ಕ್ಯಾನ್ಸರ್ ಯಾವುದೇ ಮುನ್ಸೂಚನೆಯಿಲ್ಲದೆ ಕಾಣಿಸಿಕೊಳ್ಳಬಹುದು. ಅನಿರೀಕ್ಷಿತವಾಗಿ ಮತ್ತು ಯಾವುದೇ ಸ್ಪಷ್ಟ ಕಾರಣವಿಲ್ಲದೆಯೂ ಕಾಣಿಸಿಕೊಳ್ಳಬಹುದು. ಬಹಳಷ್ಟು ಜನರು ಇದು “ಬೇರೆಯವರಿಗೆ” ಬರುವ ಕಾಯಿಲೆ ಎಂದೋ ಅಥವಾ ಕೇವಲ ಅನುವಂಶಿಕ ಕಾರಣಗಳಿಂದ ಬರುತ್ತದೆ ಎಂದೋ ಭಾವಿಸುತ್ತಾರೆ. ಆದರೆ ವಾಸ್ತವವೇ ಬೇರೆ. ಕ್ಯಾನ್ಸರ್ ತನ್ನ ಭೀಕರ ರೂಪವನ್ನು ತೋರಿಸುವ ಮೊದಲು, ದೇಹವು ಹಲವಾರು ವರ್ಷಗಳ ಕಾಲ ಗುಪ್ತವಾಗಿ ತೊಂದರೆಯನ್ನು ಅನುಭವಿಸುತ್ತಿರುತ್ತದೆ. ಈ ಹಾನಿಯು ಜನರು “ಸಾಮಾನ್ಯ” ಎಂದು ಭಾವಿಸುವ ಅಭ್ಯಾಸಗಳಿಂದ ಉಂಟಾಗುತ್ತದೆ. ಇವುಗಳಲ್ಲಿ ಬೀಡಿ ಸೇದುವುದು, ಪಾನ್ ಜೊತೆಗೆ ಗುಟ್ಕಾ ಅಗಿಯುವುದು ಮತ್ತು ಮದ್ಯಪಾನ ಮಾಡುವುದು ಸೇರಿವೆ. ಇವೆಲ್ಲವನ್ನೂ ಸಮಾಜದಲ್ಲಿ ಸಾಮಾನ್ಯ ಎಂಬಂತೆ ನೋಡಲಾಗುತ್ತದೆ. ಇವು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುವವರೆಗೆ ಹಾನಿಕಾರಕವಲ್ಲ ಎಂದೇ ಪರಿಗಣಿಸಲ್ಪಡುತ್ತವೆ.
ಈ ಅಭ್ಯಾಸಗಳಿಂದ ಉಂಟಾಗುವ ಅಪಾಯವು ಮೊದಲ ಬಳಕೆಯಲ್ಲೇ ಕಾಣಿಸಿಕೊಳ್ಳುವುದಿಲ್ಲ, ಬದಲಿಗೆ ತಿಂಗಳುಗಳು ಅಥವಾ ವರ್ಷಗಳ ಕಾಲ ಪುನರಾವರ್ತಿತ ಬಳಕೆಯ ನಂತರ ಗೋಚರಿಸುತ್ತದೆ. ಆದರೆ, ಆರೋಗ್ಯಕರ ಜೀವಕೋಶಗಳಿಗೆ ಸಣ್ಣ ಮಟ್ಟದ ಹಾನಿ ಮೊದಲ ಬಳಕೆಯಿಂದಲೇ ಪ್ರಾರಂಭವಾಗುತ್ತದೆ. ಆರೋಗ್ಯಕರ ಜೀವಕೋಶಗಳು ಕಣ್ಣಿಗೆ ಕಾಣಿಸದ ಬದಲಾವಣೆಗಳಿಗೆ ಒಳಗಾಗುತ್ತವೆ. ಈ ಕೋಶೀಯ ಬದಲಾವಣೆಗಳು ಹಲವು ವರ್ಷಗಳವರೆಗೆ ಯಾವುದೇ ನೋವು ಅಥವಾ ಲಕ್ಷಣಗಳನ್ನು ಉಂಟುಮಾಡುವುದಿಲ್ಲ. ಹಾಗಾಗಿ ದೈನಂದಿನ ಚಟುವಟಿಕೆಗಳಿಂದಲೇ ಕ್ಯಾನ್ಸರ್ ಉಂಟಾಗಬಹುದು ಮತ್ತು ಅದು ಮುಂದುವರಿದ ಹಂತವನ್ನು ತಲುಪುವವರೆಗೆ ಪತ್ತೆಯಾಗದಿರುವುದೇ ಇದರಲ್ಲಿರುವ ದೊಡ್ಡ ಅಪಾಯ.
ಹೊಗೆಯನ್ನು ಸೇವಿಸಿದಾಗ ದೇಹದಲ್ಲಿ ಏನಾಗುತ್ತದೆ?
ಬೀಡಿಯ ಹೊಗೆಯು ಶ್ವಾಸಕೋಶವನ್ನು ಪ್ರವೇಶಿಸುವ ವಿಷಕಾರಿ ಕಣಗಳನ್ನು ಹೊಂದಿದ್ದು, ಇವು ಶ್ವಾಸಕೋಶದ ವ್ಯವಸ್ಥೆಯಲ್ಲಿ ನೆಲೆಸುತ್ತವೆ. ಫಿಲ್ಟರ್ ಸಿಗರೇಟ್ ಗಳಿಗಿಂತ ಬೀಡಿಗಳು ಹೆಚ್ಚು ವಿಷಕಾರಿ ಕಣಗಳನ್ನು ಹೊಂದಿರುತ್ತವೆ, ಏಕೆಂದರೆ ಅವು ಅಸಮರ್ಪಕವಾಗಿ ಉರಿಯುತ್ತವೆ, ಇದರಿಂದಾಗಿ ಬಳಕೆದಾರರು ಆಳವಾಗಿ ಹೊಗೆಯನ್ನು ಎಳೆಯಬೇಕಾಗುತ್ತದೆ. ಹಾನಿಗೊಳಗಾದ ಶ್ವಾಸಕೋಶದ ಪದರವನ್ನು ತನ್ನದೇ ಆದ ದುರಸ್ತಿ ಕಾರ್ಯವಿಧಾನದ ಮೂಲಕ ಸರಿಪಡಿಸಲು ದೇಹವು ಹಲವಾರು ಬಾರಿ ಪ್ರಯತ್ನಿಸುತ್ತದೆ, ಆದರೆ ನಿರಂತರ ಧೂಮಪಾನದಿಂದಾಗಿ ದೇಹವು ಪದೇ ಪದೇ ಜರ್ಜರಿತಗೊಳ್ಳುತ್ತದೆ. ಈ ಹೊತ್ತಿಗೆ, ಅಸಹಜ ಜೀವಕೋಶದ ಬೆಳವಣಿಗೆಯು ಶ್ವಾಸಕೋಶದ ಕ್ಯಾನ್ಸರ್ ಮತ್ತು ಗಂಟಲು ಹಾಗೂ ಧ್ವನಿಪೆಟ್ಟಿಗೆಯ ಕ್ಯಾನ್ಸರ್ ಗಳಿಗೆ ದಾರಿ ಮಾಡಿಕೊಡುತ್ತದೆ. ಕೆಮ್ಮು ಅಥವಾ ಧ್ವನಿ ಹಾಳಾಗುವಂತಹ ಆರಂಭಿಕ ಲಕ್ಷಣಗಳು ಸಾಮಾನ್ಯ ಸೋಂಕುಗಳಂತೆ ಇರುವುದರಿಂದ ವೈದ್ಯರು ಸಾಮಾನ್ಯವಾಗಿ ಈ ಸ್ಥಿತಿಯನ್ನು ತಡವಾಗಿ ಪತ್ತೆಹಚ್ಚುತ್ತಾರೆ.
ರೋಗನಿರ್ಣಯದ ಬಲಿಕ ಪ್ರಾರಂಭವಾಗುವ ಚಿಕಿತ್ಸೆಯು, ಮುಂದುವರಿದ ಹಂತದ ಕ್ಯಾನ್ಸರ್ ಗಳಲ್ಲಿ ಕೀಮೋಥೆರಪಿ ಮತ್ತು ವಿಕಿರಣ ಚಿಕಿತ್ಸೆಯನ್ನು ಒಳಗೊಂಡಿರುತ್ತದೆ. ಆರಂಭಿಕ ಹಂತದ ಕ್ಯಾನ್ಸರ್ ಹೊಂದಿರುವ ರೋಗಿಗಳಿಗೆ ಶಸ್ತ್ರಚಿಕಿತ್ಸೆ ಮಾಡಬಹುದು. ಆದಾಗ್ಯೂ, ಚಿಕಿತ್ಸಾ ಪ್ರಕ್ರಿಯೆಯು ಶ್ವಾಸಕೋಶದ ಕಾರ್ಯನಿರ್ವಹಣೆಗೆ ಕೆಲವು ಶಾಶ್ವತ ಹಾನಿಯನ್ನು ಉಂಟುಮಾಡಬಹುದು.ತಂಬಾಕು ಅಗಿಯುವುದು ಮತ್ತು ಅದರಿಂದ ಉಂಟಾಗುವ ಅಂಗಾಂಶ ಹಾನಿಗುಟ್ಕಾ, ಖೈನಿ ಮತ್ತು ತಂಬಾಕು ಯುಕ್ತ ಪಾನ್ ಅಗಿಯುವುದರಿಂದ ಬಾಯಿಯ ಒಳಗಿನ ಚರ್ಮದೊಂದಿಗೆ ನೇರ ಸಂಪರ್ಕ ಉಂಟಾಗಿ ಆರೋಗ್ಯಕರ ಜೀವಕೋಶಗಳು ಹಾನಿಗೊಳಗಾಗುತ್ತವೆ. ತಂಬಾಕು ಉತ್ಪನ್ನಗಳಲ್ಲಿರುವ ರಾಸಾಯನಿಕಗಳು ಬಾಯಿಯ ಒಳಪದರದಲ್ಲಿ ದೀರ್ಘಕಾಲ ಉಳಿಯುತ್ತವೆ, ಇದು ನಿರಂತರ ಕಿರಿಕಿರಿಯನ್ನು ಉಂಟುಮಾಡುತ್ತದೆ. ಈ ರಾಸಾಯನಿಕಗಳು ರಕ್ತ ಪರಿಚಲನೆಯಲ್ಲಿ ಅಸ್ವಸ್ಥತೆಯನ್ನು ಉಂಟುಮಾಡಬಹುದು, ಇದರಿಂದಾಗಿ ಗಾಯಗಳು ವಾಸಿಯಾಗುವುದು ನಿಧಾನವಾಗುವುದಲ್ಲದೆ ಬಾಯಿ ಬಿಗಿಯಾದಂತಾಗುತ್ತದೆ. ಬಾಯಿಯ ಕ್ಯಾನ್ಸರ್ ಅನ್ನು ಗುರುತಿಸಲು ವೈದ್ಯರು ಸಾಮಾನ್ಯವಾಗಿ ಬಿಳಿ ಚುಕ್ಕೆಗಳು, ಗುಣವಾಗದ ಹುಣ್ಣುಗಳು ಮತ್ತು ಬಾಯಿ ತೆರೆಯುವಲ್ಲಿನ ಮಿತಿಯನ್ನು ಆರಂಭಿಕ ಲಕ್ಷಣಗಳಾಗಿ ಪರಿಗಣಿಸುತ್ತಾರೆ.
ನಿರಂತರವಾಗಿ ತಂಬಾಕು ಅಗಿಯುವುದರಿಂದ ಮಾತು, ಆಹಾರ ಸೇವನೆ ಮತ್ತು ಮುಖದ ಭಾವನೆಗಳ ಮೇಲೆ ಪರಿಣಾಮ ಬೀರುತ್ತದೆ. ಇದರಲ್ಲಿ ಸಾಮಾನ್ಯವಾಗಿ ಪೀಡಿತ ಭಾಗವನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದುಹಾಕುವುದು ಮತ್ತು ನಂತರದ ವಿಕಿರಣ ಚಿಕಿತ್ಸೆಯನ್ನು ನೀಡುವ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ರೋಗಿಗಳಿಗೆ ಬದುಕುವ ಅವಕಾಶವಿರುತ್ತದೆ, ಆದರೆ ಅವರು ಸುದೀರ್ಘ ಪುನರ್ವಸತಿ ಕಾರ್ಯಕ್ರಮಕ್ಕೆ ಒಳಗಾಗಬೇಕಾಗುತ್ತದೆ. ರೋಗಿಗಳು ತಂಬಾಕು ಸೇವನೆಯನ್ನು ಸಾಮಾನ್ಯ ಎಂದು ಭಾವಿಸಿ, ಬಾಯಿಯ ಕ್ಯಾನ್ಸರ್ ನ ಆರಂಭಿಕ ಎಚ್ಚರಿಕೆಯ ಸೂಚನೆಗಳನ್ನು ನಿರ್ಲಕ್ಷಿಸಿದಾಗ ಮತ್ತು ಚಿಕಿತ್ಸೆ ಪಡೆಯಲು ವಿಳಂಬ ಮಾಡಿದಾಗ ಚಿಕಿತ್ಸೆಯ ಫಲಿತಾಂಶದಲ್ಲಿ ಸವಾಲುಗಳು ಎದುರಾಗುತ್ತವೆ.
ಮದ್ಯಪಾನ ಮತ್ತು ಆಂತರಿಕ ಕ್ಯಾನ್ಸರ್ ಅಪಾಯ
ಮದ್ಯಪಾನವು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಕೇವಲ ಒಂದು ಸಾಧಾರಣ ಎಚ್ಚರಿಕೆಯಲ್ಲ, ಬದಲಿಗೆ ಕಟು ವಾಸ್ತವ. ಇತ್ತೀಚಿನ ವೈದ್ಯಕೀಯ ಅಧ್ಯಯನಗಳ ಪ್ರಕಾರ, ದೇಹವು ಮದ್ಯವನ್ನು ಜೀರ್ಣಿಸಿಕೊಳ್ಳುವಾಗ, ಅದು ‘ಅಸೆಟಾಲ್ಡಿಹೈಡ್’ ಎಂಬ ಕ್ಯಾನ್ಸರ್ ಕಾರಕವನ್ನು ಉತ್ಪಾದಿಸುತ್ತದೆ. ಇದು ಡಿಎನ್ಎ ಅನ್ನು ಹಾನಿಗೊಳಿಸುವ ವಿಷದಂತೆ ಕೆಲಸ ಮಾಡುತ್ತದೆ. ವಾಸ್ತವವಾಗಿ ನಮ್ಮ ಡಿಎನ್ಎ, ಜೀವಕೋಶಗಳ ಬೆಳವಣಿಗೆ ಮತ್ತು ದುರಸ್ತಿ ಕ್ರಮವನ್ನು ನಿಯಂತ್ರಿಸುವ ಕೆಲಸ ಮಾಡುತ್ತದೆ. ಮದ್ಯಪಾನದಿಂದಾಗಿ ಜೀವಕೋಶಗಳಿಗೆ ಉಂಟಾಗುವ ನಿರಂತರ ಹಾನಿಯು ಯಕೃತ್ತು, ಅನ್ನನಾಳ, ಬಾಯಿ ಮತ್ತು ಸ್ತನಗಳಿಗೆ ಸಂಬಂಧಿಸಿದ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಮದ್ಯಪಾನ ಮಾಡುವುದರಿಂದ ಎರಡು ರೀತಿಯ ತೊಂದರೆಗಳು ಉಂಟಾಗುತ್ತವೆ, ಒಂದು, ರೋಗಗಳನ್ನು ಪ್ರತಿರೋಧಿಸುವ ದೇಹದ ಸಾಮರ್ಥ್ಯ ದುರ್ಬಲಗೊಳ್ಳುತ್ತದೆ; ಎರಡು, ಪೋಷಕಾಂಶಗಳನ್ನು ಹೀರಿಕೊಳ್ಳುವಲ್ಲಿ ದೇಹವು ವಿಫಲಗೊಳ್ಳುತ್ತದೆ. ಇದರಿಂದಾಗಿ ಜೀವಕೋಶಗಳು ಗುಣಮುಖವಾಗುವುದು ಕಷ್ಟವಾಗುತ್ತದೆ.
ಮದ್ಯಪಾನ ಮತ್ತು ತಂಬಾಕಿನ ಈ ಮಾರಕ ಸಂಯೋಜನೆಯು ಆರೋಗ್ಯದ ಸಮಸ್ಯೆಗಳನ್ನು, ವಿಶೇಷವಾಗಿ ಯಕೃತ್ತಿನ ತೊಂದರೆಗಳನ್ನು ಮತ್ತಷ್ಟು ಹೆಚ್ಚಿಸುತ್ತದೆ. ಮದ್ಯಪಾನದಿಂದ ಉಂಟಾಗುವ ಕ್ಯಾನ್ಸರ್ ಗಳ ಚಿಕಿತ್ಸೆಯು ಸಾಕಷ್ಟು ಸಂಕೀರ್ಣವಾಗಿರುತ್ತದೆ, ಒಂದು ವೇಳೆ ಯಕೃತ್ತು ಹಾನಿಗೊಳಗಾಗಿದ್ದರೆ ಚಿಕಿತ್ಸೆ ನೀಡುವುದು ಅತ್ಯಂತ ಕಠಿಣವಾಗುತ್ತದೆ.ಪರಿಸರದಿಂದ ಎದುರಾಗುವ ಕ್ಯಾನ್ಸರ್ ಅಪಾಯಕೆಲವೊಮ್ಮೆ, ನಾವು ಪ್ರತಿದಿನ ಮಾಡುವ ಆಯ್ಕೆಗಳ ಹೊರತಾಗಿ, ನಾವು ಊಹಿಸಲೂ ಸಾಧ್ಯವಿಲ್ಲದ ಮೂಲಗಳಿಂದಲೂ ಅಪಾಯ ಎದುರಾಗಬಹುದು. ಸರಿಯಾದ ಗಾಳಿ-ಬೆಳಕಿನ ವ್ಯವಸ್ಥೆ ಇಲ್ಲದ ಅಡುಗೆಮನೆಯಲ್ಲಿ ಸೌದೆ ಅಥವಾ ಕಲ್ಲಿದ್ದಲನ್ನು ಬಳಸಿ ಅಡುಗೆ ಮಾಡುವಾಗ ಬರುವ ಹೊಗೆಯನ್ನು ದೀರ್ಘಕಾಲ ಸೇವಿಸುವುದು ನಿಮ್ಮ ಶ್ವಾಸಕೋಶದ ಮೇಲೆ ಗಂಭೀರ ಪರಿಣಾಮ ಬೀರಬಹುದು. “ಧೂಮಪಾನ ಮಾಡದ ಮಹಿಳೆಯರಲ್ಲಿಯೂ ಶ್ವಾಸಕೋಶದ ಕ್ಯಾನ್ಸರ್ ಪತ್ತೆಯಾಗುತ್ತಿರುವುದು ಹೆಚ್ಚುತ್ತಿದೆ ಮತ್ತು ಅಂತಹ ಮಹಿಳೆಯರಲ್ಲಿ ಈ ಅಂಶವು ಸಾಮಾನ್ಯವಾಗಿ ಕಂಡುಬರುತ್ತಿದೆ ಎಂದು ವೈದ್ಯರು ಕಂಡುಕೊಂಡಿದ್ದಾರೆ.” ಹಾಗೆಯೇ, ‘ಸೆಕೆಂಡ್ ಹ್ಯಾಂಡ್ ಸ್ಮೋಕ್’ (ಬೇರೆಯವರು ಬಿಟ್ಟ ಹೊಗೆಯನ್ನು ಸೇವಿಸುವುದು) ಧೂಮಪಾನ ಮಾಡದವರ ಜೀವಕೋಶಗಳನ್ನು, ವಿಶೇಷವಾಗಿ ಶ್ವಾಸಕೋಶವು ಇನ್ನೂ ಬೆಳೆಯುತ್ತಿರುವ ಹಂತದಲ್ಲಿರುವ ಮಕ್ಕಳ ಜೀವಕೋಶಗಳನ್ನು ಹಾನಿಗೊಳಿಸುತ್ತದೆ.
ವೈದ್ಯಕೀಯ ದೃಷ್ಟಿಕೋನದಿಂದ ನೋಡುವುದಾದರೆ, ಹೊಗೆ ಎಲ್ಲಿಂದ ಬಂದರೂ ನಿಮ್ಮ ಶ್ವಾಸಕೋಶವು ಎಲ್ಲಾ ರೀತಿಯ ಕೆಟ್ಟ ಹೊಗೆಗೆ ಒಂದೇ ರೀತಿಯಾಗಿ ಪ್ರತಿಕ್ರಿಯಿಸುತ್ತದೆ.ಶೀಘ್ರ ರೋಗ ಪತ್ತೆ ಸದ್ಯದ ಆಶಾಕಿರಣ
ನೀವು ಈ ಕೆಟ್ಟ ಅಭ್ಯಾಸಗಳನ್ನು ನಿಲ್ಲಿಸಿದಾಗ ನಿಮ್ಮ ದೇಹವು ಎಷ್ಟು ಅದ್ಭುತವಾಗಿ ಚೇತರಿಸಿಕೊಳ್ಳಬಲ್ಲದು ಎಂಬುದು ಅಚ್ಚರಿಯ ವಿಷಯ. ಈ ಪ್ರಕ್ರಿಯೆಗೆ ಕೆಲವು ತಿಂಗಳುಗಳು ಬೇಕಾಗಬಹುದು, ಆದರೆ ಅಂತಿಮವಾಗಿ ಉರಿಯೂತ ಕಡಿಮೆಯಾಗುತ್ತದೆ, ಅಂಗಾಂಶಗಳು ಗುಣವಾಗಲು ಪ್ರಾರಂಭಿಸುತ್ತವೆ ಮತ್ತು ಕ್ಯಾನ್ಸರ್ ಅಪಾಯವು ಕಡಿಮೆಯಾಗುತ್ತದೆ. ಬಾಯಿಯ ಒಳಗಿನ ಕ್ಯಾನ್ಸರ್-ಪೂರ್ವ ಬೆಳವಣಿಗೆಯನ್ನು ವೈದ್ಯರು ಸಾಮಾನ್ಯವಾಗಿ ಚಿಕಿತ್ಸೆಯ ಮೂಲಕ ಗುಣಪಡಿಸಬಹುದು ಅಥವಾ ಸೂಕ್ಷ್ಮವಾಗಿ ಗಮನಿಸಬಹುದು. ನೀವು ಯಾವುದೇ ರೂಪದಲ್ಲಿ ತಂಬಾಕನ್ನು ಸೇವಿಸುತ್ತಿದ್ದರೆ, ನಿಯಮಿತವಾಗಿ ಬಾಯಿಯ ತಪಾಸಣೆ ಮಾಡಿಸಿಕೊಳ್ಳಬೇಕೆಂದು ವೈದ್ಯರು ಸಲಹೆ ನೀಡುತ್ತಾರೆ. ವಾಸಿಯಾಗದ ಹುಣ್ಣು, ಹೋಗದ ಕೆಮ್ಮು, ಯಾವುದೇ ಕಾರಣವಿಲ್ಲದೆ ತೂಕ ಇಳಿಕೆಯಾಗುವುದು ಅಥವಾ ನಿಮ್ಮ ಧ್ವನಿಯಲ್ಲಿ ಬದಲಾವಣೆ ಕಂಡುಬಂದರೆ, ತಕ್ಷಣವೇ ಕ್ಯಾನ್ಸರ್ ತಪಾಸಣೆ ಮಾಡಿಸಿಕೊಳ್ಳಿ.
ಭಯವಿಲ್ಲದೆ ಅರ್ಥೈಸಿಕೊಳ್ಳಿಕ್ಯಾನ್ಸರ್ ತಡೆಗಟ್ಟಲು ತಿಳುವಳಿಕೆ ಮತ್ತು ಜಾಗೃತಿ ಅಗತ್ಯವೇ ಹೊರತು ಭಯವಲ್ಲ. ನಿಮ್ಮ ದೇಹದಲ್ಲಿ ಜೀವಕೋಶದ ಮಟ್ಟದಲ್ಲಿ ಏನಾಗುತ್ತಿದೆ ಎಂಬುದನ್ನು ನೀವು ಅರ್ಥಮಾಡಿಕೊಂಡಾಗ, ನಿಮ್ಮ ಆರೋಗ್ಯವನ್ನು ರಕ್ಷಿಸುವ ಜೀವನಶೈಲಿ ಮತ್ತು ವೈದ್ಯಕೀಯ ಆಯ್ಕೆಗಳನ್ನು ನೀವು ಮಾಡತೊಡಗುತ್ತೀರಿ.
ಆರೋಗ್ಯವಾಗಿರಲು ಕ್ರಮಗಳು ಸರಳವಾಗಿವೆ, ಅವುಗಳೆಂದರೆ: ಎಲ್ಲಾ ರೂಪದ ತಂಬಾಕು ಸೇವನೆಯನ್ನು ನಿಲ್ಲಿಸಿ. ಮದ್ಯಪಾನವನ್ನು ಸೀಮಿತಗೊಳಿಸಿ. ದೈನಂದಿನ ವ್ಯಾಯಾಮ ಮತ್ತು ಉಸಿರಾಟದ ತಂತ್ರಗಳಂತಹ ಆರೋಗ್ಯಕರ ಜೀವನಶೈಲಿ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ. ಧೂಮಪಾನ ಅಥವಾ ಮದ್ಯಪಾನ ಮಾಡಲು ಸ್ನೇಹಿತರ ಒತ್ತಡಕ್ಕೆ ಮಣಿಯಬೇಡಿ. ತಂಬಾಕು ಅಗಿಯುವುದು ಧೂಮಪಾನಕ್ಕಿಂತ ಸುರಕ್ಷಿತವೇನಲ್ಲ, ಅಂತಹ ಉತ್ಪನ್ನಗಳಿಂದ ದೂರವಿರಿ.
ಕ್ಯಾನ್ಸರ್ ಪ್ರಾರಂಭವಾದಾಗ ಬಹಳ ಸೂಕ್ಷ್ಮವಾದ ಸುಳಿವುಗಳನ್ನು ನೀಡುತ್ತದೆ. ಹಾಗಾಗಿ ಲಕ್ಷಣಗಳನ್ನು ಮೊದಲೇ ಗುರುತಿಸುವುದು ಮತ್ತು ಸಂಕೇತಗಳನ್ನು ಸಮಯಕ್ಕೆ ಸರಿಯಾಗಿ ಪತ್ತೆಹಚ್ಚುವುದು ವ್ಯಕ್ತಿಗಳಿಗೆ ಆರೋಗ್ಯಕರ ಜೀವನ ನಡೆಸಲು ಅವಕಾಶ ನೀಡುತ್ತದೆ. ಅಲ್ಲದೆ, ಕಾಯಿಲೆಯು ತೀರಾ ತಡವಾಗುವವರೆಗೆ ದೇಹದೊಳಗೆ ಗುಪ್ತವಾಗಿ ಹಾನಿ ಆಗುವುದನ್ನು ತಡೆಯಲು ಇದು ಸಹಕಾರಿಯಾಗಿದೆ.

ಡಾ. ಲೇಪಾಕ್ಷಿ ಕೆ, ಕನ್ಸಲ್ಟೆಂಟ್, ಮೆಡಿಕಲ್ ಆಂಕಾಲಜಿ,
ನಾರಾಯಣ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್, ಮೈಸೂರು
