ಗುಂಡ್ಲುಪೇಟೆ: ಬಂಡೀಪರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಹನ್ನೆರಡು ವಲಯದಲ್ಲಿ ಹುಲ್ಲುಗಾವಲು ಅಭಿವೃದ್ದಿ ಪಡಿಸಲು 1.90 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಬಿದಿರು ಬಿತ್ತನೆ ಕಾರ್ಯ ನಡೆಯುತ್ತಿದೆ.
ಹುಲಿಸಂರಕ್ಷಿತ ಪ್ರದೇಶವಾಗಿರುವ ಬಂಡೀಪುರ ಅರಣ್ಯದಲ್ಲಿ ಹಸಿರು ಮೇವಿಗೆ ಆದ್ಯತೆ ನೀಡಿದ್ದು, ಈಗಾಗಲೇ ಅರಣ್ಯಕ್ಕೆ ಮಾರಕವಾಗಿ ಲಂಟನಾ ಬೆಳೆಯುತ್ತಿರುವುದರಿಂದ ಅದರ ತೆಕ್ಕೆಗೆ ಸಿಲುಕಿ ಕುರುಚಲು ಕಾಡು, ಹುಲ್ಲು ನಾಶವಾಗುತ್ತಿದೆ, ಇದರಿಂದ ಸಸ್ಯಹಾರಿ ಪ್ರಾಣಿಗಳಿಗೆ ಮೇವಿಗೆ ಸಮಸ್ಯೆಯಾಗುತ್ತಿದೆ. ಇದನ್ನು ತಪ್ಪಿಸಬೇಕಾದರೆ ಹೆಚ್ಚಿನ ಪ್ರಮಾಣದಲ್ಲಿ ಬಿದಿರು ಬೆಳೆಸುವುದು ಅಗತ್ಯವಾಗಿದೆ. ಇದರ ಜತೆಗೆ ಲಂಟನಾ ತೆರವುಗೊಳಿಸಿರುವ ಪ್ರದೇಶದಲ್ಲಿ ಬಿದಿರು ಬೆಳೆಸಲು ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
ಯೋಜನೆ ಪ್ರಕಾರ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಬಂಡೀಪುರದಲ್ಲಿ ಇಪ್ಪತೈದು ಕೆಜಿ ಬಿದಿರು ಬೀಜವನ್ನು ಐದು ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿದರೆ, ಗೋಪಾಲಸ್ವಾಮಿ ಬೆಟ್ಟದ ಮೂರು ಹೆಕ್ಟೇರ್ ಪ್ರದೇಶದಲ್ಲಿ ಹದಿನೈದು ಕೆಜಿ, ಮೂಲೆಹೊಳೆಯ ನಾಲ್ಕು ಹೆಕ್ಟೇರ್ ನಲ್ಲಿ ಇಪ್ಪತ್ತು ಕೆಜಿ, ಕುಂದುಕೆರೆಯ ನಾಲ್ಕು ಎಕರೆಯಲ್ಲಿ ಇಪ್ಪತ್ತು ಕೆಜಿ, ಮದ್ದೂರು ನಾಲ್ಕು ಹೆಕ್ಟೇರ್ ನಲ್ಲಿ ಇಪ್ಪತ್ತು ಕೆಜಿ, ಓಂಕಾರ ವಲಯದ ಎರಡು ಹೆಕ್ಟೇರ್ ಪ್ರದೇಶದಲ್ಲಿ ಹತ್ತು ಕೆಜಿ, ಹೆಡಿಯಾಲದ ಎರಡು ಹೆಕ್ಟೇರ್ ಪ್ರದೇಶದಲ್ಲಿ ಎರಡು ಕೆಜಿ, ಎ.ಎಂ.ಗುಡಿಯ ಮೂರು ಹೆಕ್ಟೇರ್ ಪ್ರದೇಶದಲ್ಲಿ ಹದಿನೈದು ಕೆಜಿಯನ್ನು ಬಿತ್ತನೆ ಮಾಡಲಾಗುತ್ತಿದೆ.
ನುಗುವಿನ ಎರಡು ಹೆಕ್ಟೇರ್ ನಲ್ಲಿ ಹತ್ತು ಕೆಜಿ, ಗುಂಡ್ರೆ ಮೂರು ಹೆಕ್ಟೇರ್ ಪ್ರದೇಶದಲ್ಲಿ ಹದಿನೈದು ಕೆಜಿ, ಎನ್ ಬೇಗೂರುನ ಮೂರು ಹೆಕ್ಟೇರ್ ಪ್ರದೇಶಕ್ಕೆ ಹದಿನೈದು ಕೆಜಿ, ಮೊಳೆಯೂರು ಮೂರು ಹೆಕ್ಟೇರ್ ನಲ್ಲಿ ಹದಿನೈದು ಕೆಜಿ ಹಾಗೂ ಇತರೆ ಲಂಟನಾ ಕಳೆಗಳನ್ನು ನಿರ್ಮೂಲನ ಮಾಡಿರುವ ಪ್ರದೇಶಗಳಲ್ಲಿ ಹಳ್ಳ ಕೊಳ್ಳಗಳಲ್ಲಿ ಹಿನ್ನೀರಿನ ಪ್ರದೇಶಗಳಲ್ಲಿ ಹಾಗೂ ವಿವಿಧ ಸ್ಥಳಗಳ ಸುಮಾರು ಮೂವತ್ತೆಂಟು ಹೆಕ್ಟೇರ್ ಪ್ರದೇಶದಲ್ಲಿ ನೂರತೊಂಬತ್ತು ಕೆಜಿ ಬಿದಿರು ಬೀಜವನ್ನು ಬಿತ್ತನೆ ಮಾಡಲಾಗುತ್ತಿದ್ದು, ಪ್ರತಿ ಎಕರೆ ಪ್ರದೇಶದಲ್ಲಿ ಬಿದಿರು ಬಿತ್ತನೆ ಮಾಡಿ ಪೋಷಿಸಿ ಬೆಳಸಲು ಅರಣ್ಯ ಇಲಾಖೆಯಿಂದ 5ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಗುಂಡ್ಲುಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿಗಳಾದ ಪರಮೇಶ್ ತಿಳಿಸಿದ್ದಾರೆ