ಬೆಂಗಳೂರು : ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲವಾದರೂ ಎಲ್ಲರ ಹಾರೈಕೆಗಳು ಇನ್ನಷ್ಟು ಸ್ಪೂರ್ತಿಯಿಂದ ಮತ್ತು ಗಟ್ಟಿಯಾಗಿ ಅಭಿವೃದ್ಧಿಯತ್ತ ಕರ್ನಾಟಕವನ್ನು ನಾವು ಕೊಂಡೊಯ್ಯಲು ಸಂಕಲ್ಪ ಮಾಡಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ ಕರ್ನಾಟಕದ ಸಾಮಾನ್ಯ ಜನರಿಂದ ಹಿಡಿದು ಪಕ್ಷದ ಹಿರಿಯರು ಪದಾಧಿಕಾರಿಗಳು, ರಾಷ್ಟ್ರಪತಿಗಳು, ಪ್ರಧಾನಿ ನರೇಂದ್ರ ಮೋದಿಯವರು ಶುಭ ಕೋರಿ ಟ್ವೀಟ್ ಮಾಡಿದ್ದಾರೆ.
ಕ್ಷೇತ್ರದ ಜನ ಶುಭಾಶಯಗಳನ್ನು ಕೋರಿದ್ದಾರೆ. ಅಮಿತ್ ಷಾ ಅವರು ಕರೆ ಮಾಡಿ ಶುಭಾಶಯ ತಿಳಿಸಿದ್ದಾರೆ. ಅವರೆಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದೇನೆ. ಎಲ್ಲರ ಶುಭಾಶಯಗಳು ರಾಜ್ಯವನ್ನು ಸುಭಿಕ್ಷತೆಯತ್ತ ತೆಗೆದುಕೊಂಡು ಹೋಗಲು, ರಾಜ್ಯದ ಸಮಗ್ರ ಅಭಿವೃದ್ಧಿ ಮಾಡಲು ವಿಶೇಷವಾಗಿ ರಾಜ್ಯದಲ್ಲಿ ಬಡವರು, ರೈತರು ಮತ್ತು ಹಿಂದುಳಿದವರು, ಪರಿಶಿಷ್ಟ ಜಾತಿ ಮತ್ತು ಪಂಗಡ , ಮಹಿಳೆಯರು ಮತ್ತು ಯುವಕರ ಶ್ರೇಯೋಭಿವೃದ್ಧಿಗೆ ಕೆಲಸ ಮಾಡಲು ದೊಡ್ಡ ಶಕ್ತಿ ಮತ್ತು ಪ್ರೇರಣೆಯನ್ನು ನೀಡಿದೆ ಎಂದು ಹೇಳಿದರು.