ಸರಗೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ ಜನಪರ ಯೋಜನೆಗಳನ್ನು ಆಡಳಿತರೂಢ ಬಿಜೆಪಿ ಸರ್ಕಾರ ಮೊಟುಕುಗೊಳಿಸಿದ್ದು, ಜನ ವಿರೋಧಿ ಆಡಳಿತ ನೀಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ತಾಲ್ಲೂಕಿನ ಮೊಳೆಯೂರು ಗ್ರಾಮದಲ್ಲಿ ಶುಕ್ರವಾರ ಕುರುಬ ಸಮಾಜದಿಂದ ನಡೆದ ಶ್ರೀ ಬಿಲ್ ಕುಮಾರಸ್ವಾಮಿ, ದೇವಸ್ಥಾನದ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕನಕ ಭವನ ಉದ್ಘಾಟಿಸಿ, ನಂತರ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.
ಮುಖ್ಯಮಂತ್ರಿಯಾಗಿದ್ದಾಗ ೧೬೫ ಭರವಸೆಗಳನ್ನು ಈಡೇರಿಸಿದ್ದೇನೆ. ಶ್ರೀ ಸಾಮಾನ್ಯನ ಅನುಕೂಲಕ್ಕಾಗಿ ಕಾಂಗ್ರೆಸ್ ಜಾರಿಗೊಳಿಸಿದ ಇಂದಿರಾ ಕ್ಯಾಂಟಿನ್, ಪಶು ಭಾಗ್ಯ, ಶೋ ಭಾಗ್ಯ ಸೇರಿದಂತೆ ಇನ್ನಿತರ ಯೋಜನೆಗಳನ್ನು ನಿಷೇಧಿಸಿ, ಇನ್ನು ಕೆಲವು ಯೋಜನೆಗಳನ್ನು ಕಡಿತಗೊಳಿಸುವ ಮೂಲಕ ಜನ ವಿರೋಧಿ ಆಡಳಿತ ನೀಡುತ್ತಿದೆ. ಎಸ್‌ಸಿ, ಎಸ್ಟಿ ಅನುದಾನ ಕಡಿತಗೊಳಿಸಿ, ಮೋಸ ಮಾಡುತ್ತಿದ್ದಾರೆ. ರೈತರಿಗೆ ಕನಿಷ್ಠ ಬೆಂಬಲ ನೀಡುವಲ್ಲಿ ವಿಫಲವಾಗಿದ್ದಾರೆ. ದಿನ ಬಳಕೆ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಪ್ರಧಾನಿ ನರೇಂದ್ರ ಮೋದಿ ರೈತರ ಮನೆ ಹಾಳು ಮಾಡಿದ್ದಾರೆ ಎಂದು ಅವರು ಟೀಕಿಸಿದರು.
ತಾಲ್ಲೂಕು ಅಭಿವೃದ್ಧಿಗೆ ಕಡೆಗಣೆನೆ: ಮುಖ್ಯಮಂತ್ರಿಯಾಗಿದ್ದಾಗ ಕೊನೆಯ ಅವಧಿಯಲ್ಲಿ ೫೩ ಹೊಸ ತಾಲ್ಲೂಕು ಘೋಷಣೆ ಮಾಡಿದೆ. ಅವುಗಳಿಗೆ ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿಯಾಗಲೀ, ಬಿಜೆಪಿಯ ಯಡಿಯೂರಪ್ಪ ಹಾಗೂ ಬಸವರಾಜು ಬೊಮ್ಮಾಯಿಯಾಗಲೀ ತಮ್ಮ ಆಡಳಿತದ ಅವಧಿಯಲ್ಲಿ ಹೊಸ ತಾಲ್ಲೂಕುಗಳಿಗೆ ಮೂಲ ಸೌಲಭ್ಯ ಒದಗಿಸುವಲ್ಲಿ ಮೀನಾಮೇಷ ಎಣಿಸುತ್ತಿದ್ದು, ಅಭಿವೃದ್ಧಿ ಮಾಡುವಲ್ಲಿ ಕಣಗಣಿಸುತ್ತಿದ್ದಾರೆ. ೨೦೨೩ಕ್ಕೆ ಕಾಂಗ್ರೆಸ್ ಬರಲಿದೆ. ಆಗ ನೂತನ ತಾಲ್ಲೂಕುಗಳಿಗೆ ಮೂಲ ಸೌಲಭ್ಯ ಒದಗಿಸುವ ಮೂಲಕ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಭರವಸೆ ನೀಡಿದರು.

ಬಿಜೆಪಿ ಕೆಟ್ಟ ಸರ್ಕಾರ: ರಾಜ್ಯದ ಇತಿಹಾಸದಲ್ಲೇ ಬಿಜೆಪಿಯಂಥ ಕೆಟ್ಟ ಸರ್ಕಾರವನ್ನು ಕಂಡಿಲ್ಲ. ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ಅಭಿವೃದ್ಧಿಗಾಗಿ ೧೬೫ ಭರವಸೆಗಳನ್ನು ಈಡೇರಿಸಿದ್ದೆ. ಆದರೆ, ಬಿಜೆಪಿ ಸರ್ಕಾರ ಅಭಿವೃದ್ಧಿಗೆ ಹೊತ್ತು ನೀಡುತ್ತಿಲ್ಲ. ಬದಲಿಗೆ ಕೋಮು ಗಲಭೆ ಸೃಷ್ಟಿಸುತ್ತಿದೆ. ಸಂಪ್ರದಾಯದ ಹೆಸರಿನಲ್ಲಿ ಜಾತಿ ಹೊಡೆಯ ಕೆಲಸವಾಗಬಾರದು. ಬಿಜೆಪಿ ಎಲ್ಲವನ್ನೂ ಮೀರಿದೆ. ಹೀಗಾಗಿ ಪೀಕ್ ಪ್ಯಾಕೇಟ್ ಮಾಡುವ ಬಿಜೆಪಿಗೆ ಮತದಾನ ಮಾಡಬಾರದು ಎಂದು ಸಲಹೆ ನೀಡಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಜಿ ಸಂಸದ ಆರ್.ಧ್ರುವನಾರಾಯಣ ಅವರು ಮಾತನಾಡಿ, ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ಜನರ ಕಲ್ಯಾಣಕ್ಕಾಗಿ ೨೦ ಅಂಶಗಳನ್ನು ತಂದರು. ಅವರನ್ನು ಬಿಟ್ಟರೆ ಮುಖ್ಯಮಂತ್ರಿಯಾಗಿ ೫ ವರ್ಷ ಅವಧಿ ಪೂರೈಸಿದ ಸಿದ್ದರಾಮ್ಮಯ್ಯ ಅವರು ಒಂದು ಕಪ್ಪು ಚುಕ್ಕಿಯೂ ಇಲ್ಲದೆ ಜನಪರವಾಗಿ ಬಿಗಿಯಾದ ಆಡಳಿತ ನಡೆಸಿ, ಹಲವು ಯೋಜನೆಗಳ ಜಾರಿಗೆ ತಂದು ಹಸಿವು ಮುಕ್ತ ರಾಜ್ಯವನ್ನಾಗಿ ಮಾಡಿದ್ದಾರೆ ಎಂದು ಹೇಳಿದರು.
ಸಮಾಜದಲ್ಲಿನ ಅಂಕು-ಡೊಂಕುಗಳನ್ನು ತಮ್ಮ ಕೀರ್ತನೆಗಳ ಮೂಲಕ ತಿದ್ದಿದ ಸಮಾಜ ಸುಧಾರಕ ಕನಕದಾಸರ ಹೆಸರಿನಲ್ಲಿ ಭವನ ನಿರ್ಮಿಸಿರುವುದು ಸಂತಸದ ವಿಚಾರ. ಆದರೆ, ಬಿಜೆಪಿ ಸರ್ಕಾರ ರಾಜ್ಯದಲ್ಲಿ ಜಾತಿ-ಜಾತಿಗಳ ನಡುವಿನ ಸಂಘರ್ಷ ಕೋಮು ಗಲಭೆಗೆ ಅವಕಾಶ ಮಾಡಿಕೊಡುತ್ತಿದೆ. ಸರಗೂರು ತಾಲ್ಲೂಕು ಕೇಂದ್ರವನ್ನಾಗಿ ಮಾಡಿದ ಕೀರ್ತಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ ಎಂದರು.
ಇದೇ ಸಂದರ್ಭ ನಿವೇಶನ ದಾನಿಗಳಾದ ಎಂ.ಎನ್.ಅನಂತಕೃಷ್ಣಮೂರ್ತಿ, ಎಂ.ಎಸ್.ಕೃಷ್ಣಪ್ಪ, ತಿಮ್ಮೇಗೌಡ, ಪುಟ್ಟಸ್ವಾಮೇಗೌಡ ಅವರನ್ನು ಸಿದ್ದರಾಮಯ್ಯ ಅವರನ್ನು ಸನ್ಮಾನಿಸಿದರು. ಖ್ಯಾತ ಜಾನಪದ ಗಾಯಕ ಅಮ್ಮ ರಾಮಚಂದ್ರ ಮತ್ತು ಮರಿಸ್ವಾಮಿ ಹಂಸ ಅವರ ತಂಡದಿಂದ ಜಾನಪದ ಗಾಯನ, ಪನ್ನಗ ವಿಜಯಕುಮಾರ್ ಮತ್ತು ತಂಡದವರಿಂದ ಭಜನಾ ಕಾರ್ಯಕ್ರಮ ನಡೆಯಿತು.
ಶಾಸಕ ಅನಿಲ್ ಚಿಕ್ಕಮಾದು, ಯತೀಂದ್ರ ಸಿದ್ದರಾಮಯ್ಯ, ಸಂಡೂರು ತುಕರಾಮ್, ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಮಾತನಾಡಿದರು. ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ, ಎಂ.ಕೆ.ಸೋಮಶೇಖರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜಂಟಿ ಕಾರ್ಯದರ್ಶಿ ಎಂ.ರಾಮಯ್ಯ, ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯಾಧ್ಯಕ್ಷ ಬಿ.ಸುಬ್ರಹ್ಮಣ್ಯ, ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಮೈಮುಲ್ ನಿರ್ದೇಶಕ ಕೆ.ಈರೇಗೌಡ, ಬಿ.ಮಟಕೆರೆ ಗ್ರಾಪಂ ಅಧ್ಯಕ್ಷೆ ರೂಪಬಾಯಿ, ಉಪಾಧ್ಯಕ್ಷ ದೇವದಾಸ್, ಜಿ.ಪಂ. ಮಾಜಿ ಅಧ್ಯಕ್ಷರಾದ ಎಂ.ಪಿ.ನಾಗರಾಜು, ಕೆ.ಮರೀಗೌಡ, ಪಿ.ರವಿ, ಕುರುಬರ ಸಂಘದ ಜಿಲ್ಲಾಧ್ಯಕ್ಷ ಶಿವಪ್ಪಕೋಟೆ, ತಾಲೂಕು ಅಧ್ಯಕ್ಷ ಎಂ.ಬಿ.ಆನಂದ್, ಎಂ.ಎನ್.ಅನಂತಕೃಷ್ಣಮೂರ್ತಿ, ಕಾಂಗ್ರೆಸ್ ಮುಖಂಡರಾದ ಎಂ.ಎನ್.ಅಣ್ಣಯ್ಯಸ್ವಾಮಿ, ಜಿ.ಕೃಷ್ಣ, ಎಂ.ಕೆ.ಹರಿದಾಸ್, ಗುಣಪಾಲ್, ಕೆಎಸ್‌ಆರ್‌ಟಿಸಿ ಬಿ.ಜವರೇಗೌಡ, ಸತೀಶ್‌ಗೌಡ, ಶಂಭುಲಿಂಗನಾಯಕ, ಎಸ್.ಎಸ್.ಪ್ರಭುಸ್ವಾಮಿ, ಎಂ.ಸಿ.ದೊಡ್ಡನಾಯಕ, ಎಂ.ಎಸ್.ದೇವರಾಜು, ಸಂತೋಷ್, ಎಂ.ಕೆ.ಕೃಷ್ಣಪ್ಪ, ಗುಡಿಗೌಡ ಎಂ.ಎನ್.ಕುಮಾರ್, ದೇವರಾಜು, ಶೇಖರಪ್ಪ, ಎಂ.ಸಿ.ಬೀರೇಗೌಡ, ಶಿವಮೂರ್ತಿ, ಎಂ.ಆರ್.ಆನಂದ್, ಕರಿಗೌಡ ಸೇರಿದಂತೆ ಇನ್ನಿತರರು ಹಾಜರಿದ್ದರು.