ಗುಂಡ್ಲುಪೇಟೆ: ಕಾಡು ಪ್ರಾಣಿಗಳ ಸಹಜ ಜೀವನಕ್ಕೆ ತೊಂದರೆಯಾಗುತ್ತದೆ ಮತ್ತು ಕೋವಿಡ್-19 ಉದ್ದೇಶದಿಂದ ಡಿ.31 ಮತ್ತು ಜ.1ರಂದು ಬಂಡೀಪುರದಲ್ಲಿ ಪ್ರವಾಸಿಗರಿಗೆ ವಸತಿ ಗೃಹ ನೀಡದಿರಲು ಇಲಾಖೆ ನಿರ್ಧರಿಸಿದೆ.
ಹೊಸ ವರ್ಷಾಚರಣೆಯ ಭರದಲ್ಲಿ ವಸತಿ ಗೃಹದ ಬಳಿ ಸೌಂಡ್ ಮತ್ತು ಮ್ಯೂಸಿಕ್ ಬಳಕೆ ಮಾಡುವುದರಿಂದ ಕಾಡು ಪ್ರಾಣಿಗಳಿಗೆ ತೊಂದರೆಯಾಗುತ್ತಿದೆ ಎಂದು ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈ ಗೊಂಡಿದೆ. ಪ್ರತಿ ವರ್ಷ ಡಿ.31ರಂದು ಮಾತ್ರವೇ ವಸತಿ ನೀಡುತ್ತಿರಲಿಲ್ಲ. ಆದರೆ ಈ ಸಲ ಎರಡು ದಿನಗಳ ಕಾಲ ಪ್ರವಾಸಿಗರಿಗೆ ವಸತಿ ನೀಡಲು ನಿರಾಕರಿಸಿದೆ.
ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಖಾಸಗಿ ವಸತಿ ಗೃಹಗಳು ಮತ್ತು ಹೋಂ ಸ್ಟೇಗಳಲ್ಲಿಯೂ ಸಹ ಶಬ್ದ ಮಾಡಬಾರದು, ಲೈಟಿಂಗ್ಸ್ ಬಳಸಬಾರದು, ಡಿಜೆ ಬಳಸುವಂತಿಲ್ಲ ಎನ್ನುವ ಎಚ್ಚರಿಕೆ ನೀಡಲಾಗಿದೆ. ಡಿ.31 ಮತ್ತು ಜ.1ರಂದು ಎರಡು ದಿನಗಳ ಕಾಲ ವಸತಿ ಗೃಹ ನೀಡಿದ್ದರೂ ಸಹ ಎಂದಿನಂತೆ ಸಫಾರಿ ಕಾರ್ಯ ನಿರ್ವಹಿಸಲಿದೆ. ಇದರ ಪ್ರಯೋಜನವನ್ನು ವಾರಾಂತ್ಯ ಹಾಗೂ ವರ್ಷಾಂತ್ಯದಲ್ಲಿ ಪ್ರವಾಸಿಗರು ಪಡೆಯಬಹುದಾಗಿದೆ.
ಬಂಡೀಪುರದ ಸುತ್ತಮುತ್ತಲಿನ ಕಾಡಂಚಿನ ಪ್ರದೇಶಗಳಲ್ಲಿ ಅಕ್ರಮವಾಗಿ ಹೋಂ ಸ್ಟೇಗಳು ನಿರ್ಮಾಣವಾಗಿ ನಗರ ವಾಸಿಗಳಿಗೆ ಪಾರ್ಟಿ ಸೇರಿದಂತೆ ಇನ್ನೀತರ ಉದ್ದೇಶಗಳಿಗೆ ನೀಡುತ್ತಿದ್ದಾರೆ. ಇವುಗಳಿಗೂ ಕಡಿವಾಣ ಹಾಕಬೇಕಿದೆ ಎಂದು ಪರಿಸರ ಪ್ರೇಮಿ ಜಿ.ಆರ್. ರವಿ ತಿಳಿಸಿದರು.
ಪ್ರಸ್ತುತ ಕ್ಯಾಂಪಸ್‍ನಲ್ಲಿ ಚಿರತೆಗಳು, ಹುಲಿ, ಆನೆಗಳು ಸೇರಿದಂತೆ ವನ್ಯಜೀವಿಗಳ ಸಂಚಾರ ಹೆಚ್ಚಾಗಿದೆ. ಆದ್ದರಿಂದ ಬಂಡೀಪುರಕ್ಕೆ ಬರುವ ಪ್ರತಿ ಪ್ರವಾಸಿಗರಿಗೆ ಮೋಜು ಮಸ್ತಿ ಮಾಡಲು ಅವಕಾಶ ನೀಡುವುದಕ್ಕಿಂತ ಅರಣ್ಯದ ಸೊಬಗು ಹಾಗೂ ಮಹತ್ವದ ಬಗ್ಗೆ ಹೆಚ್ಚಿನ ಅರಿವು ಮೂಡಿಸಲಾಗುತ್ತಿದೆ. ವನ್ಯಜೀವಿಗಳ ಹಾಗೂ ಪ್ರವಾಸಿಗರ ಹಿತ ದೃಷ್ಟಿಯಿಂದ ವರ್ಷಾಚರಣೆಗೆ ತಡೆ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
,*******************
ಹೊಸ ವರ್ಷದ ಆಚರಣೆ ಸಂದರ್ಭದಲ್ಲಿ ಬಂಡೀಪುರದ ವಸತಿ ನೀಡುತ್ತಿಲ್ಲ, ಜೊತೆಗೆ ಖಾಸಗಿ ವಸತಿ ನಿಲಯಗಳಲ್ಲಿ ಸಹ ನಿಯಮಗಳನ್ನು ಪಾಲನೆ ಮಾಡುವಂತೆ ಸೂಚಿಸಲಾಗಿದೆ. ನಿಯಮ ಉಲ್ಲಂಘನೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.ನಟೇಶ್, ಬಂಡೀಪುರ ಹುಲಿ ಯೋಜನೆ ನಿರ್ದೇಶಕ.
**********
ವರದಿ: ಬಸವರಾಜು ಎಸ್ ಹಂಗಳ