ಗುಂಡ್ಲುಪೇಟೆ: ಸಾಲ ಪಡೆಯಲು ಕೆನರಾ ಬ್ಯಾಂಕ್ ನಲ್ಲಿ ಚಿನ್ನ ಅಡವಿಟ್ಟು ನಂತರ ಸಾಲ ಮತ್ತು ಬಡ್ಡಿ ಎರಡನ್ನು ಮರು ಪಾವತಿಸಿದರೂ ಚಿನ್ನಾಭರಣ ಕೊಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದ ಕ್ರಮವನ್ನು ಖಂಡಿಸಿ ರೈತ ಸಂಘಟನೆ ಮುಖಂಡರು ಬ್ಯಾಂಕ್ ಮುಂಭಾಗ ಪೆಂಡಾಲ್ ಹಾಕಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಪ್ರವಾಸಿ ಮಂದಿರದಿಂದ ಜಾಥಾ ಹೊರಟ ರೈತ ಮುಖಂಡರು ಹೆದ್ದಾರಿ ಮೂಲಕ ಸಾಗಿ ಬ್ಯಾಂಕ್ ಮುಂದೆ ಸಮಾವೇಶಗೊಂಡು ಬ್ಯಾಂಕ್ ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.
ಈ ವೇಳೆ ಮಾತನಾಡಿದ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಶಿವಪುರ ಮಹದೇವಪ್ಪ, ಕೋಡಹಳ್ಳಿ ಗ್ರಾಮದ ರೈತ ಕಾಳಶೆಟ್ಟಿ ಕೆನರಾ ಬ್ಯಾಂಕ್ ನಲ್ಲಿ ಚಿನ್ನ ಅಡವಿಟ್ಟು ಸಾಲ ಪಡೆದು ಹಲವು ತಿಂಗಳು ಕಳೆದಿದೆ. ಬಡ್ಡಿ ಪಾವತಿಸದ ಕಾರಣ ಚಿನ್ನಾಭರಣಗಳು ಹರಾಜಾಗುತ್ತವೆ ಎಂದು ಬ್ಯಾಂಕ್ ಅಧಿಕಾರಿಗಳು ರೈತನಿಗೆ ತಿಳಿಸಿದ ಕೂಡಲೇ ಆತ ಖಾಸಗೀಯಾಗಿ ಸಾಲ ಮಾಡಿ 1.15 ಲಕ್ಷ ರೂ.ಗಳನ್ನು ಫೆ.23ರಂದು ಪಾವತಿ ಮಾಡಿದ್ದಾರೆ. ಇದಾದ ನಂತರದಲ್ಲಿ ಬ್ಯಾಂಕ್‍ನವರು ಟ್ರ್ಯಾಕ್ಟರ್ ಸಾಲದ ಕಾರಣಕ್ಕೆ ಚಿನ್ನಾಭರಣ ನೀಡದೇ ಸತಾಯಿಸಿದ್ದಾರೆ. ರೈತರು ಟ್ರ್ಯಾಕ್ಟರ್ ಸಾಲಕ್ಕೂ ಆಸ್ತಿ ಅಡಮಾನ ಮಾಡಿದ್ಧಾರೆ. ವಸೂಲಿಗೆ ಅವರದೇ ಆದ ಅವಕಾಶಗಳಿವೆ. ಇದರ ಹೊರತಾಗಿ ರೈತನನ್ನು ಸಂಕಷ್ಟಕ್ಕೆ ಸಿಲುಕಿಸುವ ಕ್ರಮ ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಂತರ ಬ್ಯಾಂಕ್ ವ್ಯವಸ್ಥಾಪಕರು ಸ್ಥಳಕ್ಕಾಗಮಿಸಿ ರೈತರ ಸಮಸ್ಯೆ ಆಲಿಸಿದರು. ಚಿನ್ನಾಭರಣ ನೀಡದಿರುವುದಕ್ಕೆ ನಿಯಮಗಳ ಅಡ್ಡಿ ಬಗ್ಗೆ ವಿವರಿಸಿದರು. ಇದಕ್ಕೆ ಒಪ್ಪದ ರೈತ ಸಂಘಟನೆಯವರು ಚಿನ್ನಾಭರಣ ನೀಡದಿದ್ದರೆ ಹೋರಾಟ ಮುಂದುವರೆಸುವ ಎಚ್ಚರಿಕೆ ನೀಡಿದರು. ನಂತರ ಚಿನ್ನಾಭರಣ ವಾಪಸ್ಸು ಮಾಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಅಂತ್ಯಗೊಂಡಿತು.
ರೈತ ಸಂಘಟನೆ ತಾಲೂಕು ಅಧ್ಯಕ್ಷ ಹೊನ್ನೇಗೌಡನಹಳ್ಳಿ ಶಿವಮಲ್ಲು, ಮುಖಂಡರಾದ ಹಂಗಳ ದಿಲೀಪ್, ವೀರನಪುರ ನಾಗರಾಜಪ್ಪ, ನಾಗಪ್ಪ, ಬಾಚಹಳ್ಳಿ ಸ್ವಾಮಿ, ಕುಮಾರ್, ಕಾಂತರಾಜು, ಪಾಪಣ್ಣ, ಮಳವಳ್ಳಿ ಮಹೇಂದ್ರ ಸೇರಿದಂತೆ ಇತರರು ಇದ್ದರು.
ವರದಿ: ಬಸವರಾಜು ಎಸ್.ಹಂಗಳ