ಗುಂಡ್ಲುಪೇಟೆ: ಬೇಸಿಗೆಯಲ್ಲಿ ಬೆಂಕಿಯಿಂದ ಅರಣ್ಯವನ್ನು ರಕ್ಷಿಸುವ ಸಲುವಾಗಿ ಬಂಡೀಪುರ ಅರಣ್ಯದಲ್ಲಿ ಬೆಂಕಿ ರೇಖೆಗಳ (ಫೈರ್ ಲೈನ್) ನಿರ್ಮಾಣ ಕೆಲಸ ಆರಂಭಿಸಲಾಗಿದೆ.
ಎರಡು ವರ್ಷದ ಹಿಂದೆ ಸರಿಯಾದ ಕ್ರಮದಲ್ಲಿ ಬೆಂಕಿರೇಖೆ ನಿರ್ಮಾಣ ಮಾಡದ ಕಾರಣದಿಂದ, ಕಿಡಿಗೇಡಿಗಳು ಹಚ್ಚಿದ್ದ ಬೆಂಕಿಗೆ 11 ಸಾವಿರ ಎಕರೆಗಳಷ್ಟು ಕಾಡು ಆಹುತಿಯಾಗಿತ್ತು. ಇದರ ನಂತರ ಎಚ್ಚೆತ್ತಿರುವ ಇಲಾಖೆ ಮುಂಜಾಗ್ರತಾ ಕ್ರಮವಾಗಿ ಎಲ್ಲ ವಲಯಗಳಲ್ಲಿ ಅತ್ಯಂತ ವ್ಯವಸ್ಥಿತವಾಗಿ ಬೆಂಕಿ ರೇಖೆ ನಿರ್ಮಾಣ ಮಾಡಲು ಕ್ರಮ ಕೈಗೊಂಡಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ 50 ಮೀಟರ್ ವ್ಯಾಪ್ತಿಯಲ್ಲಿ ಬೆಳೆದಿರುವ ಎಲ್ಲ ಕಳೆ ಗಿಡಗಳನ್ನು ತೆರವುಗೊಳಿಸಲಾಗುತ್ತಿದೆ.
ಗೋಪಾಲಸ್ವಾಮಿ ಬೆಟ್ಟ ವಲಯ ವ್ಯಾಪ್ತಿಯ 2 ರಾಷ್ಟ್ರೀಯ ಹೆದ್ದಾರಿಗಳ ಬರೆಕಟ್ಟೆ, ಕರಡಿ ಕಲ್ಲು ಬೆಟ್ಟ, ಮೈಸೂರು ಕಲ್ಲು, ಎಂಟನೇ ಮೈಲು ಹಾಗೂ ಇತರ ಸ್ಥಳಗಳಲ್ಲಿ ಬೆಂಕಿರೇಖೆಯನ್ನು ನಿರ್ಮಾಣ ಮಾಡಲಾಗುತ್ತಿದೆ.
ಅರಣ್ಯದೊಳಗಿನ ರಸ್ತೆಗಳು, ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ 5 ರಿಂದ 10 ಮೀಟರ್ ಅಗಲಕ್ಕೆ ಕಳೆ ತೆಗೆಯಲಾಗುತ್ತಿದ್ದು, ಕಳೆ ಒಣಗಿದ ಬಳಿಕ ಸುಡುವ ಕಾರ್ಯ ನಡೆಯಲಿದೆ.
ಪ್ರಸಕ್ತ ವರ್ಷ ಮುಂಗಾರು ಪೂರ್ವದಲ್ಲಿ ಸಮರ್ಪಕ ಮಳೆ ಆಗಲಿಲ್ಲ. ನಂತರದಲ್ಲಿ ನಿರೀಕ್ಷೆಗೂ ಮೀರಿ ಮಳೆಯಾದ ಕಾರಣ ಉದ್ಯಾನದಲ್ಲಿ ಭಾರಿ ಪ್ರಮಾಣದಲ್ಲಿ ಹುಲ್ಲು ಬೆಳೆದಿದೆ. ಕಾಡಂಚಿನ ಗ್ರಾಮಗಳ ರೈತರು ಅರಣ್ಯದಲ್ಲಿ ಜಾನುವಾರು ಮೇಯಿಸಲು ನಿರ್ಬಂಧ ಇರುವ ಕಾರಣ ಮತ್ತು ಜಿಂಕೆ ಇತರೆ ಸಸ್ಯಹಾರಿ ಪ್ರಾಣಿಗಳು ರಸ್ತೆ ಬದಿಯಲ್ಲಿ ಮತ್ತು ಕಾಡಂಚಿನಲ್ಲಿ ಮೇಯುವುದು ಕಡಿಮೆಯಾದ ಕಾರಣಕ್ಕೆ ಹುಲ್ಲು ಹಾಗೆಯೇ ಇದೆ. ಇದರೊಂದಿಗೆ ಉದ್ಯಾನದ ಶೇ 60ರಷ್ಟು ಭಾಗದಲ್ಲಿ ಲಂಟಾನಾ ವ್ಯಾಪಿಸಿರುವ ಕಾರಣ ಬೆಂಕಿ ಅನಾಹುತ ಸಂಭವಿಸಿದರೆ, ಹಿಂದಿನ ವರ್ಷದಂತೆ ಬೆಂಕಿ ಹತೋಟಿಗೆ ತರುವುದು ಕಷ್ಟವಾಗುತ್ತದೆ. ಹಾಗಾಗಿ ಬೆಂಕಿ ರೇಖೆ ನಿರ್ಮಾಣ ಸೇರಿದಂತೆ ಇತರೆ ಕ್ರಮಗಳಲ್ಲಿ ಅರಣ್ಯ ಇಲಾಖೆ ಮಾರ್ಪಾಟು ಮಾಡಿಕೊಂಡಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ರಾಷ್ಟ್ರೀಯ ಹೆದ್ದಾರಿಗಳ ಎರಡೂ ಬದಿಗಳಲ್ಲಿ ತಲಾ 50 ಮೀಟರ್ ಅಗಲಕ್ಕೆ ಬೆಂಕಿ ರೇಖೆ ನಿರ್ಮಿಸಲಾಗುತ್ತಿದೆ. ಇತರೆ ಸಂಪರ್ಕ ರಸ್ತೆಗಳಲ್ಲಿ 10 ಮೀಟರ್ ಅಗಲಕ್ಕೆ ಬೆಂಕಿ ರೇಖೆ ನಿರ್ಮಿಸಲಾಗುತ್ತಿದೆ. ಅಡ್ಡ ಬೆಂಕಿ ಕೊಡುವುದಕ್ಕೆ ಅನುಕೂಲವಾಗುವಂತೆ ಮತ್ತು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸುಲಭವಾಗಿ ಬೆಂಕಿ ವ್ಯಾಪಿಸುವುದನ್ನು ತಡೆಗಟ್ಟುವ ಸಲುವಾಗಿ ಬೆಂಕಿ ರೇಖೆ ಅಗಲವನ್ನು ಹಿಂದಿನ ವರ್ಷಗಳಿಗಿಂತ ಹೆಚ್ಚಿಸಲಾಗಿದೆ ಎಂದು ವಲಯಾರಣ್ಯಾಧಿಕಾರಿ ನವೀನ್ ಕುಮಾರ್ ತಿಳಿಸಿದರು.
ವರದಿ: ಬಸವರಾಜು ಎಸ್ ಹಂಗಳ