ಮೈಸೂರು: ಮೈಸೂರು ನಗರದ ಬಹುತೇಕ ಬಡಾವಣೆಗಳಲ್ಲಿರುವ ಬೀದಿ ನಾಯಿಗಳಿಗೆ ಪುಷ್ಕಳ ಬೋಜನ ಸವಿಯುವ ಅವಕಾಶವನ್ನು ಡಿಕೆ ಶಿವಕುಮಾರ್ ಅಭಿಮಾನಿ ಬಳಗವು ಮಾಡಿಕೊಟ್ಟಿದೆ.
ಪ್ರತಿಯೊಂದು ನಾಯಿಗೂ ಬಾಳೆಲೆಯಲ್ಲಿ ಬೋಜನವನ್ನು ಬಡಿಸುವ ಮೂಲಕ ಹೊಟ್ಟೆ ತುಂಬಾ ತಿನ್ನಲು ಅವಕಾಶ ಮಾಡಿಕೊಡಲಾಯಿತು. ಈಗಾಗಲೇ ಬೀದಿ ನಾಯಿಗಳಿಗೆ ಹಲವು ಸಂಘ ಸಂಸ್ಥೆಗಳು ಬಿಸ್ಕೆಟ್ ಸೇರಿದಂತೆ ಇತರೆ ಆಹಾರಗಳನ್ನು ಹಾಕುತ್ತಿದ್ದಾರೆ. ಆದರೆ ಬಾಳೆಲೆಯಲ್ಲಿ ಆಹಾರ ಬಡಿಸಿದ್ದು ಮಾತ್ರ ವಿಶೇಷ ವಾಗಿದೆ.
ಇಷ್ಟಕ್ಕೂ ಬೀದಿನಾಯಿಗಳಿಗೆ ಇಷ್ಟೊಂದು ಭರ್ಜರಿ ಊಟ ನೀಡಿದ್ದೇಕೆ ಎಂಬ ಪ್ರಶ್ನೆ ಕಾಡಬಹುದು. ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಇವತ್ತು ಕೆಪಿಸಿಸಿ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಹಿರಿಯ ಮುಖಂಡರಾದ ಡಿ.ಕೆ. ಶಿವಕುಮಾರ್ ಅವರ ಹುಟ್ಟುಹಬ್ಬದ ದಿನವಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಅವರು ತಮ್ಮ ಅಭಿಮಾನಿಗಳು ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರಿಗೆ ಹುಟ್ಟು ಹಬ್ಬ ಆಚರಣೆ ಮಾಡದಂತೆ ಆದೇಶ ನೀಡಿದ್ದಾರೆ. ಹೀಗಾಗಿ ಡಿಕೆಶಿ ಅಭಿಮಾನಿ ಬಳಗವು ನಗರದ ವಸ್ತು ಪ್ರದರ್ಶನ ಮೈದಾನ, ಮಹಾರಾಜ ಮೈದಾನ, ಓವಲ್ ಮೈದಾನ ಸೇರಿದಂತೆ ವಿವಿಧೆಡೆ ಇರುವ ಸುಮಾರು ಇನ್ನೂರಕ್ಕೂ ಹೆಚ್ಚು ಬೀದಿ ನಾಯಿಗಳಿಗೆ ಹಾಲು ಅನ್ನದ ಆಹಾರ ನೀಡಲಾಯಿತು.
ಈ ವೇಳೆ ಕಾಂಗ್ರೆಸ್ ಮುಖಂಡ ಜಿ.ಶ್ರೀನಾಥ್ ಬಾಬು ಮಾತನಾಡಿ ವಿದ್ಯಾರ್ಥಿ ಮುಖಂಡನಾಗಿ ಬೆಳೆದು ಬಂದ ಕೆಪಿಸಿಸಿ ಅಧ್ಯಕ್ಷರಾದ ಡಿಕೆ.ಶಿವಕುಮಾರ್ ಅವರು ಜನಸಾಮನ್ಯರಿಗೆ ಹತ್ತಿರವಾಗಿ ಕಷ್ಟಸುಖಗಳಲ್ಲಿ ಭಾಗಿಯಾಗಿ ಮಾದರಿ ರಾಜಕಾರಣಿಯಾಗಿದ್ದಾರೆ. ಕೋವಿಡ್ ತಡೆಗಟ್ಟಲು ಲಾಕ್ ಡೌನ್ ಹಿನ್ನಲೆಯಲ್ಲಿ ಮಾನವೀಯತೆ ದೃಷ್ಟಿಯಿಂದ ಹುಟ್ಟುಹಬ್ಬ ಆಚರಿಸಬಾರದು ಎಂದು ಕಾರ್ಯಕರ್ತರಿಗೆ ಅಭಿಮಾನಿಗಳಿಗೆ ಮನವಿ ಮಾಡಿದ್ದರು. ಅದರಂತೆಯೇ ಅವರ ಹುಟ್ಟುಹಬ್ಬವನ್ನು ದುಂದುವೆಚ್ಚ ಮಾಡದೆ ನಮ್ಮ ಸುತ್ತಮುತ್ತ ಜೀವಿಸುವ ಮೂಕಪ್ರಾಣಿ ಪಕ್ಷಿಗಳಿಗೆ ಆಹಾರ ನೀಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿರುವುದಾಗಿ ಹೇಳಿದರು.
ಡಿ ಕೆ ಶಿವಕುಮಾರ್ ಅಭಿಮಾನಿ ಬಳಗದ ಎಸ್.ಎನ್.ರಾಜೇಶ್, ಜಿ. ರಾಘವೇಂದ್ರ, ಹರೀಶ್ ನಾಯ್ಡು, ಚೇತನ್ ಕಾಂತರಾಜು ಮೊದಲಾದವರು ಇದ್ದರು.