ಚಾಮರಾಜನಗರ: ಇದೇ ತಿಂಗಳ ೧೦ರಂದು ಆಚರಿಸಲಾಗುವ ಬಕ್ರೀದ್ ಹಬ್ಬವನ್ನು ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವುದರೊಂದಿಗೆ ಸೌಹಾರ್ಧಯುತವಾಗಿ ಆಚರಿಸುವಂತೆ ಜಿಲ್ಲಾಧಿಕಾರಿಯವರಾದ ಆಗಿರುವ ಚಾರುಲತಾ ಸೋಮಲ್ ಅವರು ಮನವಿ ಮಾಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ನಡೆದ ಸೌಹಾರ್ಧ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಭೆಯ ಆರಂಭದಲ್ಲಿ ಬಕ್ರೀದ್ ಹಬ್ಬದ ಆಚರಣೆ ಕುರಿತು ಮುಸ್ಲಿಂ ಧರ್ಮಗುರುಗಳಿಂದ ಮಾಹಿತಿ ಪಡೆದು ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಪವಿತ್ರ ಬಕ್ರೀದ್ ಹಬ್ಬ ತ್ಯಾಗ, ಬಲಿದಾನದ ಹಬ್ಬವಾಗಿದೆ. ಹಬ್ಬವನ್ನು ಸೌಹಾರ್ಧವಾಗಿ ಆಚರಿಸುವ ಜೊತೆಗೆ ಸರ್ಕಾರ ನಿಗಧಿಪಡಿಸಿದ ನಿರ್ದೇಶನ, ಮಾರ್ಗಸೂಚಿಗಳನ್ನು ಪಾಲಿಸಬೇಕು. ಶಾಂತಿ, ಸೌಹಾರ್ಧತೆಗೆ ಬದ್ಧರಾಗಿ ಎಲ್ಲರೂ ಸಹ ಈ ನೆಲದ ಕಾನೂನನ್ನು ಗೌರವಿಸಬೇಕು ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ತಿಳಿಸಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ.ಎಸ್. ಸುಂದರರಾಜು ಅವರು ಮಾತನಾಡಿ ಬಕ್ರೀದ್ ಹಬ್ಬ ಹಿನ್ನೆಲೆ ಜಿಲ್ಲೆಯ ಎಲ್ಲಾ ಕಡೆ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಸಿಬ್ಬಂದಿ ನಿಯೋಜಿಸಲಾಗಿದೆ. ಹಬ್ಬ ಆಚರಣೆಗೆ ಪಡೆದಿರುವ ಪರವಾನಗಿಯಲ್ಲಿರುವ ಷರತ್ತುಗಳನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಧ್ವನಿವರ್ಧಕಗಳ(ಮೈಕ್)ಗಳಿಂದ ಹೊರಡುವ ಡಿಸಿಬಲ್ ಬಗ್ಗೆ ನಿಗದಿಪಡಿಸಿರುವ ಅಂಶಗಳನ್ನು ಚಾಚುತಪ್ಪದೇ ಪಾಲಿಸಬೇಕು ಎಂದರು.
ಇದೇ ವೇಳೆ ಮಾತನಾಡಿದ ಮದೀನ ಮಸೀದಿ ಕಾರ್ಯದರ್ಶಿ ವಶೀಂ ಪಾಷ ಅವರು ಹಬ್ಬದಂದು ಚಾಮರಾಜನಗರದ ಪಟ್ಟಣದ ಸೋಮವಾರಪೇಟೆಯ ಈದ್ಗಾ ಮೈದಾನ ಹಾಗೂ ಕ್ರೀಡಾಂಗಣದ ಬಳಿ ಪ್ರಾರ್ಥನೆ ಸ್ಥಳ ಹಾಗೂ ಮೆರವಣಿಗೆಗೆ ಸೂಕ್ತ ಬಂದೋಬಸ್ತ್ ಮಾಡಿಕೊಡಬೇಕು. ಪಟ್ಟಣವ್ಯಾಪ್ತಿಯಲ್ಲಿ ಕಸದ ವಿಲೇವಾರಿ, ವಿದ್ಯುತ್ ಸರಬರಾಜು ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡಿಕೊಡಬೇಕೆಂದು ಮನವಿ ಮಾಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಉಪ ವಿಭಾಗಾಧಿಕಾರಿ ಗೀತಾ ಹುಡೇದ, ಪಶುಪಾಲನಾ ಇಲಾಖೆಯ ಉಪನಿರ್ದೇಶಕರಾದ ಡಾ. ಸುರೇಶ್, ಜಿಲ್ಲಾ ನಗರಾಭಿವೃರ್ದಧಿ ಕೋಶದ ಯೋಜನಾ ನಿರ್ದೇಶಕರಾದ ಕೆ. ಸುರೇಶ್, ಪೌರಾಯುಕ್ತರಾದ ಕರಿಬಸವಯ್ಯ, ತಹಶೀಲ್ದಾರ್ ಬಸವರಾಜು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಮುಸ್ಲಿಂ ಧಾರ್ಮಿಕ ಮುಖಂಡರು, ಇತರರು ಸಭೆಯಲ್ಲಿ ಹಾಜರಿದ್ದರು.
