹೇಳಿಕೊಂಡು ಬೊಬ್ಬೆ ಹೊಡೆಯುತ್ತಿದ್ದಾರೆ. ಏಳು ತಿಂಗಳ ಅನುದಾನವನ್ನು ಇವರ 5 ವರ್ಷದ ಅವಧಿಯಲ್ಲಿಯೂ ತರಲು ಸಾಧ್ಯವಿಲ್ಲ ಎಂದು ಸವಾಲೆಸೆದರು.

ಎಚ್.ಎಸ್. ಮಹದೇವಪ್ರಸಾದ್ ಭಗೀರಥನಂತೆ ತಾಲ್ಲೂಕನ್ನು ಅಭಿವೃದ್ಧಿ ಮಾಡಿದ್ದಾರೆ. ಗ್ರಾಮ ಪಂಚಾಯಿತಿಯಲ್ಲಿ ಪಕ್ಷದ ಚಿಹ್ನೆ ಇಲ್ಲದಿದ್ದರೂ ಕಾಂಗ್ರೆಸ್ ಬೆಂಬಲಿತರು ಅಧಿಕ ಮಂದಿ ಗೆದ್ದು ನಮಗೆ ಬಲ ನೀಡಿದ್ಧಾರೆ. ಈ ಹಿನ್ನೆಲೆಯಲ್ಲಿ ತಾನು ಅನಾರೋಗ್ಯದಿಂದ ಇದ್ದರೂ ಸಹ ಇಂದು ಕಾರ್ಯಕ್ರಮಕ್ಕೆ ಬಂದಿದ್ಧೇವೆ ಎಂದು ಅಂತಸ ವ್ಯಕ್ತ ಪಡಿಸಿದ ಅವರು, ತಾಲ್ಲೂಕಿನ ಅಭಿವೃದ್ಧಿಯೇ ನಮ್ಮ ಮಂತ್ರ ಎಂದು ತಿಳಿಸಿದರು.

ಕಾಂಗ್ರೆಸ್ ಯುವ ಮುಖಂಡ ಗಣೇಶ್‍ಪ್ರಸಾದ್ ಮಾತನಾಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನದ ಮೀಸಲಾತಿ ವಿಚಾರದಲ್ಲಿ ಬಿಜೆಪಿಯವರು ಷಡ್ಯಂತ್ರ ಮಾಡಲು ಹೊರಟಿದ್ದಾರೆ. ಅವರ ಆಮಿಷಗಳಿಗೆ ನಮ್ಮ ನಿಷ್ಠಾವಂತ ಪಕ್ಷದ ಬೆಂಬಲಿಗರು ಮರುಳಾಗುವುದು ಬೇಡ. ಯಾವುದೇ ರೀತಿಯ ಆಮಿಷ ನೀಡಿದರೂ ಪಕ್ಷ ತೊರೆದು ಹೋಗಬಾರದು ಎಂದು ಮನವಿ ಮಾಡಿದರು.

ಈ ವೇಳೆ ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮ ಪಂಚಾಯಿಗಳಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತ 296 ಸದಸ್ಯರಿಗೆ ಸನ್ಮಾನ ಮಾಡಿ ಅಭಿನಂದನೆ ಸಲ್ಲಿಸಲಾಯಿತು.

ಶಾಸಕ ಪುಟ್ಟರಂಗಶೆಟ್ಟಿ, ವಿಧಾನ ಪರಿಷತ್ ಸದಸ್ಯ ಆರ್. ಧರ್ಮಸೇನಾ, ಮಾಜಿ ಶಾಸಕ ಎ.ಆರ್. ಕೃಷ್ಣಮೂರ್ತಿ, ಮಾಜಿ ಸಂಸದ ಎ.ಸಿದ್ದರಾಜು, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್. ನಂಜಪ್ಪ, ಜಿಪಂ ಸದಸ್ಯರಾದ ಕಬ್ಬಹಳ್ಳಿ ಮಹೇಶ್ ಮಾತನಾಡಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಸ್ವಾಮಿ, ಚಾಮುಲ್ ಅಧ್ಯಕ್ಷ ನಂಜುಂಡಪ್ರಸಾದ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಧುಶಂಕರ್, ಉಪಾಧ್ಯಕ್ಷರಾದ ಸುಮಿತ್ರಾ ಮಹೇಶ್, ಜಿಪಂ ಸದಸ್ಯರಾದ ಕೆರಹಳ್ಳಿ ನವೀನ್, ಬೇಗೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಶೇಖರ್, ಮುನಿರಾಜು, ಆಲತ್ತೂರು ಜಯರಾಮ್, ಎಐಸಿಸಿ ಕಾರ್ಯದರ್ಶಿ ನಾಗೇಶ್‍ರಾಜ್, ಬಿ.ಕೆ. ರವಿಕುಮಾರ್ ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.

ವರದಿ: ಬಸವರಾಜು ಎಸ್ ಹಂಗಳ

By admin