ಚಾಮರಾಜನಗರ: ಜಿಲ್ಲಾಡಳಿತ ಹಾಗೂ ಎಲ್ಲರ ಸಹಕಾರದೊಂದಿಗೆ ಶ್ರೀ ಭಗೀರಥ ಜಯಂತಿಯನ್ನು ಮೇ ೮ರಂದು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಇಂದು ರ್ಪೂಭಾವಿ ಸಭೆ ನಡೆಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಹಾಗೂ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರ ಸಮ್ಮುಖದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಶ್ರೀ ಭಗೀರಥ ಜಯಂತಿಯನ್ನು ಜಿಲ್ಲಾ ಕೇಂದ್ರದಲ್ಲಿ ಆಚರಿಸುವ ಸಂಬಂಧ ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ಹಾಜರಿದ್ದ ಸಮುದಾಯ, ಸಂಘಟನೆಗಳ ಮುಖಂಡರು ಭಗೀರಥ ಜಯಂತಿ ಆಚರಣೆ ಸಂಬಂಧ ಸಲಹೆ ನೀಡಿದರು. ಜಯಂತಿ ಆಚರಣೆ ಸಂಬಂಧ ರಚಿಸಲಾಗಿರುವ ವಿವಿಧ ಸಮಿತಿಗಳಿಗೆ ಸಮುದಾಯ ಸಂಘಟನೆಗಳ ಪ್ರತಿನಿಧಿಗಳನ್ನು ಸೇರ್ಪಡೆ ಮಾಡಿಕೊಳ್ಳಬೇಕು. ಕಾರ್ಯಕ್ರಮಕ್ಕೆ ಎಲ್ಲರ ಸಹಕಾರವಿದೆ. ಹೆಚ್ಚಿನ ಜನರು ಭಾಗವಹಿಸುವುದರಿಂದ ಎಲ್ಲಾ ಅಗತ್ಯ ವ್ಯವಸ್ಥೆಗಳೊಂದಿಗೆ ಅದ್ದೂರಿಯಾಗಿ ಕಾರ್ಯಕ್ರಮ ಆಯೋಜನೆಯಾಗಬೇಕು. ಸಮುದಾಯದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಬೇಕು. ಜಿಲ್ಲಾ ಕೇಂದ್ರದಲ್ಲಿ ನಡೆಯುವ ಮೇ ೮ರ ಕಾರ್ಯಕ್ರಮಕ್ಕೆ ತಾಲೂಕುಗಳಿಂದಲೂ ಹೆಚ್ಚಿನ ಜನರು ಬರಲು ಅನುವಾಗುವಂತೆ ಇತರೆ ತಾಲೂಕು ಕೇಂದ್ರಗಳಲ್ಲಿ ಮೇ ೮ರ ಬದಲು ಬೇರೆ ದಿನಗಳಲ್ಲಿ ಜಯಂತಿ ಆಚರಣೆ ಮಾಡುವುದು ಒಳಿತು ಎಂಬುದು ಸೇರಿದಂತೆ ಇತರೆ ಸಲಹೆಗಳನ್ನು ನೀಡಿದರು.
ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಮಾತನಾಡಿ ಕಾರ್ಯಕ್ರಮ ನಡೆಯಲು ಪೂರಕವಾಗಿರುವ ಎಲ್ಲಾ ಅಗತ್ಯ ಕ್ರಮಗಳಿಗೆ ಮುಂದಾಗಬೇಕಿದೆ ಎಂದರು.
ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಮಾತನಾಡಿ ಕಾರ್ಯಕ್ರಮ ಆಯೋಜನೆಗೆ ಅಗತ್ಯ ಕ್ರಮ ವಹಿಸಲಾಗುವುದು. ಕಾರ್ಯಕ್ರಮ ಏರ್ಪಾಡು ಸಂಬಂಧ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಯಶಸ್ವಿಯಾಗಿ ಕಾರ್ಯಕ್ರಮ ನಡೆಯಲು ಎಲ್ಲರ ಸಹಕಾರ ಸಲಹೆಯನ್ನು ಪರಿಗಣಿಸಲಾಗುವುದು ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರ್ ರಾಜ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಗೂಡೂರು ಭೀಮಸೇನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಹೆಚ್.ಚೆನ್ನಪ್ಪ, ಮುಖಂಡರಾದ ಸಿ.ಎಂ. ಮಹದೇವಶೆಟ್ಟಿ, ಹನುಮಂತಶೆಟ್ಟಿ, ಚಿಕ್ಕಮಹದೇವು, ಜಯಕುಮಾರ್, ಮಂಗಲ ಶಿವಕುಮಾರ್, ಜಿ.ಎಂ. ಗಾಡ್ಕರ್, ಚಾ.ಗು ನಾಗರಾಜು, ಕೆ.ಎಂ. ನಾಗರಾಜು, ಜೆ. ಯೋಗೇಶ್, ಮಾರ್ಕೆಟ್ ಗಿರೀಶ್, ಚಾ.ರಂ. ಶ್ರೀನಿವಾಸಗೌಡ, ಜಿ. ಬಂಗಾರು, ಕೆ. ನಾರಾಯಣ, ಸಿದ್ದಶೆಟ್ಟಿ, ಬಿ. ಸ್ವಾಮಿ, ಸಿ.ಎಸ್. ನಾಗರಾಜು, ಮಹೇಶ್ ಉಪ್ಪಾರ್, ವೈ.ಕೆ.ಮೋಳೆ ಮಾದೇಶ್, ನಾಗರಾಜು, ಜವರಶೆಟ್ಟಿ, ರಾಮಸಮುದ್ರ ನಾಗರಾಜು, ಗಡಿ ಯಜಮಾನರಾದ ಜಯಸ್ವಾಮಿ, ಕೃಷ್ಣ, ಇತರೆ ಮುಖಂಡರು, ಯಜಮಾನರು, ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
