ಗುಂಡ್ಲುಪೇಟೆ: ಬಿಜೆಪಿ ಕೇವಲ ಜಾಹೀರಾತು(ಪ್ರಚಾರ) ಪಕ್ಷವೇ ಹೊರತು ಜನರ ಹಿತಕಾಯುವ ಪಕ್ಷವಲ್ಲ. ಪ್ರತಿದಿನ ಬೆಲೆ ಏರಿಕೆ, ಕೋಮುವಾದ ಸೃಷ್ಟಿಸಿ ಧರ್ಮ ಧರ್ಮದ ನಡುವೆ ಕಂದಕ ಸೃಷ್ಟಿಸಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಲಕ್ಕೂರು ಆರ್.ಗಿರೀಶ್ ಆಕ್ರೋಶ ಹಾಕಿದರು.

ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ರಾಜಕೀಯ ಲಾಭಕ್ಕಾಗಿ ಬಿಜೆಪಿಯವರು ಪೆಬ್ರವರಿಯಲ್ಲಿ ಹಿಜಾಬ್ ವಿವಾದ, ಮಾರ್ಚ್‍ನಲ್ಲಿ ಭಗವದ್ಗೀತೆ, ಮುಸ್ಲಿಂ ವ್ಯಾಪಾರದ ಸಂಘರ್ಷ, ಟಿಪ್ಪು ಸುಲ್ತಾನ್‍ನ ಪಠ್ಯ ಪುಸ್ತಕದಿಂದ ತೆಗೆದು ಹಾಕುವ ವಿಚಾರ, ಹಲಾಲ್ ಸೇರಿದಂತೆ ಹಿಂದುತ್ವದ ಮುಖವಾಡ ಧರಿಸಿ ಹಿಂದೂಗಳನ್ನು ಪ್ರಚೋದಿಸಿ, ರಾಜ್ಯದ ಅಭಿವೃದ್ಧಿ ಕಡೆ ಗಮನ ನೀಡದೆ ಕಾಲಹರಣ ಮಾಡುತ್ತಿದೆ ಎಂದು ಕುಟುಕಿದರು.

ಪ್ರತಿದಿನ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಗತ್ಯ ವಸ್ತುಗಳಾದ ಅಡುಗೆ ಎಣ್ಣೆ 225 ಲೀ, ಗ್ಯಾಸ್ 950 ರೂ., ಪೆಟ್ರೋಲ್ 107, ಡಿಸೇಲ್ 90 ರೂ. ಗಡಿ ದಾಟಿಸಿ ಜನರನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸುತ್ತಿದೆ. ಜೊತೆಗೆ ದೇಶದಲ್ಲಿ ಬಡತನ ಸಮಸ್ಯೆ ತಾಂಡವವಾಡುತ್ತಿದ್ದು, ಕೋಟ್ಯಾಂತರ ಮಂದಿ ನಿರುದ್ಯೋಗಿಗಳಾಗಿದ್ದಾರೆ. ಜನರು ಅಪೌಷ್ಟಿಕತೆಯಿಂದ ಬಳಲುತ್ತಿದ್ದರು ಸಹ ಬಿಜೆಪಿ ಶಾಸಕ, ಸಚಿವರು 40% ಕಮಿಷನ್ ಪಡೆದು ಸಾರ್ವಜನಿಕರ ಹಣ ಲೂಟಿ ಮಾಡುತ್ತಿದ್ದಾರೆ. ಆದ್ದರಿಂದ ಸರ್ಕಾರವನ್ನು ರಾಜ್ಯಪಾಲರು ರದ್ದುಪಡಿಸಬೇಕೆಂದು ಒತ್ತಾಯಿಸಿದರು.

ವರದಿ: ಬಸವರಾಜು ಎಸ್.ಹಂಗಳ