ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ೧೨ನೇ ಶತಮಾನದಲ್ಲಿ ಜಾರಿಗೆ ತಂದ ಮಹಾಮಾನವತಾವಾದಿ ಬಸವಣ್ಣ ಎಂದು ಸಾಹಿತಿ ಡಾ. ಕಿರಣ್ ಸಿಡ್ಲೆಹಳ್ಳಿ ಹೇಳಿದರು. ಅವರು ನಗರದ ಕೃಷ್ಣಮೂರ್ತಿಪುರಂನ ನಮನ ಕಲಾಮಂಟಪ ದಲ್ಲಿ ಸುವರ್ಣ ಬೆಳಕು ಫೌಂಡೇಶನ್ ಹಾಗೂ ಶ್ರೀ ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನ ಸಂಯುಕ್ತಾಶ್ರಯದಲ್ಲಿ ಮೇ 15 ಭಾನುವಾರ ಬೆಳಗ್ಗೆ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವ ಸಂದೇಶ ಕುರಿತು ಮಾತನಾಡಿದರು.

ಅಂದಿನ ಸಮಾಜದಲ್ಲಿ ೧೨೦೦೦ ವೇಶ್ಯೆಯರನ್ನು ಲಿಂಗದೀಕ್ಷೆ ನೀಡಿ ಶಿವಶರಣೆಯರನ್ನಾಗಿ ಪರಿವರ್ತಿಸಿದ ಬಸವಣ್ಣನವರ ಸಂದೇಶಗಳನ್ನು ಸರಿಯಾಗಿ ಅರ್ಥಮಾಡಿಕೊಂಡಿದ್ದರೆ ಧರ್ಮ-ಧರ್ಮಗಳ ನಡುವೆ ಜಾತಿ-ಜಾತಿಗಳ ನಡುವೆ ಇಂದು ಸಂಘರ್ಷವೇ ಇರುತ್ತಿರಲಿಲ್ಲ ಎಂದು ಅವರು ತಿಳಿಸಿದರಲ್ಲದೆ ನಾವು ಬಸವಣ್ಣನವರ ಅನುಯಾಯಿಗಳಾಗುವುದಕ್ಕಿಂತ ಅವರ ಅನುಪಾಲಕರಾಗಬೇಕೆಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಮಾಜ ಸೇವಕ ಡಾ.ಕೆ. ರಘುರಾಮ್ ವಾಜಪೇಯಿ ಮಾತನಾಡಿ, ಬಸವಣ್ಣನವರ ತತ್ವ ಸಿದ್ಧಾಂತಗಳು ಸಾರ್ವಕಾಲಿಕ ಪ್ರಸ್ತುತತೆಯನ್ನು ಪಡೆದುಕೊಂಡಿವೆ ಎಂದು ಬಣ್ಣಿಸಿದರು.
ಕಾರ್ಯಕ್ರಮವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿ ಕೆರೆ ಗೋಪಾಲ್ ವರ್ಮ ಉದ್ಘಾಟಿಸಿದರು. ಶ್ರೀ ಸೋಮಶೇಖರ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು.

ಇದೇ ಸಂದರ್ಭ ವಿವಿಧ ಕ್ಷೇತ್ರಗಳ ಸಾಧಕರುಗಳಾದ ಶ್ರೀ ಸೋಮಶೇಖರ ಇಮ್ರಾಪುರ ಅವರಿಗೆ ಶ್ರೀ ಬಸವ ವಿಭೂಷಣ ಹಾಗೂ ಅವರ, ಪ್ರಕಾಶ್ ಜಿಎಸ್ ಹಳ್ಳಿ, ಕಿರಣ್ ಸಿಡ್ಲೆಹಳ್ಳಿ, ಮಲ್ಲೇಶ್, ಶ್ರೀಧರ್, ಅಂಬಿಕಾ, ಸ್ನೇಕ್ ಪ್ರಶಾಂತ್ ಇವರುಗಳಿಗೆ ಶ್ರೀ ಬಸವ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ರಾಜ್ಯ ಮುಕ್ತ ಕವಿ ಪರಿಷತ್ ಅಧ್ಯಕ್ಷ ಮುತ್ತುಸ್ವಾಮಿ, ಹಿಮಾಲಯ ಪ್ರತಿಷ್ಠಾನದ ಅಧ್ಯಕ್ಷ ಅನಂತು, ಸುವರ್ಣ ಬೆಳಕು ಫೌಂಡೇಶನ್ ಅಧ್ಯಕ್ಷ ಮಹೇಶ್ ನಾಯಕ್, ಶ್ರೀ ಬಸವೇಶ್ವರ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಬಸವರಾಜೇಂದ್ರ ಸ್ವಾಮಿ, ಕವಿ ಎನ್.ವಿ. ರಮೇಶನ್, ಯುವ ಬರಹಗಾರ ಬಿ ಆರ್ ಮಂಜುನಾಥ್. ಹರ್ಷವರ್ಧನ ಮುಂತಾದವರು ಉಪಸ್ಥಿತರಿದ್ದರು.