ಚಾಮರಾಜನಗರ: ಜಗತ್ತಿನ ಸಕಲ ಜೀವರಾಶಿಗಳಿಗೂ ಒಳಿತನ್ನು ಬಯಸಿದವರು ಭಗೀರಥ ಮಹರ್ಷಿಗಳು ಎಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.
ನಗರದ ಪೇಟೆ ಪ್ರೈಮರಿ ಶಾಲಾ ಅವರಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಭಗೀರಥ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭಗೀರಥರು ತಮ್ಮ ಶ್ರೇಷ್ಠ ಪ್ರಯತ್ನದ ಮೂಲಕ ಪೂರ್ವಜರಿಗೆ ಸದ್ಗತಿ ದೊರಕಿಸಲು ಕಠಿಣ ಪರಿಶ್ರಮದಿಂದ ಗಂಗೆಯನ್ನೇ ಭೂಮಿಗೆ ಕರೆತಂದ ಮಹಾ ತಪಸ್ವಿಯಾಗಿದ್ದಾರೆ. ಬರಗಾಲದಿಂದ ತತ್ತರಿಸಿದ್ದ ಜನರಿಗೆ ನೀರನ್ನು ದೊರಕಿಸಿ ನಾಡನ್ನು ಸಮೃದ್ಧಗೊಳಿಸಿದರು. ಭಗೀರಥರ ಆದರ್ಶ ಸದ್ಗುಣಗಳು ಎಲ್ಲರಿಗೂ ಮಾದರಿಯಾಗಿವೆ ಎಂದರು.
ಸಮುದಾಯದ ಅಭಿವೃದ್ಧಿಗಾಗಿ ಸರ್ಕಾರ ಸಾಕಷ್ಟು ಸೌಲಭ್ಯ, ಸವಲತ್ತು ನೀಡಿದ್ದರೂ ಸಹ ಸಮಾಜ ನಾಗರೀಕತೆಯಿಂದ ಬಹುದೂರ ಉಳಿದಿದೆ. ಮೂಢನಂಬಿಕೆ, ಕಂದಾಚಾರಗಳು ಸಮುದಾಯಕ್ಕೆ ಕಳಂಕವಾಗಿವೆ. ಬಾಲ್ಯವಿವಾಹವನ್ನು ತಡೆಗಟ್ಟಿ ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣ ನೀಡಬೇಕು. ಎಲ್ಲಾ ಕ್ಷೇತ್ರಗಳಲ್ಲೂ ಉತ್ತಮ ಅವಕಾಶಗಳನ್ನು ನೀಡಬೇಕಾಗಿದೆ ಎಂದು ತಿಳಿಸಿದರು.
ಮಹರ್ಷಿ ಭಗೀರಥರ ಜೀವನ ಸಾಧನೆ, ವಿಚಾರಧಾರೆಗಳನ್ನು ಪಸರಿಸುವ ಸದುದ್ದೇಶದೊಂದಿಗೆ ಜಯಂತಿ ಕಾರ್ಯಕ್ರಮವನ್ನು ೨೦೧೭-೧೮ರಿಂದ ಹಮ್ಮಿಕೊಳ್ಳಲಾಗುತ್ತಿದೆ. ಜಿಲ್ಲಾಕೇಂದ್ರದಲ್ಲಿ ಉಪ್ಪಾರರ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರ ೪ ಕೋಟಿ ರೂ. ಗಳ ಅನುದಾನ ನೀಡಿದೆ. ಮುಂದಿನ ೪-೫ ತಿಂಗಳಲ್ಲಿ ಸಮುದಾಯ ಭವನ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ವಸತಿ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ನೀಡಿರುವ ಸಂದೇಶವನ್ನು ವಾಚನ ಮಾಡಲಾಯಿತು.
ಸಮಾಜವನ್ನು ಸಂಸ್ಕೃತಿ ಸಂಪನ್ನವಾಗಿ ರೂಪಿಸುವುದರಲ್ಲಿ ಋಷಿಮುನಿಗಳ, ಮಹರ್ಷಿಗಳ ಕೊಡುಗೆ ಅವಿಸ್ಮರಣೀಯವಾಗಿದ್ದು, ಇವರಲ್ಲಿ ಶ್ರೀ ಭಗೀರಥ ಮಹರ್ಷಿಗಳು ಅಗ್ರಗಣ್ಯ ಮತ್ತು ಶ್ರೇಷ್ಠರೆನಿಸಿದ್ದಾರೆ. ಯಾರಾದರೂ ನಿರಂತರವಾಗಿ ಯಾವುದಾದರೂ ಕೆಲಸಕ್ಕೆ ಪ್ರಯತ್ನಪಟ್ಟರೆ ಅದನ್ನು ಭಗೀರಥ ಪ್ರಯತ್ನ ಎಂದು ಕರೆಯುವ ವಾಡಿಕೆ ಇಂದಿಗೂ ಇದೆ. ಯಶಸ್ಸು ಎಂಬುದು ಸುಲಭವಾಗಿ ಸಿಗುವುದಿಲ್ಲ. ಶ್ರದ್ಧೆ, ಶ್ರಮಗಳ ಜೊತೆಗೆ ಪ್ರಯತ್ನ ಇರಲೇಬೇಕು ಎಂದು ಉಸ್ತುವಾರಿ ಸಚಿವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ಉಪ್ಪಾರ ಸಮುದಾಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾವಂತರಾಗುತ್ತಿರುವುದರ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಪಡೆಯುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಸಮುದಾಯವು ಇಷ್ಟೆಲ್ಲಾ ಪ್ರಗತಿ ಸಾಧಿಸುತ್ತಿರುವುದು ಒಂದೆಡೆಯಾದರೇ ಬಾಲ್ಯವಿವಾಹ ಪಿಡುಗು ಇನ್ನೂ ಸಂಪೂರ್ಣವಾಗಿ ನಿರ್ಮೂಲನೆಯಾಗದಿರುವುದು ವಿಷಾಧಕರ ಸಂಗತಿಯಾಗಿದೆ. ಪ್ರತಿಯೊಬ್ಬ ಪೋಷಕರು ತಮ್ಮ ಜವಾಬ್ದಾರಿಗಳನ್ನು ಅರಿತು ಹೆಣ್ಣುಮಕ್ಕಳಿಗೆ ಕನಿಷ್ಠ ಪದವಿ ಹಂತದವರೆಗೆ ಶಿಕ್ಷಣ ಕೊಡಿಸಲು ಮುಂದಾಗಬೇಕು. ಹೆಣ್ಣುಮಕ್ಕಳ ಶಿಕ್ಷಣಕ್ಕೆ ಅಗತ್ಯವಿರುವ ಎಲ್ಲಾ ನೆರವನ್ನು ಸರ್ಕಾರ ನೀಡುತ್ತಾ ಬಂದಿದೆ. ಇದರ ಸದ್ಭಳಕೆ ಮಾಡಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ನಗರದಲ್ಲಿ ನಿರ್ಮಾಣವಾಗುತ್ತಿರುವ ಉಪ್ಪಾರ ಸಮುದಾಯ ಭವನದ ಕಾಮಗಾರಿಯನ್ನು ಮತ್ತಷ್ಟು ಚುರುಕುಗೊಳಿಸಿ ಶೀಘ್ರದಲ್ಲಿಯೇ ಲೋಕಾರ್ಪಣೆಗೊಳಿಸಲು ಕ್ರಮ ವಹಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಸಂದೇಶದಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಶ್ರೀ ಭಗೀರಥ ಪೀಠಾಧ್ಯಕ್ಷರಾದ ಡಾ. ಪುರುಷೋತ್ತಮಾನಂದಪುರಿ ಸ್ವಾಮೀಜೀಯವರು ಮಾತನಾಡಿ ವಿವಿಧತೆಯಲ್ಲಿ ಏಕತೆ ಹೊಂದಿರುವ ಭಾರತ ಹಲವು ಸಂಸ್ಕೃತಿಗಳ ತವರೂರಾಗಿದೆ. ದೇಶದ ಉನ್ನತೀಗಾಗಿ ಅನೇಕ ಸಂತರು, ದಾರ್ಶನಿಕರು ಕೊಡುಗೆಗಳನ್ನು ನೀಡಿದ್ದಾರೆ. ಅವರಿಂದ ಸ್ಪೂರ್ತಿಗೊಂಡ ಪ್ರತಿಯೊಬ್ಬರು ಜೀವನದಲ್ಲಿ ಸಾಧನೆ ಮಾಡಬೇಕು. ಸಾಧನೆಗೆ ಭಗೀರಥರ ಪ್ರಯತ್ನ ಬೇಕೇಬೇಕು. ಭಗೀರಥರ ಇಚ್ಛಾಶಕ್ತಿ, ಆತ್ಮಬಲ, ಗುರಿ ಮುಟ್ಟುವ ಛಲ ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿದೆ ಎಂದರು.
ಅನಕ್ಷರತೆ, ಬಡತನ, ಮೌಢ್ಯತೆ ಇಂದಿನ ಸಮುದಾಯದಲ್ಲಿ ಹಾಸುಹೊಕ್ಕಾಗಿದ್ದು, ಸಮಾಜದ ಪ್ರಗತಿಗೆ ಕಂಠಕವಾಗಿದೆ. ಹೆಣ್ಣುಮಕ್ಕಳಿಗೆ ನಿಗದಿತ ವಯಸ್ಸಿಗೆ ಮೊದಲೇ ಬಾಲ್ಯವಿವಾಹ ಮಾಡಿ ಪೋಷಕರು ಅತ್ಮವಂಚನೆ ಮಾಡಿಕೊಳ್ಳಬಾರದು. ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವನ್ನೂ ನೀಡಿ ಮುಖ್ಯವಾಹಿನಿ ತರಬೇಕಾಗಿದೆ ಎಂದು ಸ್ವಾಮೀಜೀಯವರು ಹೇಳಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶಾಂತಮೂರ್ತಿ ಕುಲಗಾಣ ಅವರು ಮಾತನಾಡಿ ನಮ್ಮ ಪೂರ್ವಜರನ್ನು ಮರೆತು ಮುಂದಿನ ಪೀಳಿಗೆ ಬಗ್ಗೆಯೇ ಯೋಚಿಸುತ್ತಿರುವ ಇಂದಿನ ಸಮಾಜ ಪೂರ್ವಜರ ಮಾರ್ಗದರ್ಶನವನ್ನು ಮಕ್ಕಳಿಗೆ ನೀಡಬೇಕು. ಸರ್ಕಾರ ನೀಡುವ ಸವಲತ್ತುಗಳನ್ನು ಬಳಸಿಕೊಂಡು ಉತ್ತಮ ಶಿಕ್ಷಣ ಪಡೆಯಬೇಕು ಎಂದರು.
ತಿಪಟೂರಿನ ನಿವೃತ್ತ ತಹಶೀಲ್ದಾರ್ ಎನ್. ಚನ್ನಬಸಪ್ಪ ಅವರು ಶ್ರೀ ಭಗೀರಥರ ಜೀವನ ಸಾಧನೆ ಕುರಿತು ಮುಖ್ಯ ಭಾಷಣ ಮಾಡಿದರು.
ನಗರಸಭೆ ಅಧ್ಯಕ್ಷರಾದ ಆಶಾನಟರಾಜು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ. ಶಿವಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಗುಡೂರು ಭೀಮಸೇನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಚನ್ನಪ್ಪ, ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷರಾದ ಜಯಕುಮಾರ್, ತಾಲೂಕು ಅಧ್ಯಕ್ಷರಾದ ಬೂದಿತಿಟ್ಟು ಲಿಂಗರಾಜು, ಸಮಾಜದ ಮುಖಂಡರಾದ ಹನುಮಂತಶೆಟ್ಟಿ, ಸಿ. ಮಹಾದೇವಶೆಟ್ಟಿ, ನೂರೊಂದುಶೆಟ್ಟಿ, ಮಂಗಲ ಶಿವಕುಮಾರ್, ಚಿಕ್ಕಮಹದೇವು, ಜಿ.ಎಂ.ಗಾಡ್ಕರ್, ಗಡಿಭಾಗದ ಮುಖ್ಯಸ್ಥರಾದ ಮಂಗಲಮಂಜುನಾಥ, ಸಾಹಿತಿ ಮೈಲಾರಪ್ಪ, ವೆಂಕೋಬ, ಕೃಷ್ಣಶೆಟ್ಟಿ, ಹೊಂಗನೂರು ರಂಗಸ್ವಾಮಿ, ಜಿಲ್ಲಾ ಯುವ ಅಧ್ಯಕ್ಷ ಜಯಕುಮಾರ್ ಇತರರು ಕಾರ್ಯಕ್ರಮದಲ್ಲಿ ಇದ್ದರು.
ಕಾರ್ಯಕ್ರಮ ಆರಂಭದಲ್ಲಿ ಅಮಚವಾಡಿಯ ಮಂಜುನಾಥಶೆಟ್ಟಿ ಮತ್ತು ತಂಡದವರಿಂದ ಎರ್ಪಡಿಸಲಾಗಿದ್ದ ಗೀತ ಗಾಯನ ಗಮನ ಸೆಳೆಯಿತು.