ಚಾಮರಾಜನಗರ: ಅಂಬೇಡ್ಕರ್, ಬಸವಣ್ಣನವರು ಹಾಕಿಕೊಟ್ಟ ಹಾದಿಯಲ್ಲಿ ಪ್ರತಿಯೊಬ್ಬರು ನಡೆಯಬೇಕಿದೆ ಎಂದು ನಗರಸಭೆ ಸಮುದಾಯ ಯೋಜನೆ ಸಂಘಟನಾಅಧಿಕಾರಿ ವೆಂಕಟನಾಯಕ ಹೇಳಿದರು.
ನಗರದ ದೇವಾಂಗಬೀದಿಯ ಸಮುದಾಯಭವನದಲ್ಲಿ ನಿಜಧ್ವನಿಸೇನಾ ಸಮಿತಿ ವತಿಯಿಂದ ನಡೆದ ಸಂಘದ ೨೦ ನೇ ವಾರ್ಷಿಕೋತ್ಸವ ಅಂಗವಾಗಿ ನಡೆದ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೩೧ ನೇ ಜಯಂತಿ, ಜಗಜ್ಯೋತಿಬಸವೇಶ್ವರರ ೮೮೯ ನೇ ಜಯಂತಿ ಕಾರ್ಯಕ್ರಮದಲ್ಲಿ ಇಬ್ಬರು ಮಾನವತಾವಾದಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.
ಅಂಬೇಡ್ಕರ್ ಅವರು ಬಾಲ್ಯದ ದಿನಗಳಲ್ಲಿ ಅನೇಕ ಕಷ್ಟ ಕೋಟಲೆಗಳನ್ನು ಎದುರಿಸಿದರು. ಇದರ ನಡುವೆಯೂ ಉನ್ನತಮಟ್ಟದ ಹುದ್ದೆಗಳನ್ನು ಅಲಂಕರಿಸಿ, ವಿವಿಧ ದೇಶಗಳ ಸಂವಿಧಾನಅಧ್ಯಯನ ಮಾಡಿ, ದೇಶಕ್ಕೆ ಶ್ರೇಷ್ಠತೆಯ ಸಂವಿಧಾನರಚಿಸಿಕೊಟ್ಟರು. ಬಸವಣ್ಣನವರ ಆದರ್ಶ, ತತ್ವಗಳನ್ನು ಪಾಲನೆ ಮಾಡಬೇಕು, ಅಂಬೇಡ್ಕರ್ ಅವರ ಜೀವನ ಕುರಿತ ಪುಸ್ತಕಗಳ ಅಧ್ಯಯನಕ್ಕೆ ಮುಂದಾಗಬೇಕು, ಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮಗುಣಮಟ್ಟದ ಶಿಕ್ಷಣಕೊಡಿಸಲು ಮುಂದಾಗಬೇಕು ಎಂದರು.
ನಿಜಧ್ವನಿಸೇನಾಸಮಿತಿ ಅಧ್ಯಕ್ಷ ಸಿ.ಎನ್.ಗೋವಿಂದರಾಜು ಮಾತನಾಡಿ, ಸಂಘವು ತನ್ನ ೨೦ ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದು, ಅಂದಿನಿಂದ ಇಂದಿನವರಗೆ ಅಂಬೇಡ್ಕರ್, ಬಸವಣ್ಣ, ಕನಕದಾಸ, ವಾಲ್ಮೀಕಿಮಹರ್ಷಿ ಸೇರಿದಂತೆ ಇತರೇ ದಾರ್ಶನಿಕರ ಜಯಂತಿ ಆಚರಿಸಿ, ಅವರು ನಾಡಿಗೆ ನೀಡಿರುವ ಕೊಡುಗೆಗಳನ್ನು ಸ್ಮರಿಸಲಾಗುತ್ತಿದೆ, ಕಾರ್ಮಿಕರಮಕ್ಕಳಿಗೆ ನೋಟ್‌ಪುಸ್ತಕ, ಲೇಖನಿಸಾಮಾಗ್ರಿ ವಿತರಿಸುವುದು, ಅವರಿಗೆ ಸಹಾಯಧನ ವಿತರಣೆ ಮಾಡುವ ಕೆಲಸ ಸಂಘದಿಂದ ನಡೆಯುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ರಾಜ್ಯದ ಯಾವುದೇ ಭಾಗದಲ್ಲಿ ಆಗಲೀ, ಕನ್ನಡಭಾಷೆ,ನೆಲಜಲಕ್ಕೆ ತೊಂದರೆಯಾದ ಸಂದರ್ಭದಲ್ಲಿ ಮೊದಲು ಧನಿಎತ್ತುವ ಸಂಘಟನೆಗಳು ಎಂದರೆ ಅದು ಚಾಮರಾಜನಗರ ಎಂದರೆ ತಪ್ಪಾಗಲಾರದು, ದೇಶದ ಭದ್ರತೆಯ ಬುನಾದಿ ದೃಷ್ಟಿಯಿಂದ ಉತ್ಕೃಷ್ಟ ಸಂವಿಧಾನ ನೀಡಿದ ಅಂಬೇಡ್ಕರ್ ಅವರ ಸ್ಮರಣೆಯನ್ನು ಮಾಡುತ್ತಿರುವುದು ಉತ್ತಮ ಬೆಳವಣಿಗೆ, ಹಾಗೆಯೇ ಇದೇ ಸಂದರ್ಭದಲ್ಲಿ ಮಾನವತಾವಾದಿ ಬಸವಣ್ಣನವರ ಸಮಾಜಮುಖಿ ಕಾರ್ಯಕ್ರಮಗಳ ಕುರಿತು ಪ್ರತಿಯೊಬ್ಬರು ಮೆಲುಕುಹಾಕಬೇಕಿದೆ ಎಂದರು.
ಇದೇವೇಳೆ ನಗರಸಭೆ ಸಮುದಾಯ ಯೋಜನೆ ಸಂಘಟನಾಅಧಿಕಾರಿ ವೆಂಕಟನಾಯಕ್ ಅವರನ್ನು ಸಮಿತಿ ಪರವಾಗಿ ಸನ್ಮಾನಿಸಲಾಯಿತು.
ನಿಜಧನಿಸೇನಾ ಸಮಿತಿ ತಾಲೂಕು ಅಧ್ಯಕ್ಷ ಮರಿಯಾಲದಹುಂಡಿಕುಮಾರ್, ಪ್ರದಾನ ಕಾರ್ಯದರ್ಶಿ ಮಹಾಲಿಂಗೇಶ್, ಸಣ್ಣಮಾದಯ್ಯ, ಕೃಷ್ಣಮೂರ್ತಿ, ಶಿವಸ್ವಾಮಯ್ಯ, ಅಜ್ಜು, ಸಂತೋಷ್, ಜಗದೀಶ್, ಖಮ್ರುದ್ದಿನ್ ಸೇರಿದಂತೆ ಇತರೇ ಪದಾಧಿಕಾರಿಗಳು ಹಾಜರಿದ್ದರು.
